Advertisement

ಅಯೋಧ್ಯೆ ತೀರ್ಪು ನಮ್ಮ ಪರ ಬರುವ ವಿಶ್ವಾಸ: ಮುಸ್ಲಿಂ ಮಂಡಳಿ

10:46 AM Oct 14, 2019 | Team Udayavani |

ಲಕ್ನೋ: ಅಯೋಧ್ಯೆಯ 2.77 ಎಕರೆ ಭೂವಿವಾದ ಪ್ರಕರಣದ ವಿಚಾರಣೆ ಇನ್ನೇನು ಮುಕ್ತಾಯದ ಹಂತಕ್ಕೆ ತಲುಪಿರುವಾಗಲೇ, “ತೀರ್ಪು ಮುಸ್ಲಿಮರ ಪರ ಬರುವ ವಿಶ್ವಾಸವಿದೆ’ ಎಂದು ಅಖೀಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ(ಎಐಎಂಪಿಎಲ್‌ಬಿ) ಹೇಳಿದೆ.

Advertisement

ಶನಿವಾರ ಮಂಡಳಿಯ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಲಾಗಿದೆ. ಈ ಪ್ರಕರಣವು ನಮ್ಮ ದೇಶ ಮಾತ್ರವಲ್ಲ, ಅಂತಾರಾಷ್ಟ್ರೀಯ ಮಟ್ಟದಲ್ಲೂ ಎಲ್ಲರ ಗಮನ ಸೆಳೆದಿದೆ. ಇದು ನಮ್ಮ ಸಂವಿಧಾನದಲ್ಲಿ ಉಲ್ಲೇಖೀಸಲಾಗಿರುವ ಜಾತ್ಯತೀತ ಮೌಲ್ಯಗಳಿಗೆ ಸಂಬಂಧಿಸಿದ ಪ್ರಕರಣವಾಗಿದೆ. ತೀರ್ಪು ನಮ್ಮ ಪರ ಬರುವ ವಿಶ್ವಾಸವಿದೆ ಎಂದು ಸಭೆಯಲ್ಲಿ ಅಭಿಪ್ರಾಯಪಡಲಾಗಿದೆ.

ಅಲ್ಲದೆ, ತ್ರಿವಳಿ ತಲಾಖ್‌ ಕಾನೂನಿನ ಸಾಂವಿಧಾನಿಕ ಮಾನ್ಯತೆಯನ್ನು ಪ್ರಶ್ನಿಸಲು ಕೂಡ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಸಮಾನ ನಾಗರಿಕ ಸಂಹಿತೆ ಜಾರಿ ಮಾಡಲು ಯತ್ನಿಸಿದರೆ, ಅದು ದೇಶದ ವೈವಿಧ್ಯತೆಯಲ್ಲಿ ಏಕತೆ ಎಂಬ ಆಶಯಕ್ಕೆ ಕೊಡಲಿ ಏಟು ನೀಡಿದಂತೆ ಎಂದೂ ಮಂಡಳಿ ಹೇಳಿದೆ.

ಅಸಾಂವಿಧಾನಿಕ ಎನ್‌ಜಿಒ: ಮುಸ್ಲಿಂ ವೈಯಕ್ತಿಕ ಮಂಡಳಿ ಎನ್ನುವುದೇ ಅಸಾಂವಿಧಾನಿಕವಾದ ಎನ್‌ಜಿಒ ಎಂದು ಉತ್ತರಪ್ರದೇಶದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮೊಹ್ಸಿನ್‌ ರಝಾ ಹೇಳಿದ್ದಾರೆ. ಅಲ್ಲದೆ ಮಂಡಳಿಯ ಹಣಕಾಸಿನ ಮೂಲದ ಬಗ್ಗೆಯೂ ನನಗೆ ಅನುಮಾನವಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next