Advertisement

ಸ್ಫೋಟದಲ್ಲಿ ಮಡಿದವರಿಗೆ ಈ ಪ್ರಶಸ್ತಿ ಅರ್ಪಣೆ: ರಶೀದ್‌

07:00 AM May 27, 2018 | Team Udayavani |

ಕೋಲ್ಕತಾ: ಈ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಅಫ್ಘಾನಿಸ್ಥಾನದ ಕ್ರಿಕೆಟ್‌ ಪಂದ್ಯವೊಂದರ ವೇಳೆ ನಡೆದ ಸ್ಫೋಟದಲ್ಲಿ ಮೃತಪಟ್ಟವವರಿಗೆ ಅರ್ಪಿಸುವುದಾಗಿ ರಶೀದ್‌ ಖಾನ್‌ ಹೇಳಿದ್ದಾರೆ.

Advertisement

ಶುಕ್ರವಾರ ರಾತ್ರಿಯ ದ್ವಿತೀಯ ಕ್ವಾಲಿಫೈಯರ್‌ ಪಂದ್ಯದಲ್ಲಿ ಆತಿಥೇಯ ಕೋಲ್ಕತಾ ನೈಟ್‌ರೈಡರ್ ತಂಡವನ್ನು ಅವರದೇ ಈಡನ್‌ ಗಾರ್ಡನ್ಸ್‌ ಅಂಗಳದಲ್ಲಿ ಮಣಿಸುವಲ್ಲಿ ರಶೀದ್‌ ಖಾನ್‌ ಮಹತ್ವದ ಪಾತ್ರ ವಹಿಸಿದ್ದರು. 10 ಎಸೆತಗಳಿಂದ ಅಜೇಯ 34 ರನ್‌, 19 ರನ್ನಿಗೆ 3 ವಿಕೆಟ್‌, 2 ಕ್ಯಾಚ್‌, ಒಂದು ರನೌಟ್‌… ಹೀಗೆ ಸಾಗುತ್ತದೆ ರಶೀದ್‌ ಸಾಹಸಗಾಥೆ.

“ಇಂಥದೊಂದು ಸಾಧನೆ ನನ್ನ ಪಾಲಿಗೆ ಅನಿವಾರ್ಯವಾಗಿತ್ತು. ಎಲ್ಲ ವಿಭಾಗಗಳಲ್ಲೂ ನೂರು ಪ್ರತಿಶತ ಸಾಧನೆ ನೀಡುವುದು ನನ್ನ ಗುರಿ. ನನ್ನ ಸಾಮರ್ಥ್ಯದ ಮೇಲೆ ನಂಬಿಕೆ ಇರಿಸಿಕೊಂಡಿದ್ದರಿಂದ ಇದು ಸಾಧ್ಯವಾಯಿತು. ನನ್ನ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಸ್ಫೋಟದಲ್ಲಿ ಮಡಿದವರಿಗೆ ಅರ್ಪಿಸುತ್ತಿದ್ದೇನೆ’ ಎಂದು ರಶೀದ್‌ ಖಾನ್‌ ಹೇಳಿದರು. ಕಳೆದ ವಾರ ಜಲಾಲಾಬಾದ್‌ನಲ್ಲಿ ನಡೆಯುತ್ತಿದ್ದ ಕ್ರಿಕೆಟ್‌ ಪಂದ್ಯವೊಂದರ ವೇಳೆ ಸ್ಟೇಡಿಯಂನಲ್ಲಿ ಸಂಭವಿಸಿದ ಬಾಂಬ್‌ ಸ್ಫೋಟಕ್ಕೆ 8 ಮಂದಿ ಬಲಿಯಾಗಿದ್ದರು.

“ನನ್ನ ಬ್ಯಾಟಿಂಗ್‌ ಖುಷಿ ಕೊಟ್ಟಿದೆ. ಡೆತ್‌ ಓವರ್‌ಗಳಲ್ಲಿ ಇಂಥದೊಂದು ಬಿರುಸಿನ ಆಟ ಅನಿವಾರ್ಯವಾಗಿತ್ತು. ನಾನು ಬ್ಯಾಟ್ಸ್‌ಮನ್‌ ಆಗಿಯೇ ಕ್ರಿಕೆಟ್‌ ಬದುಕು ಆರಂಭಿಸಿದ್ದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ನನ್ನ ಫೀಲ್ಡಿಂಗ್‌ನಲ್ಲಿ ಬಹಳಷ್ಟು ಸುಧಾರಣೆ ಆಗಿದೆ. ಬ್ಯಾಟ್‌, ಬಾಲ್‌ನಲ್ಲಿ ಕೊಡುಗೆ ಸಲ್ಲಿಸದ ವೇಳೆ ಕ್ಷೇತ್ರರಕ್ಷಣೆಯತ್ತ ನಾನು ಹೆಚ್ಚಿನ ಗಮನ ಹರಿಸುತ್ತೇನೆ. ಆಧುನಿಕ ಕ್ರಿಕೆಟ್‌ನಲ್ಲಿ ಫೀಲ್ಡಿಂಗಿಗೆ ವಿಶೇಷ ಮಹತ್ವವಿದೆ’  ಎಂಬುದಾಗಿ ಹೇಳಿದರು.

ಮೊದಲು ಬ್ಯಾಟಿಂಗ್‌ ನಡೆಸಿದ ಹೈದರಾಬಾದ್‌ 7 ವಿಕೆಟಿಗೆ 174 ರನ್‌ ಪೇರಿಸಿದರೆ, ಕೆಕೆಆರ್‌ 9 ವಿಕೆಟಿಗೆ 160 ರನ್‌ ಮಾಡಿ 14 ರನ್ನುಗಳಿಂದ ಶರಣಾಯಿತು. ಕೆಕೆಆರ್‌ ಇನ್ನಿಂಗ್ಸ್‌ ಕೊನೆಯಲ್ಲಿ ಕುಲದೀಪ್‌ ಯಾದವ್‌ ಒಂದು ರನ್‌ ಮಾಡಿದ್ದಾಗಿ ಸ್ಕೋರ್‌ಪಟ್ಟಿಯಲ್ಲಿ ನಮೂದಿಸಲಾಗಿತ್ತು. ಆದರೆ ಯಾದವ್‌ ಖಾತೆ ತೆರೆದಿರಲಿಲ್ಲ. ಹೀಗಾಗಿ ಕೆಕೆಆರ್‌ ಸ್ಕೋರ್‌ 161 ರನ್ನಿನಿಂದ 160ಕ್ಕೆ ಇಳಿದಿತ್ತು.

Advertisement

ಫೈಟಿಂಗ್‌ ಸ್ಪಿರಿಟ್‌: ಕೇನ್‌ ಖುಷಿ
ಇದು ತಂಡದ ನಿಜವಾದ ಫೈಟಿಂಗ್‌ ಸ್ಪಿರಿಟ್‌ಗೆ ಸಾಕ್ಷಿಯಾದ ಪಂದ್ಯ ಎಂಬುದು ಹೈದರಾಬಾದ್‌ ಕಪ್ತಾನ ಕೇನ್‌ ವಿಲಿಯಮ್ಸನ್‌ ಅವರ ಅಭಿಪ್ರಾಯ.

“ಆರಂಭದಲ್ಲಿ ನಾವು ಜಾರುತ್ತ ಸಾಗಿದ್ದೆವು. ಆದರೆ ಅನಂತರ ದೊಡ್ಡ ವಿಕೆಟ್‌ಗಳನ್ನು ಬೇಟೆಯಾಡಿ ಪಂದ್ಯಕ್ಕೆ ಮರಳಿದ ರೀತಿ ಅಮೋಘ. ರಶೀದ್‌ ಖಾನ್‌ ಅದ್ಭುತ ಸಾಹಸಗೈದರು. ಅವರ ಮೆರೆದಾಟಕ್ಕೆ ಇನ್ನೂ ಒಂದು ಪಂದ್ಯ ಬಾಕಿ ಇದೆ. ಫೈನಲ್‌ ತಲುಪಿದ್ದೊಂದು ರೋಮಾಂಚನ ಅನುಭವ. ತಂಡವಾಗಿ ಕೊನೆಯ ಹಂತದ ತನಕ ಹೋರಾಟ ನಡೆಸಿ ಈ ಗೆಲುವನ್ನು ಒಲಿಸಿಕೊಂಡಿದ್ದೇವೆ. ನಮ್ಮ ಗಮನವೆಲ್ಲ ರವಿವಾರದ ಫೈನಲ್‌ನತ್ತ ಕೇಂದ್ರೀಕೃತಗೊಂಡಿದೆ. ಇಂಥದೊಂದು ಪ್ರದರ್ಶನ ಅಲ್ಲಿಯೂ ಮುಂದುವರಿಯಲಿದೆ’ ಎಂಬುದಾಗಿ ವಿಲಿಯಮ್ಸನ್‌ ವಿಶ್ವಾಸ ವ್ಯಕ್ತಪಡಿಸಿದರು.

ಅರಗಿಸಲಾಗುತ್ತಿಲ್ಲ: ಕಾರ್ತಿಕ್‌
ಇನ್ನೊಂದೆಡೆ ತೀವ್ರ ನಿರಾಸೆಯಲ್ಲಿದ್ದ ಕೆಕೆಆರ್‌ ಕಪ್ತಾನ ದಿನೇಶ್‌ ಕಾರ್ತಿಕ್‌ “ಈ ಸೋಲನ್ನು ಅರಗಿಸಿಕೊಳ್ಳಲಾಗುತ್ತಿಲ್ಲ’ ಎಂದು ನೋವಿನಿಂದ ನುಡಿದಿದ್ದಾರೆ.

“ಕೂಟದುದ್ದಕ್ಕೂ ಉತ್ತಮ ಪ್ರದರ್ಶನ ಕಾಯ್ದುಕೊಂಡು ಬಂದೆವು. ಆದರೆ ತವರಿನಂಗಳದಲ್ಲೇ ಸೋತದ್ದು ಹೆಚ್ಚು ನೋವುಂಟು ಮಾಡಿದೆ. 10ನೇ ಓವರ್‌ ತನಕ ಪಂದ್ಯ ನಮ್ಮ ಕೈಯಲ್ಲೇ ಇತ್ತು. ಕ್ರಿಸ್‌ ಲಿನ್‌ ಉತ್ತಮ ಲಯದಲ್ಲಿದ್ದರು. ಆದರೆ ಉತ್ತಪ್ಪ, ನಾನು ವಿಫ‌ಲರಾದ್ದರಿಂದ ತಂಡಕ್ಕೆ ಹೊಡೆತ ಬಿತ್ತು…’ ಎಂದು ಕಾರ್ತಿಕ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next