Advertisement

ಪ್ರಶಸ್ತಿ ನೈಜ ಹೋರಾಟಗಾರರಿಗೆ ಸಿಗಲಿ

11:47 AM May 21, 2019 | Suhan S |

ದಾವಣಗೆರೆ: ಶೋಷಿತರು, ದಮನಿತರು, ಜನಪರ ಚಳವಳಿ ನಡೆಸಿದ ನೈಜ ಹೋರಾಟಗಾರರನ್ನು ಗುರುತಿಸಿ, ಅವರಿಗೆ ಪ್ರಶಸ್ತಿ ಕೊಡುವ ಕೆಲಸ ಆಗಬೇಕಿದೆ ಎಂದು ವಿರಕ್ತ ಮಠದ ಶ್ರೀಬಸವಪ್ರಭು ಹೇಳಿದ್ದಾರೆ.

Advertisement

ಸೋಮವಾರ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ 87ನೇ ಜನ್ಮದಿನದ ಅಂಗವಾಗಿ ನಗರದ ಶ್ರೀ ಎಚ್.ಡಿ. ದೇವೇಗೌಡ ಪ್ರತಿಷ್ಠಾನದಿಂದ ಚಿತ್ರದುರ್ಗದ ಎಂ. ಜಯಣ್ಣನವರಿಗೆ ಕೊಡಮಾಡಿದ ಶ್ರೀ ಎಚ್.ಡಿ. ದೇವೇಗೌಡ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ದೇಶದಲ್ಲಿ ವಿಭಿನ್ನ ಹೋರಾಟ ನಡೆದಿವೆ. ಸಾಮ್ರಾಜ್ಯ ವಿಸ್ತರಿಸಲು ರಾಜ-ಮಹಾರಾಜರು ಖಡ್ಗ ಹಿಡಿದು ಹೋರಾಟ ಮಾಡಿದರೆ, ಈಗ ಬಂದೂಕಿನಿಂದ ಹೋರಾಟ ಮಾಡುತ್ತಿದ್ದಾರೆ. ಆದರೆ, ವೈಚಾರಿಕ ಖಡ್ಗದಿಂದ ಹೋರಾಟ ಮಾಡಿದವರನ್ನು ಸಮಾಜ ಎಂದೂ ಮರೆಯುವುದಿಲ್ಲ. ಅಂತಹ ಹೋರಾಟಗಾರರು ಇತಿಹಾಸದ ಪುಟ ಸೇರುತ್ತಾರೆ ಎಂದರು.

ಸಾವಿರಾರು ಕೋಟಿ ಗಳಿಸಿದ ವ್ಯಕ್ತಿ ಜನ ಮಾನಸದಲ್ಲಿ ಉಳಿಯುವುದಿಲ್ಲ. ಆದರೆ, ಜನಮುಖೀ ಹೋರಾಟಗಾರ ಇತಿಹಾಸದ ಪುಟದಲ್ಲಿ ದಾಖಲಾಗುತ್ತಾನೆ. ಆ ನಿಟ್ಟಿನಲ್ಲಿ 12ನೇ ಶತಮಾನದಲ್ಲಿ ಬಸವಣ್ಣ, 21ನೇ ಶತಮಾನದಲ್ಲಿ ಡಾ|ಬಿ.ಆರ್‌.ಅಂಬೇಡ್ಕರ್‌ ಸಾಗಿದವರು. ಅವರು ಸಮ ಸಮಾಜದ ನಿರ್ಮಾಣದ ಆಲೋಚನೆಯಿಂದ ಹೋರಾಟ ಮಾಡಿದವರು. ಹಾಗಾಗಿಯೇ ಅವರ ಆದರ್ಶ, ಚಿಂತನೆ ಇಂದಿಗೂ ಎಲ್ಲರೂ ಸ್ಮರಿಸುವಂತಾಗಿದೆ ಎಂದು ಹೇಳಿದರು.

ಜಾತೀಯತೆ, ಶೋಷಿತರು, ಬಡವರ ಪರವಾಗಿ ಹೋರಾಟ ಮಾಡಿದ, ಸಮಾಜದ ಬಗ್ಗೆ ನೈಜ ಕಳಕಳಿಯುಳ್ಳ ಹೋರಾಟಗಾರರನ್ನು ಗುರುತಿಸಿ, ಪ್ರಶಸ್ತಿ ನೀಡಬೇಕಿದೆ. ಆ ನಿಟ್ಟಿನಲ್ಲಿ ಶ್ರೀ ದೇವೇಗೌಡ ಪ್ರತಿಷ್ಠಾನ ಹೋರಾಟಗಾರ ಎಂ.ಜಯಣ್ಣನವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಅತ್ಯಂತ ಸೂಕ್ತವಾಗಿದೆ ಎಂದು ಹೇಳಿದರು.

ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿ, 1974ರಲ್ಲಿ ಪ್ರೊ| ಬಿ.ಕೃಷ್ಣಪ್ಪನವರು ಆರಂಭಿಸಿದ ಚಳವಳಿಗಳಲ್ಲಿ ಎಂ.ಜಯಣ್ಣನವರ ಪಾತ್ರ ಬಹು ದೊಡ್ಡದು. 4 ದಶಕಗಳ ಕಾಲ ಜಯಣ್ಣ ಸತತವಾಗಿ ಹೋರಾಟಗಳಲ್ಲಿ ಭಾಗವಹಿಸುತ್ತಾ ಬಂದಿದ್ದಾರೆ. ಅವರಿಗೆ ಎಂದೋ ಸ್ಥಾನಮಾನ ಸಿಗಬೇಕಿತ್ತು. ಆದರೆ, ಪ್ರಸ್ತುತ ಹೋರಾಟಗಾರರನ್ನು ಜನರು ಅನುಮಾನದಿಂದ ನೋಡುತ್ತಿದ್ದಾರೆ. ಅವರನ್ನು ಚುನಾವಣೆಯಲ್ಲಿ ಸೋಲಿಸುತ್ತಿದ್ದಾರೆ. ಈ ಹಿಂದೆ ಡಾ| ಬಿ.ಆರ್‌. ಅಂಬೇಡ್ಕರರನ್ನೇ ಸೋಲಿಸಿದರು. ನಾಲ್ಕು ದಶಕಗಳ ಕಾಲ ಹೋರಾಟ ಮಾಡಿದ ನನ್ನನ್ನೂ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪರಾಭವಗೊಳಿಸಿದರು. ಹೋರಾಟಗಾರರನ್ನು ಸೋಲಿಸುವ ಕೆಟ್ಟ ವ್ಯವಸ್ಥೆ ಸಮಾಜದಲ್ಲಿ ಸೃಷ್ಟಿಯಾಗಿದೆ ಎಂದು ಹೇಳಿದರು.

Advertisement

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕರಪ್ಪ ಮಾತನಾಡಿ, ದಲಿತರ ಬೆಳವಣಿಗೆಗೆ ಅಡ್ಡಿ ಮಾಡುವ ಕೆಲಸ ಹಿಂದಿನಿಂದಲೂ ನಡೆಯುತ್ತಿದೆ. ಎನೇಲ್ಲಾ ಚಳವಳಿ, ಹೋರಾಟ ಮಾಡಿದ್ದರೂ ದಲಿತರ ಉದ್ಧಾರ ಎಷ್ಟರ ಮಟ್ಟಿಗೆ ಆಗಿದೆ ಎಂಬುದನ್ನು ಯೋಚಿಸಬೇಕಿದೆ. ಈ ಹಿಂದೆ ದಲಿತರ ಹಿತಕ್ಕಾಗಿ ಸದಾ ಚಿಂತಿಸುತ್ತಿದ್ದ ಬಿ.ಬಸವಲಿಂಗಪ್ಪನವರು ಮುಖ್ಯಮಂತ್ರಿಯಾಗಬೇಕಿತ್ತು. ಆದರೆ, ದಲಿತ ವಿರೋಧಿಗಳು ಅವರಿಗೆ ಆ ಸ್ಥಾನ ಸಿಗದಂತೆ ಮಾಡಿದರು. ಹೋರಾಟದಿಂದಲೇ ಸ್ಥಾನಮಾನ ಗಳಿಸಬೇಕಿದೆ. ದೇವೇಗೌಡ ಪ್ರಶಸ್ತಿಯನ್ನು ಹೋರಾಟಗಾರ ಎಂ.ಜಯಣ್ಣನವರಿಗೆ ನೀಡಿರುವುದು ಸಮಂಜಸವಾಗಿದೆ ಎಂದರು.

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಅಧ್ಯಕ್ಷ ಜೆ.ಅಮಾನುಲ್ಲಾ ಖಾನ್‌, ಮೌಲಾನ ಇಬ್ರಾಹಿಂ ಸಖಾಫಿ, ಎಂ.ಜಯಣ್ಣನವರ ಹೋರಾಟದ ಬಗ್ಗೆ ಮಾತನಾಡಿದರು.

ಚಿತ್ರದುರ್ಗದ ಡಾ| ಶಿವಲಿಂಗಪ್ಪ, ಎಂ.ಜಯಣ್ಣನ ಹೋರಾಟದ ಬದುಕಿನ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿದರಲ್ಲದೆ, ಇಂತಹ ಹೋರಾಟಗಾರನನ್ನು ಸರ್ಕಾರ ವಿಧಾನ ಪರಿಷತ್‌ಗೆ ನಾಮನಿರ್ದೇಶನ ಮಾಡಬೇಕಿದೆ ಎಂದರು.

ಪ್ರಶಸ್ತಿಗೆ ಭಾಜನರಾದ ಎಂ.ಜಯಣ್ಣ, ಜೆಡಿಎಸ್‌ ಮುಖಂಡ ಎಂ.ಆನಂದ್‌, ಎಸ್‌.ಸಂಗೇಗೌಡ, ಜಿಪಂ ಸದಸ್ಯ ಕೆ.ಎಸ್‌.ಬಸವಂತಪ್ಪ, ಸಿ. ಅಂಜಿನಪ್ಪ ಕಡತಿ, ಚಿತ್ರುದುರ್ಗದ ಟಿಪ್ಪು ಖಾಸಿಂ ಅಲಿ, ಮುರುಘರಾಜೇಂದ್ರ ಒಡೆಯರ್‌, ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಶಿವಮೊಗ್ಗದ ಗುರುಮೂರ್ತಿ, ಇತರರು ವೇದಿಕೆಯಲ್ಲಿದ್ದರು.

ಮಳಲಕೆರೆ ಪ್ರಕಾಶ್‌ ಸ್ವಾಗತಿಸಿದರು. ಶ್ರೀದೇವೇಗೌಡ ಪ್ರತಿಷ್ಠಾನದ ಅಧ್ಯಕ್ಷ ಎಚ್.ಸಿ.ಗುಡ್ಡಪ್ಪ ಪ್ರಸ್ತಾವಿಕವಾಗಿ ಮಾತನಾಡಿದರು. ಪ್ರತಿಷ್ಠಾನದ ಕಾರ್ಯದರ್ಶಿ ಅನೀಶ್‌ ಪಾಶ ಪ್ರಶಸ್ತಿ ಪತ್ರ ವಾಚಿಸಿದರು.

ಇದೇ ಸಂದರ್ಭದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಮೂರು ಜೋಡಿಗಳಿಗೆ ಗಣ್ಯರು ಶುಭ ಕೋರಿದರು.

Advertisement

Udayavani is now on Telegram. Click here to join our channel and stay updated with the latest news.

Next