ಒಂದು ಆತ್ಮಕಥೆ…!
-ಇದು ಯಾವುದೋ ಪುಸ್ತಕದ ವಿಷಯವಲ್ಲ. ಬದಲಾಗಿ ಚಿತ್ರದ ವಿಷಯ. ಹೌದು, “ಕಾಣದಂತೆ ಮಾಯವಾದನು’ ಇದೀಗ ಬಿಡುಗಡೆಗೆ ಸಜ್ಜಾಗಿದೆ. ಮೂರು ವರ್ಷಗಳ ಹಿಂದೆ ಶುರುವಾಗಿದ್ದ ಈ ಚಿತ್ರ ಜನವರಿ 31 ರಂದು ಬಿಡುಗಡೆಯಾಗುತ್ತಿದೆ. ಇದು ಫ್ಯಾಂಟಸಿ ಸಿನಿಮಾ. ಆ್ಯಕ್ಷನ್, ಕಾಮಿಡಿ ಮತ್ತು ಲವ್ ಒಳಗೊಂಡ ಹೊಸಬಗೆಯ ಚಿತ್ರ ಎಂಬುದು ನಿರ್ದೇಶಕ ರಾಜ್ ಪತ್ತಿಪಾಟಿ ಮಾತು. ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ರಾಜ್ ಪತ್ತಿಪಾಟಿ ಅವರಿಗೆ ಇದು ಹೊಸ ಅನುಭವ.
ಕಥೆ ಕುರಿತು ಹೇಳುವ ಅವರು, ಚಿತ್ರದ ನಾಯಕ ರಮ್ಮಿ ಆರಂಭದಲ್ಲೇ ಕೊಲೆಯಾಗುತ್ತಾನೆ. ಆತನ ಪ್ರಾಣ ಹೋದರೂ ಆತ್ಮ ಮಾತ್ರ ಅಲ್ಲಿಯೇ ಇರುತ್ತದೆ. ಎಲ್ಲಾ ಚಿತ್ರದಲ್ಲಿ ಆತ್ಮಕ್ಕೆ ಪವರ್ ಇದ್ದೇ ಇರುತ್ತೆ. ಇಲ್ಲಿರುವ ಆತ್ಮಕ್ಕೂ ಪವರ್ ಇದೆಯಾದರೂ, ತಾನು ಮಾಡಬೇಕಾದ ಕೆಲಸವನ್ನೆಲ್ಲಾ ಅದು ಮುಗಿಸುವುದರ ಜೊತೆಗೆ ತನ್ನನ್ನು ಕೊಲೆ ಮಾಡಿದವರ ಮೇಲೆ ಸೇಡು ತೀರಿಸಿಕೊಳ್ಳೋದು ಕಥೆ. ಆ ಆತ್ಮಕ್ಕೂ ಒಂದು ಫ್ಲ್ಯಾಶ್‌ಬ್ಯಾಕ್ ಲವ್‌ಸ್ಟೋರಿ ಇದೆ. ಚಿತ್ರದಲ್ಲಿ ವಿಕಾಸ್ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ “ಜಯಮ್ಮನ ಮಗ’ ಚಿತ್ರ ನಿರ್ದೇಶಿಸಿದ್ದ ವಿಕಾಸ್ ಈ ಮೂಲಕ ಹೀರೋ ಆಗಿದ್ದಾರೆ.
ಇನ್ನು, ಚಿತ್ರದಲ್ಲಿ ವಿಕಾಸ್‌ಗೆ ಸಿಂಧೂಲೋಕನಾಥ್ ನಾಯಕಿಯಾಗಿದ್ದಾರೆ. ಅವರಿಲ್ಲಿ ಎನ್‌ಜಿಓ ಒಂದರಲ್ಲಿ ಕೆಲಸ ಮಾಡುವ ಪಾತ್ರ ಮಾಡಿದ್ದು, ನಿರ್ಗತಿಕರಿಗೆ ಕೈಲಾದಷ್ಟು ಸೇವೆ ಮಾಡುವ ಪಾತ್ರದಲ್ಲಿ ನಟಿಸಿದ್ದಾರೆ. ಅಚ್ಯುತಕುಮಾರ್ ಇಲ್ಲಿ ಆತ್ಮವಾಗಿ ಕಾಣಿಸಿಕೊಂಡಿದ್ದಾರೆ. ಇನ್ನು, ಖಳನಟ ಉದಯ್ ನಿಧನ ಬಳಿಕ ಆ ಪಾತ್ರಕ್ಕೆ “ಭಜರಂಗಿ’ ಲೋಕಿ ಬಣ್ಣ ಹಚ್ಚಿದ್ದು, ಆ ಪಾತ್ರ ವಿರಾಮದ ನಂತರ ಬರಲಿದೆ. ಧರ್ಮೇಂದ್ರ ಇಲ್ಲಿ ಟ್ರಕ್ ಚಾಲಕನಾಗಿ ನಟಿಸಿದ್ದು, ಆಕಸ್ಮಿಕವಾಗಿ ಹಣ ಸಿಗುತ್ತದೆ. ಆ ಹಣ ಎಲ್ಲಿಂದ ಬಂತು ಎಂದು ತಿಳಿಯುವಷ್ಟರಲ್ಲೆ ಒಂದಷ್ಟು ಸಮಸ್ಯೆಗೆ ಸಿಲುಕುತ್ತಾರೆ. ಅಲ್ಲಿಂದ ತಪ್ಪಿಸಿಕೊಂಡು ಹೊರಬರುವ ಪಾತ್ರ ಅವರದು. ಸೀತಾಕೋಟೆ ತಾಯಿಯಾಗಿ ನಟಿಸಿದ್ದಾರೆ.
ಗುಮ್ಮಿನೇನಿ ವಿಜಯ್ ನಾಲ್ಕು ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಸುಜ್ಞಾನ್‌ಮೂರ್ತಿ ಛಾಯಾಗ್ರಹಣವಿದೆ. ಸುರೇಶ್ ಆರ್ಮುಗನ್ ಸಂಕಲನವಿದೆ. ವಿನೋದ್ ಸಾಹಸ ನಿರ್ದೇಶನ ಮಾಡಿದ್ದಾರೆ. ನಿರ್ದೇಶಕರ ತಂದೆ ಚಂದ್ರಶೇಖರ್ ನಾಯ್ಡು ಅವರ ಜೊತೆ ಸೋಮ್‌ಸಿಂಗ್,ಪುಷ್ಪ ಸೋಮ್‌ಸಿಂಗ್ ಚಿತ್ರ ನಿರ್ಮಿಸಿದ್ದಾರೆ. ಇದೇ ಚಿತ್ರವನ್ನು ತೆಲುಗು, ತಮಿಳು ಭಾಷೆಯಲ್ಲಿ ನಿರ್ಮಾಣ ಮಾಡುವ ನಿರ್ಮಾಪಕರಿಗೆ ಹಿಂದಿ ಭಾಷೆಗೆ ಬೇಡಿಕೆ ಬಂದಿದೆಯಂತೆ. ಅದೇನೆ ಇರಲಿ, “ಕಾಣದಂತೆ ಮಾಯವಾದನು’ ಬಿಡುಗಡೆ ಆಗುತ್ತಿದ್ದು, ನೋಡುಗರಿಗೆ ಒಂದು ಹೊಸ ಫೀಲ್ ಕೊಡಲಿದೆ ಎಂಬುದು ತಂಡದ ಮಾತು.