Advertisement

ಅಧಿಕಾರಿಗಳು ರಾಜಕಾರಣ ಮಾಡಬೇಡಿ

07:28 AM Feb 23, 2019 | Team Udayavani |

ಮಧುಗಿರಿ: ತಾಲೂಕಿನ ಅಧಿಕಾರಿಗಳು ರಾಜಕಾರಣ ಮಾಡಬಾರದು. ಅಭಿವೃದ್ಧಿ ದೃಷ್ಟಿಯಿಂದ ಸರ್ವರನ್ನು ಸಮಾನತೆಯಿಂದ ಕಾಣಬೇಕು ಎಂದು ತಾಪಂ ಅಧ್ಯಕ್ಷೆ ಇಂದಿರಾ ದೇನಾನಾಯ್ಕ ಸಲಹೆ ನೀಡಿದರು. ಪಟ್ಟಣದ ತಾಪಂ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹಲವು ಇಲಾಖೆಯಿಂದಲೇ ಈ ರಾಜಕಾರಣ ಶುರುವಾಗಿದೆ. ಆದರೆ, ಇದರಿಂದ ಜನಪ್ರತಿನಿಧಿಗಳ ಹಕ್ಕನ್ನು ಕಸಿದಂತೆ ಆಗುತ್ತದೆ ಎಂದರು.

Advertisement

ರಾಜಕಾರಣ ನುಸಳದಿರಲಿ: ಮಾಜಿ ಶಾಸಕ ರಾಜಣ್ಣನವರ ಕಾಲದ ಕಾಮಗಾರಿಗಳನ್ನು ಈಗ ಜೆಡಿಎಸ್‌ನವರು ಮಾಡುತ್ತಿದ್ದಾರೆ. ಅದಕ್ಕೆ ನಮ್ಮ ಆಕ್ಷೇಪವೇನು ಇಲ್ಲ. ಆದರೆ, ಕುಡಿಯುವ ನೀರಿನ ಘಟಕಗಳಲ್ಲಿ ಕೆಲವೊಂದು ರಾಜಕಾರಣ ನುಸುಳುತ್ತಿದೆ. ಇದು ನಿಲ್ಲಿಸಬೇಕೆಂದು ಸೂಚಿಸಿದರು. ಅಧ್ಯಕ್ಷರ ಈ ಆರೋಪಕ್ಕೆ ಪ್ರತಿಕ್ರಿಯಿಸಿದ ಕುಡಿಯುವ ನೀರು ಸರಬರಾಜು ಇಲಾಖೆ ಎಇಇ ಹೊನ್ನೇಶಪ್ಪ, ಅಧ್ಯಕ್ಷರು ಹೇಳಿದಂತೆ ಕುಡಿಯುವ ನೀರಿನ ವಿಚಾರದಲ್ಲಿ ಯಾವ ಅಧಿಕಾರಿಗಳು ರಾಜಕೀಯ ಮಾಡುತ್ತಿಲ್ಲ ಎಂದರು. 

ದೂರು ನೀಡಿ: ಕೃಷಿ ಇಲಾಖೆಯಲ್ಲೂ ನಮಗೆ ಸ್ಪಂದನೆ ಸಿಗುತ್ತಿಲ್ಲ ಎಂದು ಮಿಡಿಗೇಶಿ ಸದಸ್ಯೆ ಯಶೋಧಮ್ಮ ಆರೋಪಿಸಿದಾಗ ಪ್ರತಿಕ್ರಿಯಿಸಿದ ಕೃಷಿ ಸಹಾಯಕ ನಿರ್ದೇಶಕ ಹನುಮಂತರಾಯಪ್ಪ, ಹಿಂದಿನ ಅವಧಿಯಲ್ಲಿ ಅಂಥ ಯಾವುದೇ ಭ್ರಷ್ಟಾಚಾರ ನಡೆಸಿದ್ದರೂ ನಮಗೆ ದೂರು ನೀಡಿ. ನನ್ನ ಅವಧಿಯಲ್ಲಿ ಅಂಥ ಯಾವುದೇ ಕಾರ್ಯಗಳಿಗೆ ಆಸ್ಪದ ನೀಡಿಲ್ಲ ಎಂದರು. 

ಅಧಿಕಾರಿಗಳ ಅಸಮಾಧಾನ: ಸಭೆಯಲ್ಲಿ ಅಧಿಕಾರಿಗಳು ಗೊಂದಲಕ್ಕೆ ಒಳಗಾದಂತೆ ಕಂಡು ಬಂದಿದ್ದು, ಕವಿ ಸರ್ವಜ್ಞ ಜಯಂತಿಗೂ ಹೋಗದೆ ತಾಪಂ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿದ್ದರೂ ಈ ರಾಜಕಾರಣದ ಆರೋಪ ಬಂದಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಅಧ್ಯಕ್ಷರು ಹೇಳುವಂತೆ ಯಾವುದೇ ರಾಜಕಾರಣ ಇಲಾಖೆಗಳಲ್ಲಿ ಮಾಡುತ್ತಿಲ್ಲ. ಆದರೆ, ಅಧ್ಯಕ್ಷರಿಗೆ ಹಲವರು ಇಲ್ಲಸಲ್ಲದ ವಿಚಾರ ಹೇಳುತ್ತಿದ್ದು, ಈ ಗೊಂದಲಕ್ಕೆ ಕಾರಣವಾಗಿದೆ ಎಂದು ಹೆಸರು ಹೇಳಲಿಚ್ಛಿಸದ ಆಧಿಕಾರಿ ಸ್ಪಷ್ಟಪಡಿಸಿದರು. 

ತಾಲೂಕಿಗೆ ಎತ್ತಿನಹೊಳೆ ಯೋಜನೆ ಶೀಘ್ರವಾಗಿ ಅನುಷ್ಠಾನಕ್ಕೆ ಬರಲು ಅಗತ್ಯ ಕ್ರಮ ಕೈಗೊಳ್ಳಲು ಇಲಾಖೆ ಜೆಇ ವಿಜಯಪ್ರಸಾದ್‌ ರವರಿಗೆ ಸೂಚಿಸಲಾಯಿತು. ತಾಪಂಗೆ ನೂತನವಾಗಿ ಸ್ಥಾಯಿ ಸಮಿತಿ ಅಧ್ಯಕ್ಷರನ್ನಾಗಿ ಗರಣಿ ಸದಸ್ಯ ಕೆ.ಎ.ರಾಜುರವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ತಾಪಂ ಇಒ ನಂದಿನಿ, ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ರಾಮಣ್ಣ, ವ್ಯವಸ್ಥಾಪಕ ದೊಡ್ಡಸಿದ್ದಪ್ಪ ಹಾಗೂ ಸದಸ್ಯರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next