ಬೆಂಗಳೂರು: ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೋ ಪ್ರಕರಣಕ್ಕೆ ಸಂಬಂಧಿಸಿ ವಕೀಲ ಮತ್ತು ಬಿಜೆಪಿ ಮುಖಂಡ ದೇವರಾಜೇಗೌಡ ಪತ್ರಕರ್ತರೊಬ್ಬರೊಂದಿಗೆ ನಡೆಸಿದ ಫೋನ್ ಸಂಭಾಷಣೆಯ ತುಣುಕೊಂದನ್ನು ಕೆಪಿಸಿಸಿ ಶುಕ್ರವಾರ ಸಾಮಾಜಿಕ ಜಾಲತಾಣ “ಎಕ್ಸ್’ನಲ್ಲಿ ಬಹಿರಂಗ ಮಾಡಿದ್ದು, ಈ ಮೂಲಕ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ.
ಮೂರೂವರೆ ನಿಮಿಷಗಳ ಆಡಿಯೋದಲ್ಲಿ ಕೇಳಿಬರುವ ಧ್ವನಿಗಳು ದೇವರಾಜೇಗೌಡ ಎಂಬ ವ್ಯಕ್ತಿ ಹಾಗೂ ಮಾಧ್ಯಮ ಸಂಸ್ಥೆಯೊಂದರ ಪ್ರತಿನಿಧಿ ಯದ್ದು ಎನ್ನಲಾಗಿದೆ. ಸಂಭಾಷಣೆಯಲ್ಲಿ ನಾನು ಬಿಜೆಪಿ ಹೈಕಮಾಂಡ್ ನಿಯಂತ್ರಣದಲ್ಲಿದ್ದೇನೆ. ಅವರ ನಿರ್ದೇಶನದ ಮೇರೆಗೆ ಸುದ್ದಿಗೋಷ್ಠಿ ನಡೆಸಿದ್ದೇನೆ. ದೊಡ್ಡವರು ನನ್ನನ್ನು ಕರೆದು ಸಭೆ ನಡೆಸಿದರು.
ಪ್ರಕರಣವನ್ನು ಸಿಬಿಐಗೆ ರವಾನಿಸಲು ಪ್ರಯತ್ನ ನಡೆಯುತ್ತಿದೆ. ಮುಂದಿನ 8-10 ದಿನಗಳಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಬಂಧನ ಸಾಧ್ಯತೆ ಇದೆ ಎಂದುಉಲ್ಲೇಖಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಈಚೆಗೆ ದೇವರಾಜೇಗೌಡ ಸುದ್ದಿಗೋಷ್ಠಿ ನಡೆಸಿ, ಡಿಸಿಎಂ ಡಿ.ಕೆ. ಶಿವಕುಮಾರ್ ಮತ್ತು ತಮ್ಮ ನಡುವಿನ ಸಂಭಾಷಣೆ ಬಗ್ಗೆ ಉಲ್ಲೇಖಿಸಿದ್ದರು. ಇದರ ಬೆನ್ನಲ್ಲೇ ಕೆಪಿಸಿಸಿಯಿಂದ ಫೋನ್ ಕರೆಯ ಸಂಭಾಷಣೆ ಬೆಳಕಿಗೆಬಂದಿದೆ. ಇದನ್ನು ಅಪ್‌ಲೋಡ್ ಮಾಡಿರುವ ಕೆಪಿಸಿಸಿ, ಒಂದೇ ಏಟಿನಲ್ಲಿ ಜೆಡಿಎಸ್ ಅನ್ನು ಮುಳುಗಿಸುವುದರ ಜತೆಗೆ ಕಾಂಗ್ರೆಸ್ ನಾಯಕರನ್ನೂ ಗುರಿ ಮಾಡುವ ಮಹಾ ಕುತಂತ್ರ ಅಮಿತ್ ಶಾ ಅವರದ್ದಾಗಿದೆ. ಆದರೆ ಕಾಂಗ್ರೆಸ್ ನಾಯಕರ ಕೂದಲು ಕೊಂಕಿಸಲೂ ಸಾಧ್ಯವಿಲ್ಲ ಎಂಬುದನ್ನು ಅರ್ಥ ಮಾಡಿಕೊಂಡರೆ ಒಳಿತು ಎಂದು ತಿರುಗೇಟು ನೀಡಿದೆ.
ದೇವರಾಜೇಗೌಡ ಪತ್ರಿಕಾಗೋಷ್ಠಿ ನಡೆಸಿ ಪೆನ್‌ಡ್ರೈವ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರ ಹೆಸರನ್ನು ಎಳೆದು ತಂದಾಗಲೇ ಇಲ್ಲೇ ನೋ ಮಸಲತ್ತು ಇದೆ ಎಂಬ ಗುಮಾನಿ ದಟ್ಟವಾಗಿತ್ತು. ಆದರೆ ದೇವರಾಜೇಗೌಡನ ಮಾತುಗಳ ಸ್ಕ್ರಿಪ್ಟ್, ಡೈರೆಕ್ಷನ್ ಎಲ್ಲವೂ ಬಿಜೆಪಿ ಹೈಕಮಾಂಡಿನದ್ದು ಎಂದು ಬಹಿರಂಗವಾಗಿದೆ. ಈ ಪೆನ್‌ಡ್ರೈವ್ ಪ್ರಕರಣದ ಹಿಂದೆ ಬಿಜೆಪಿ ಹಾಗೂ ಬ್ರದರ್ ಸ್ವಾಮಿಯ ಬಹುದೊಡ್ಡ ಷಡ್ಯಂತ್ರ ಅಡಗಿದೆ. ಬಿಜೆಪಿ ಎಂಬ ಪಕ್ಷಕ್ಕೆ ಕನಿಷ್ಠ ನೈತಿಕ ಪ್ರಜ್ಞೆ ಇಲ್ಲದಿರುವುದು ರಾಜಕೀಯ ಕ್ಷೇತ್ರಕ್ಕೆ ಕಳಂಕ ಎಂದು ಕಾಂಗ್ರೆಸ್ ಹೇಳಿದೆ.