Advertisement

ಆಡಿಯೋ ನನ್ನದೇ; ಉಪದೇಶ ಕೊಟ್ಟದ್ದು ನಿಜ: ಇಸ್ಮಾಯಿಲ್‌ ಶಾಫಿ

11:59 AM Oct 05, 2017 | |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಯುವಕರನ್ನು ಐಸಿಸ್‌ ಸಂಘಟನೆಗೆ ಸೆಳೆಯಲು ಪ್ರಯತ್ನಗಳು ನಡೆಯುತ್ತಿರುವ ವಿಚಾರ ಬೆಳಕಿಗೆ ಬಂದಿದೆ. ಜಿಲ್ಲೆಯ ಯುವಕರನ್ನು ಐಸಿಸ್‌ಗೆ ಸೇರಿಸಲು ಪ್ರಯತ್ನಗಳು ನಡೆಯುತ್ತಿದ್ದು, ಯಾರೂ ಬಲಿಯಾಗಬಾರದು ಎಂಬುದಾಗಿ ಸೌತ್‌ ಕರ್ನಾಟಕ ಸಲಫಿ ಮೂವ್‌ಮೆಂಟ್‌ನ ರಾಜ್ಯ ಉಪಾಧ್ಯಕ್ಷ ಇಸ್ಮಾಯಿಲ್‌ ಶಾಫಿ ಅವರು ತಮ್ಮ ಸಮುದಾಯದ ಯುವಕರಿಗೆ ಉಪದೇಶ ನೀಡಿರುವ ಆಡಿಯೋ ಸಂದೇಶವೊಂದು ಈಗ ವೈರಲ್‌ ಆಗಿದೆ. ಅದು ನಾನೇ ಮಾತನಾಡಿರುವ ಆಡಿಯೋ ತುಣುಕು ಎಂಬುದಾಗಿ ಖುದ್ದು ಶಾಫಿ ಅವರು ಒಪ್ಪಿಕೊಂಡಿದ್ದಾರೆ.

Advertisement

ಈ ಆಡಿಯೋ ಸಂದೇಶದ ಬಗ್ಗೆ ಬುಧವಾರ “ಉದಯವಾಣಿ’ ಜತೆ ಮಾತನಾಡಿದ ಇಸ್ಮಾಯಿಲ್‌ ಶಾಫಿ ಅವರು, “ಕಳೆದ ವಾರ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನಮ್ಮ ಸಮುದಾಯದ ಯುವಕರಿಗೆ ಐಸಿಸ್‌ ಸಂಘಟನೆ ಬಗ್ಗೆ ಎಚ್ಚರ ವಹಿಸುವಂತೆ ಹೇಳಿದ್ದೆ. ಆ ಸಂದೇಶವನ್ನು ಯಾರೊ ರೆಕಾರ್ಡ್‌ ಮಾಡಿ ಸಾಮಾಜಿಕ ತಾಲ ತಾಣದಲ್ಲಿ ಹರಿಯಬಿಟ್ಟಿದ್ದಾರೆ. ಆ ಆಡಿಯೋದಲ್ಲಿರುವುದು ನನ್ನದೇ ಧ್ವನಿಯಾಗಿದ್ದು, ಅಲ್ಲಿರುವ ಎಲ್ಲ ವಿಷಯ ಗಳು ಕೂಡ ನಿಜ’ ಎಂದು ಹೇಳಿದ್ದಾರೆ.

ಐಸಿಸ್‌ನಲ್ಲಿ ದ.ಕ.ದ ಇಬ್ಬರು ?
“ನಾನು ಆ ದಿನ ಮಾತನಾಡಿರುವ ಆಡಿಯೋ ದಲ್ಲಿ ಇತ್ತೀಚಿನ ದಿನಗಳಲ್ಲಿ ಸಲಫಿ ಸಮುದಾಯದ ಬಂಟ್ವಾಳ, ಕಾಟಿಪಳ್ಳ ಮತ್ತು ಉಳ್ಳಾಲ ಪ್ರದೇಶದ ಕೆಲವು ಮಸೀದಿಗಳಲ್ಲಿ ಕೇರಳದವರು ಎನ್ನಲಾದ ಕೆಲವು ಅಪರಿಚಿತ ಯುವಕರು ಮತ್ತು ನಮ್ಮ ಇಲ್ಲಿನ ಕೆಲವು ಮಂದಿ ಯುವ ಜನರು ಸೇರುತ್ತಿರುವುದು ಮತ್ತು ಮಾತುಕತೆ ನಡೆಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಸುಮಾರು ಒಂದು ವರ್ಷದ ಹಿಂದೆ ಕೇರಳದಿಂದ 22 ಮಂದಿ ಯುವಕರು ಐಸಿಸ್‌ ಸಂಘಟನೆಗೆ ಸೇರ್ಪಡೆಗೊಂಡಿದ್ದಾರೆ ಎಂಬ ಮಾಹಿತಿಯಿದ್ದು, ಅವರಲ್ಲಿ ನಮ್ಮ ಸಲಫಿ ಸಂಘಟನೆಯ ಇಬ್ಬರು ಯುವಕರಿದ್ದಾರೆ ಎಂಬ ಸಂಶಯವಿದೆ. 

ಏಕೆಂದರೆ ಇಲ್ಲಿಂದ ಹೋಗಿದ್ದ ಆ ಇಬ್ಬರು ಯುವಕರು ಇವತ್ತಿಗೂ ಹಿಂದಿರುಗಿ ಬಂದಿಲ್ಲ. ಎಲ್ಲಿಗೆ ಹೋಗಿದ್ದಾರೆ ಎಂದು ತಿಳಿಯದು. ಅವರ ಬಗ್ಗೆ ಯಾವುದೇ ಸುಳಿವು ಲಭ್ಯವಿಲ್ಲ. ಹಾಗಾಗಿ ಇನ್ನಷ್ಟು ಯುವಕರು ಈ ರೀತಿ ಮೋಸದ ಬಲೆಗೆ ಬೀಳುವುದು ಬೇಡ’ ಎನ್ನುವ ಆತಂಕ ವ್ಯಕ್ತಪಡಿಸಿದ್ದಾರೆ. “ಅಲ್ಲದೆ ಐಸಿಸ್‌ನ ಎಲ್ಲ ಚಟುವಟಿಕೆಗಳ ಬಗ್ಗೆ ಸಲಫಿ ಸಂಘಟನೆಯ ಮೇಲೆ ಈಗಾಗಲೇ ಆರೋಪ ಹೊರಿಸಲಾಗುತ್ತಿದೆ. ಇವೆಲ್ಲ ಕಾರಣಗಳಿಂದಾಗಿ ನಾನು ಯುವಜನರಿಗೆ ಉಪದೇಶದ ಮಾತುಗಳನ್ನು ಹೇಳಿದ್ದೆ. ಕೇರಳದಿಂದ ಬರುವ ಕೆಲವರು ನಮ್ಮ ಯುವಕರನ್ನು ದುರುಪಯೋಗಪಡಿಸುತ್ತಿರುವುದು ಕೂಡ ಗಮನಕ್ಕೆ ಬಂದಿದೆ. ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳಾಗಿದ್ದರೆ, ಅವರನ್ನು ಕಲಿಕೆಯಿಂದ ಬಿಡಿಸಿ ನಿಲುವಂಗಿ ತೊಡಿಸಿ ವಿದೇಶದಲ್ಲಿ ಉನ್ನತ ವ್ಯಾಸಂಗ ಒದಗಿಸುವುದಾಗಿ ಪುಸಲಾಯಿಸಿ ಕರೆದೊಯ್ಯುತ್ತಿರುವುದಾಗಿ ಹೇಳಲಾಗಿದೆ. ಕೇರಳದಿಂದ ಬರುವ ಮಂದಿ ಹೆಚ್ಚಾಗಿ ಮಸೀದಿಗಳನ್ನು ಕೇಂದ್ರೀಕರಿಸಿ ಕಾರ್ಯಾಚರಿಸುತ್ತಿರುವುದು ಗೊತ್ತಾಗಿದೆ’ ಎಂದವರು ವಿವರಿಸಿದ್ದಾರೆ.

ಹೋದವರು ಮರಳಿಲ್ಲ
“ಉನ್ನತ ಶಿಕ್ಷಣ ಕೊಡಿಸುವ ನೆಪದಲ್ಲಿ ಯೆಮನ್‌ ದೇಶದ ದಮ್ಮಾಜ್‌ನಲ್ಲಿನ ವಿದ್ಯಾ ಕೇಂದ್ರಕ್ಕೆ ಕರೆದೊಯ್ಯಲಾಗುತ್ತಿದ್ದು, ಅಲ್ಲಿಗೆ ಹೋದ ಬಳಿಕ ಏನಾಗುತ್ತಿದೆ ಎಂದು ಗೊತ್ತಾಗಿಲ್ಲ; ಹಾಗೆ ಹೋದವರು ವಾಪಸ್‌ ಬರುವುದಿಲ್ಲ. ನಮ್ಮವರು ಐಸಿಸ್‌ಗೆ ಹೋಗುತ್ತಾರೆ ಎಂಬ ಆರೋಪ ಈಗಾಗಲೇ ಕೇಳಿ ಬರುತ್ತಿದೆ. ಹಾಗಾಗಿ ಮುನ್ನೆಚ್ಚರಿಕೆಯ ಕ್ರಮವಾಗಿ ನಾನು ಈ ಸಂದೇಶವನ್ನು ನೀಡಿದ್ದೆ’ ಎಂದಿದ್ದಾರೆ. 

Advertisement

ಅಪರಿಚಿತರಿಗೆ  ಅವಕಾಶ ಬೇಡ
“ನಮ್ಮ ಮಸೀದಿಗಳಲ್ಲಿ ವಾಸ್ತವ್ಯ ಮಾಡಲು ಅಪರಿಚಿತರು ಬರುತ್ತಿದ್ದಾರೆ ಎಂಬ ದೂರುಗಳು ವರ್ಷದ ಹಿಂದೆ ಬರುತ್ತಿದ್ದವು. ಇದನ್ನು ಗಂಭೀರವಾಗಿ ಪರಿಗಣಿಸಿ, ಹಾಗೆ ಅನುಮತಿ ಕೇಳಿಕೊಂಡು ಯಾರಾದರೂ ಬಂದರೆ ಅವಕಾಶ ಕೊಡುವುದು ಬೇಡ ಎಂದು ಒಂದು ವರ್ಷದ ಹಿಂದೆಯೇ ನಾವು ಎಲ್ಲ ಸಲಫಿ ಮಸೀದಿಗಳಿಗೆ ಸುತ್ತೋಲೆ ಕಳುಹಿಸಿದ್ದೆವು. ಜತೆಗೆ ಅಂಥವರ ಬಗ್ಗೆ ಸ್ಥಳೀಯ ಪೊಲೀಸ್‌ ಠಾಣೆಗೆ ಮಾಹಿತಿ ನೀಡುವಂತೆಯೂ ಸುತ್ತೋಲೆಯಲ್ಲಿ ತಿಳಿಸಲಾಗಿತ್ತು’ ಎಂದು ಇಸ್ಮಾಯಿಲ್‌ ಶಾಫಿ ತಿಳಿಸಿದ್ದಾರೆ.

ಗಮನಕ್ಕೆ ಬಂದಿದೆ
ಈ ಆಡಿಯೋ ಸಂದೇಶ ನಮ್ಮ ಗಮನಕ್ಕೆ ಬಂದಿದ್ದು, ಅದರ ಪರಿಶೀಲನೆ ನಡೆಯುತ್ತಿದೆ. ಕೂಲಂಕಷವಾಗಿ ಪರಿಶೀಲಿಸಿದ ಬಳಿಕ ಮುಂದಿನ ಕ್ರಮ ಜರಗಿಸಲಾಗುವುದು.
ಸುಧೀರ್‌ ಕುಮಾರ್‌ ರೆಡ್ಡಿ,  ದ.ಕ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ 

ಕನ್ನಡಕ್ಕೆ ಅನುವಾದಿಸಿ ತನಿಖೆ
ಈ ಆಡಿಯೋ ಬ್ಯಾರಿ ಭಾಷೆಯಲ್ಲಿದೆ. ಅದನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸುಧೀರ್‌ ಕುಮಾರ್‌ ರೆಡ್ಡಿ ಅವರು ಕನ್ನಡಕ್ಕೆ ಅನುವಾದಿಸುತ್ತಿದ್ದಾರೆ. ಅನುವಾದ ಮಾಡಿದ ಬಳಿಕ ಅದರಲ್ಲಿ ತಿಳಿಸಿರುವ ವಿಷಯಗಳ ಸತ್ಯಾಸತ್ಯತೆಯ ಬಗ್ಗೆ ಜಿಲ್ಲಾ ಪೊಲೀಸ್‌ ಮತ್ತು ಕಮಿಷನರೆಟ್‌ ವತಿಯಿಂದ ತನಿಖೆ ನಡೆಸಲಾಗುವುದು. ಇದರ ಹೊರತಾಗಿಯೂ ಶಂಕಿತ ಐಸಿಸ್‌ ಚಟುವಟಿಕೆಗಳ ಬಗ್ಗೆ ನಿಕಟ ಕಣ್ಗಾವಲು ಇರಿಸಲಾಗುವುದು.
ಟಿ.ಆರ್‌. ಸುರೇಶ್‌,  ಪೊಲೀಸ್‌ ಆಯುಕ್ತರು, ಮಂಗಳೂರು.

Advertisement

Udayavani is now on Telegram. Click here to join our channel and stay updated with the latest news.

Next