ಲಂಡನ್: ಮೈಸೂರಿನ ಆಡಳಿತ ನಡೆಸುತ್ತಿದ್ದ ಟಿಪ್ಪು ಸುಲ್ತಾನ್ ಅವರ ಸಿಂಹಾಸನದ ಶಿಖಾಲಂಕಾರ (ಥ್ರೋನ್ ಫಿನಿಯಲ್)ವನ್ನು ಮುಂದಿನ ವರ್ಷದ ಜೂನ್‌ನಲ್ಲಿ ಹರಾಜು ಹಾಕಲು ಯುನೈಟೆಡ್ ಕಿಂಗ್‌ಡಮ್ ಸರಕಾರ ನಿರ್ಧರಿಸಿದೆ. ಅದಕ್ಕೆ 14.98 ಕೋಟಿ ರೂ.ಗಳನ್ನು ನಿಗದಿ ಮಾಡಲಾಗಿದೆ.
ಸಿಂಹದ ಮುಖದ ಪ್ರತಿರೂಪ ಹೊಂದಿರುವ ಥ್ರೋನ್ ಫಿನಿಯಲ್ ನೋಡಲು ಆಕರ್ಷಕವಾಗಿದ್ದು, ಯುನೈಟೆಡ್ ಕಿಂಗ್‌ಡಮ್ ಸರಕಾರದ ಡಿಜಿಟಲ್, ಸಂಸ್ಕೃತಿ, ಮಾಧ್ಯಮ ಮತ್ತು ಕ್ರೀಡಾ ಸಚಿವಾಲಯ ಈ ಹರಾಜು ನಡೆಸಲಿದೆ. ಅಂದ ಹಾಗೆ ಅದನ್ನು ಭಾರತದಿಂದ ಕಳವು ಮಾಡಿ ಸಾಗಿಸಲಾಗಿತ್ತು. ಕೆಲವು ಸಮಯದ ಹಿಂದೆ ಅದನ್ನು ರಫ್ತು ಮಾಡುವ ಪ್ರಯತ್ನಕ್ಕೆ ಕೂಡ ಯು.ಕೆ. ಸರಕಾರ ನಿಷೇಧ ಹೇರಿತ್ತು. ಗಮನಾರ್ಹ ಅಂಶವೆಂದರೆ ಶಿಖಾಲಂಕಾರಗಳ ಬಗ್ಗೆ 2009ರ ವರೆಗೆ ಪ್ರಪಂಚಕ್ಕೆ ಮಾಹಿತಿಯೇ ಇರಲಿಲ್ಲ.
ಉಳಿದ ಮೂರರ ಸುಳಿವಿಲ್ಲ: ಟಿಪ್ಪು ಸುಲ್ತಾನ್ ಮೈಸೂರಿನಲ್ಲಿ ಆಡಳಿತ ನಡೆಸುತ್ತಿದ್ದ ವೇಳೆ, ಚಿನ್ನ, ವಜ್ರ-ವೈಢೂರ್ಯ, ಪಚ್ಚೆಗಳಿಂದ ರಚಿಸಲಾಗಿರುವ 8 ಸಿಂಹಾಸನದ ಶಿಖಾಲಂಕಾರಗಳನ್ನು ಹೊಂದಿದ್ದರು. ದಕ್ಷಿಣ ಭಾರತದಲ್ಲಿ ಆಗಿನ ಕಾಲಕ್ಕೆ ಚಿನ್ನದ ಅತ್ಯುತ್ಕೃಷ್ಟ ಕುಸುರಿ ಕೆಲಸವನ್ನು ಈ ಶಿಖಾಲಂಕಾರದಲ್ಲಿ ಕಾಣಬಹುದು. ಅಂಥದ್ದು ಈಗ ಐದು ಉಳಿದಿದೆ. ಇನ್ನುಳಿದ ಮೂರು ಎಲ್ಲಿವೆ ಎನ್ನುವುದು ರಹಸ್ಯವಾಗಿಯೇ ಉಳಿದಿದೆ.
ಇದನ್ನೂ ಓದಿ:ಕ್ರಿಪ್ಟೋ: ಆರ್ಥಿಕತೆ ಮೇಲೆ ದುಷ್ಪರಿಣಾಮ; ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಆತಂಕ
ಶ್ರೀರಂಗಪಟ್ಟಣದಲ್ಲಿ 1799ರಲ್ಲಿ ನಡೆದಿದ್ದ ಹೋರಾಟದಲ್ಲಿ ಟಿಪ್ಪು ಸೋಲನುಭವಿಸಿದ ಬಳಿಕ ಬ್ರಿಟಿಷ್ ಆಡಳಿತ 8 ಶಿಖಾಲಂಕಾರಗಳನ್ನು ವಶಪಡಿಸಿಕೊಂಡಿತ್ತು. ಸಂಸ್ಕೃತಿ, ಕಲೆಗಳಿಗೆ ಸಂಬಂಧಿಸಿದ ವಸ್ತುಗಳನ್ನು ರಫ್ತು ಪರಿಶೀಲನ ಸಮಿತಿ (ಆರ್‌ಸಿಇಡಬ್ಲ್ಯುಎ) ಸದಸ್ಯ ಕ್ರಿಸ್ಟೋಫರ್ ರೋವೆಲ್, ದೇಶದಲ್ಲಿಯೇ ಇದು ಇರಬೇಕು. ಇರುವ ನಾಲ್ಕು ಶಿಖಾಲಂಕಾರಗಳ ಪೈಕಿ ಇದು ಮೂರನೆಯದ್ದು. ಅದನ್ನು ಸಿದ್ಧಪಡಿಸಿದ್ದ ಟಿಪ್ಪು ಸುಲ್ತಾನ್ ಕಾಲದ ಅಕ್ಕಸಾಲಿಗರ ನೈಪುಣ್ಯ ಇದರಲ್ಲಿ ಕಂಡುಬರುತ್ತಿದೆ ಎಂದಿದ್ದಾರೆ.