ಬೆಂಗಳೂರು: ವೃದ್ಧರೊಬ್ಬರ ಗಮನ ಬೇರೆಡೆ ಸೆಳೆದು ನವರತ್ನದ ಉಂಗುರ ಕಳವು ಮಾಡಿರುವ ಘಟನೆ ರಾಜಾಜಿನಗರದಲ್ಲಿ ನಡೆದಿದೆ. ಮಾಗಡಿ ರಸ್ತೆಯ ನಿವಾಸಿ ಯಶವಂತ ರಾವ್(82) ಉಂಗುರ ಕಳೆದುಕೊಂಡವರು. ಆ.28 ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಯಶವಂತ್ ರಾವ್ ದ್ವಿಚಕ್ರ ವಾಹನದಲ್ಲಿ ರಾಜಾಜಿನಗರದ ಕೆಇಬಿ ಕಲ್ಯಾಣ ಮಂಟಪದ ಮುಂಭಾಗ ಹೋಗುತ್ತಿದ್ದರು.
ಆ ವೇಳೆ ಹಿಂಬಾಲಿಸಿಕೊಂಡು ಮತ್ತೂಂದು ಬೈಕ್‌ನಲ್ಲಿ ಬಂದ ಅಪರಿಚಿತರು ಯಶವಂತರ ದ್ವಿಚಕ್ರ ವಾಹನ ನಿಲ್ಲಿಸಿ, ಯಜಮಾನರೇ ಚೆನ್ನಾಗಿದ್ದೀರಾ? ಈ ನಡುವೆ ನೀವು ನಮ್ಮ ಜುವೆಲ್ಲರಿ ಅಂಗಡಿಗೆ ಬರುತ್ತಿಲ್ಲ ಎಂದು ಮಾತನಾಡಿಸಿದ್ದಾರೆ. ಅಲ್ಲದೆ, ಯಶವಂತ್ ಬಲಗೈ ಬೆರಳಿನಲ್ಲಿದ್ದ 17 ಗ್ರಾಂ ನವರತ್ನದ ಉಂಗುರ ನೋಡಿ ಉಂಗುರವನ್ನು ನಮ್ಮ ಅಂಗಡಿಯಲ್ಲಿ ಮಾಡಿಸಿದ್ದು ಅಲ್ಲವೇ? ಎಂದು ಪ್ರಶ್ನಿಸಿದ್ದಾರೆ. ಇಲ್ಲ ಇದನ್ನು ಬೇರೆಡೆ ತೆಗೆದುಕೊಂಡಿದ್ದು ಎಂದು ಯಶವಂತ್ ಹೇಳಿದ್ದರು.
ಇದು ಕೆಡಿಎಂ ಚಿನ್ನದ್ದಾ ಎಂದು ಹೇಳಿ ಉಂಗುರ ತಿರುಗಿಸಿ ನೋಡುತ್ತಾ, ನಿಮ್ಮ ಪತ್ನಿ ಮಕ್ಕಳು ಚೆನ್ನಾಗಿದ್ದಾರೆಯೇ ಎಂದು ಗಮನ ಬೇರೆಡೆ ಸೆಳೆದ ಆರೋಪಿಗಳು ಉಂಗುರ ಕಸಿದುಕೊಂಡು ಪರಾರಿಯಾಗಿದ್ದಾರೆ. ಆದರೆ, ಕೈಯಲ್ಲಿದ್ದ ಉಂಗುರ ಕಳುವಾಗಿರುವುದು ಯಶವಂತ್ ರಾವ್ ಗಮನಕ್ಕೆ ಬಂದಿಲ್ಲ. ಮನೆಗೆ ಬಂದಾಗ ಕೈ ನೋಡಿಕೊಳ್ಳುವಾಗ ಬೆಳಕಿಗೆ ಬಂದಿದೆ. ಈ ಸಂಬಂಧ ದೂರು ದಾಖಲಿಸಿದ್ದಾರೆ.
ಆರೋಪಿಗಳ ಪತ್ತೆಗಾಗಿ ಸ್ಥಳೀಯ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಸಂಗ್ರಹಿಸಲಾಗಿದೆ ಎಂದು ಪೊಲೀಸರು
ತಿಳಿಸಿದರು. ಪ್ರಕರಣ ರಾಜಾಜಿನಗರ ಠಾಣೆಯಲ್ಲಿ ದಾಖಲಾಗಿದೆ.