Advertisement

ಅಸ್ತಿತ್ವಕ್ಕಾಗಿ ಕಾಶ್ಮೀರಿ ನಾಯಕರ ಪ್ರಯತ್ನ; ದಾಳವಾಗಿ ಬದಲಾಗದಿರಲಿ

12:41 AM Oct 15, 2020 | mahesh |

ಜಮ್ಮು-ಕಾಶ್ಮೀರದಿಂದ ಆರ್ಟಿಕಲ್‌ 370 ಮತ್ತು 35ಎ ರದ್ದಾಗಿ ಕೇಂದ್ರಾಡಳಿತ ಪ್ರದೇಶವಾಗಿ ಬದಲಾದ ಅನಂತರದಿಂದ ಕಣಿವೆಯ ರಾಜಕೀಯ ಚಿತ್ರಣದಲ್ಲಿ ಅಪಾರ ಬದಲಾವಣೆಗಳು ಆಗಿವೆ. ಆ ರಾಜ್ಯಕ್ಕೆ ವಿಶೇಷ ಸ್ಥಾನಮಾನ ರದ್ದು ಮಾಡಿದಾಗ, ಸಾರ್ವಜನಿಕ ಸುರಕ್ಷತ ಕಾಯ್ದೆಯಡಿ ಪ್ರಮುಖ ರಾಜಕೀಯ ಪಕ್ಷಗಳಾದ ಪಿಡಿಪಿ ಹಾಗೂ ನ್ಯಾಶನಲ್‌ ಕಾನ್ಫರೆನ್ಸ್‌ ನಾಯಕರನ್ನು ಗೃಹ ಬಂಧನದಲ್ಲಿಡಲಾಗಿತ್ತು. ಈಗ ಪಿಡಿಪಿಯ ಮುಖ್ಯಸ್ಥೆ, ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯವರ ಬಿಡುಗಡೆಯೊಂದಿಗೆ ಪ್ರಮುಖ ನಾಯಕರೆಲ್ಲ ಹೊರಬಂದಂತಾಗಿದೆ.

Advertisement

ಆದರೆ ಗೃಹ ಬಂಧನದಿಂದ ಹೊರ­ಬಂದದ್ದೇ ಮುಫ್ತಿ, ವಿಶೇಷ ಸ್ಥಾನಮಾನದ ಮರುಸ್ಥಾಪನೆಗೆ ಹೋರಾಡುವುದಾಗಿ ಘೋಷಿಸಿ­ದ್ದಾರೆ. ಇನ್ನೊಂದೆಡೆ ಮಾರ್ಚ್‌ ತಿಂಗಳಲ್ಲಿ ಗೃಹಬಂಧನದಿಂದ ಬಿಡುಗಡೆ ಹೊಂದಿರುವ ನ್ಯಾಶ‌ನಲ್‌ ಕಾನ್ಫರೆನ್ಸ್‌ನ ಫಾರೂಕ್‌ ಅಬ್ದುಲ್ಲಾ ಹಾಗೂ ಓಮರ್‌ ಅಬ್ದುಲ್ಲಾ ಸಹ ಕಣಿವೆಗೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದತಿಯ ನಿರ್ಧಾರದ ವಿರುದ್ಧ ದಿನಕ್ಕೊಂದು ಹೇಳಿಕೆಗಳನ್ನು ನೀಡುತ್ತಿ¨ªಾರೆ. ಇವರಿಬ್ಬರೂ ಈಗ ಮುಫ್ತಿಯ ವರನ್ನು ಭೇಟಿಯಾಗಿ ಚರ್ಚೆ ನಡೆಸಿರುವುದಷ್ಟೇ ಅಲ್ಲದೇ, ಈ ಕುರಿತು ಮತ್ತಷ್ಟು ಚರ್ಚೆ ನಡೆಸಲು ಗುರುವಾರ ಸಭೆ ಕರೆದಿದ್ದಾರೆ.

ಇತ್ತೀಚೆಗೆ ಫಾರೂಕ್‌ ಅಬ್ದುಲ್ಲಾ ಅಂತೂ “”ಚೀನದ ಸಹಕಾರದಿಂದ ಆರ್ಟಿಕಲ್‌ 370 ಮರು ಸ್ಥಾಪಿಸುವ ಆಶಾಭಾವನೆಯಿದೆ” ಎಂಬ ದೇಶದ್ರೋಹದ ಮಾತನಾಡಿದ್ದರು. ಈ ವಿಚಾರ ವಿವಾದಕ್ಕೀಡಾಗುತ್ತಿದ್ದಂತೆಯೇ, “ಫಾರೂಕ್‌ರ ಮಾತನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ’ ಎಂದು ತೇಪೆ ಹಚ್ಚುವ ಕೆಲಸವನ್ನು ಅವರ ಪಕ್ಷ ಮಾಡುತ್ತಿದೆ. ಅಧಿಕಾರ ಹಾಗೂ ಅಸ್ತಿತ್ವ ಕಳೆದುಕೊಂಡಿರುವ ಈ ನಾಯಕರು ದಿಕ್ಕುತೋಚದೇ ಈ ರೀತಿ ಮಾತನಾಡುತ್ತಿದ್ದಾರೆ ಎನ್ನುವುದರಲ್ಲಿ ಸಂಶಯವಿಲ್ಲ.

ದಶಕಗಳಿಂದ ಜಮ್ಮು-ಕಾಶ್ಮೀರ ಅಬ್ದುಲ್ಲಾ ಮತ್ತು ಮುಫ್ತಿ ಕುಟುಂಬದ ಹಿಡಿತದಲ್ಲೇ ಇತ್ತು. ಈ ನಾಯಕರು ತಮ್ಮಿಡೀ ರಾಜಕೀಯವನ್ನು ಕೇವಲ ಕಾಶ್ಮೀರ ಕೇಂದ್ರಿತವಾಗಿಸಿಕೊಂಡೇ ಬಂದಿದ್ದರು. ಕಾಶ್ಮೀರದ ಸಮಸ್ಯೆಯನ್ನೇ ಇಡೀ ಜಮ್ಮು-ಕಾಶ್ಮೀರದ ಸಮಸ್ಯೆ ಎಂಬಂತೆ ಭಾವಿಸುತ್ತಿದ್ದರು. ಜಮ್ಮು ಮತ್ತು ಲಡಾಖ್‌ ಪ್ರಾಂತ್ಯದ ಶ್ರೇಯೋಭಿವೃದ್ಧಿ ಅಥವಾ ಹಿತಚಿಂತನೆಯ ಬಗ್ಗೆ ಇವರು ಗಮನವನ್ನೂ ಹರಿಸುತ್ತಿರಲಿಲ್ಲ. ಈ ಕಾರಣಕ್ಕಾಗಿಯೇ, ಪಿಡಿಪಿ ಹಾಗೂ ನ್ಯಾಶ‌ನಲ್‌ ಕಾನ್ಫರೆನ್ಸ್‌ ತಮ್ಮ ಬಗ್ಗೆ ಮಲತಾಯಿ ಧೋರಣೆ ತೋರಿಸುತ್ತಿವೆ ಎನ್ನುವ ಅಸಮಾಧಾನ ಹಿಂದೂ ಬಾಹುಳ್ಯದ ಜಮ್ಮು ಪ್ರಾಂತ್ಯಕ್ಕೆ ಹಾಗೂ ಬೌದ್ಧ ಬಾಹುಳ್ಯದ ಲಡಾಖ್‌ ಕ್ಷೇತ್ರಕ್ಕೆ ಇತ್ತು. ಲಡಾಖ್‌ನ ಜನರಂತೂ ತಮ್ಮನ್ನು ಕೇಂದ್ರಾಡಳಿತ ಪ್ರದೇಶ­ವಾಗಿಸಬೇಕು ಎಂದು ವರ್ಷಗಳಿಂದ ಆಗ್ರಹಿಸುತ್ತ ಬಂದಿದ್ದರು.

ಒಟ್ಟಲ್ಲಿ ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗಿ ಬದಲಾದ ನಂತರ­ದಿಂದ ಈ ಪಕ್ಷಗಳ ಅಸ್ತಿತ್ವವೇ ಬುಡಮೇಲಾಗಿದೆ. ಹೀಗಾಗಿ, ಬಹುಕಾಲದ ವೈರಿಗ­ಳಾ­ಗಿದ್ದ ಪಿಡಿಪಿ ಮತ್ತು ನ್ಯಾಶನಲ್‌ ಕಾನ್ಫರೆನ್ಸ್‌ ಮತ್ತೆ ನೆಲೆ ಸದೃಢಗೊಳಿಸಿ­ಕೊಳ್ಳುವುದಕ್ಕಾಗಿ ಕೈಜೋಡಿಸಲು ಮುಂದಾಗಿವೆ. ಹಾಗೆಂದು, ಅವುಗಳ ಪ್ರಯತ್ನ ಅಸಾಂವಿಧಾನಿಕವೇನೂ ಅಲ್ಲ. ಆದರೆ, ನೆಲೆ ಕಂಡು­ಕೊಳ್ಳುವ ಪ್ರಯತ್ನದಲ್ಲಿ ಅವು ಭಾರತ ವಿರೋಧಿ ನಡೆ ಇಡುವಂತಾಗಬಾರದು. ಕಾಶ್ಮೀರ ಹಾಗೂ ಲಡಾಖ್‌ ಪ್ರಾಂತ್ಯದಲ್ಲಿ ಅಶಾಂತಿ ಸೃಷ್ಟಿಸಲು ಪಾಕಿಸ್ಥಾನ ಹಾಗೂ ಚೀನ ನಿರಂತರವಾಗಿ ಪ್ರಯತ್ನಿಸುತ್ತಲೇ ಇವೆ. ಅವುಗಳ ಈ ಕುತಂತ್ರಕ್ಕೆ ಕಾಶ್ಮೀರದ ರಾಜಕಾರಣಿಗಳು ದಾಳವಾಗಿ ಬದಲಾಗಬಾರದು.

Advertisement
Advertisement

Udayavani is now on Telegram. Click here to join our channel and stay updated with the latest news.

Next