ಬೆಂಗಳೂರು: ಇತ್ತೀಚೆಗೆ ಡಿ.ಜೆ.ಹಳ್ಳಿ ಪಿಎಸ್‌ಐ ನಯಾಜ್ ಅವರ ಮೇಲೆ ಹಲ್ಲೆ ನಡೆಸಿದ್ದ ರೌಡಿಶೀಟರ್ ನದೀಂನನ್ನು ಸೋಮವಾರ ತಡರಾತ್ರಿ ಬಂಧಿಸಲಾಗಿದೆ. ಇತರೆ ಆರೋಪಿಗಳಾದ ವಾಸೀಂ, ಇಮ್ರಾನ್ ತಲೆಮರೆಸಿಕೊಂಡಿದ್ದು, ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಡರಾತ್ರಿ ಏಕಾಏಕಿ ಖಾಸಗಿ ಸುದ್ದಿ ವಾಹಿನಿಯೊಂದರ ಮುಂಭಾಗ ತೆರಳಿದ ಆರೋಪಿ ನದೀಂ, ಬ್ಲೇಡ್‌ನಿಂದ ಕತ್ತು ಕೊಯ್ದುಕೊಂಡು ಹೈಡ್ರಾಮಾ ಸೃಷ್ಟಿಸಿದ್ದಾನೆ. ಈ ವಿಚಾರ ತಿಳಿದ ಪೊಲೀಸರು ಸ್ಥಳಕ್ಕೆ ತೆರಳಿ ಆರೋಪಿಯನ್ನು ಬಂಧಿಸಿದ್ದಾರೆ. ಕತ್ತುಕೊಯ್ದುಕೊಂಡಿದ್ದರಿಂದ ಆರೋಪಿಗೆ ಸೂಕ್ತ ಚಿಕಿತ್ಸೆ ಕೊಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ನದೀಂ ಡಿ.ಜೆ ಹಳ್ಳಿ ಠಾಣೆಯ ರೌಡಿಶೀಟರ್ ಆಗಿದ್ದು, ಈತನ ವಿರುದ್ಧ ದರೋಡೆ, ಕೊಲೆ ಯತ್ನ, ಕಳವು ಪ್ರಕರಣಗಳು ದಾಖಲಾಗಿವೆ. ಈ ಮೊದಲು ಆರೋಪಿ ನದೀಂ ಮತ್ತು ಘಟನೆಯಲ್ಲಿ ಹಲ್ಲೆಗೊಳಗಾಗಿದ್ದ ಉಮರ್ ಸ್ನೇಹಿತರಾಗಿದ್ದು, ಕ್ಷುಲ್ಲಕ ಕಾರಣಕ್ಕೆ ಇಬ್ಬರ ನಡುವೆ ಜಗಳ ನಡೆದು ಪರಸ್ಪರ ದ್ವೇಷಿಸುತ್ತಿದ್ದರು. ಹೀಗಾಗಿ ಉಮರ್ ಹತ್ಯೆಗೆ ಆರೋಪಿ ಸಂಚು ರೂಪಿಸಿದ್ದ.
ಅದರಂತೆ ಆ.24ರಂದು ಸಂಜೆ 6.30ರ ಸುಮಾರಿಗೆ ತನ್ನ ಸಹಚರರೊಂದಿಗೆ ಶಾಂಪೂರ ರಸ್ತೆಯಲ್ಲಿ ಉಮರ್ ಜತೆ ಜಗಳ ತೆಗೆದು, ಅಟ್ಟಿಸಿಕೊಂಡು ಹತ್ಯೆಗೈಯಲು ಯತ್ನಿಸಿದ್ದ. ಈ ಮಾಹಿತಿ ಪಡೆದ ಡಿ.ಜೆ.ಹಳ್ಳಿ ಸಬ್‌ಇನ್ಸ್‌ಪೆಕ್ಟರ್ ನಯಾಜ್ ಕಾನ್ಸ್‌ಟೇಬಲ್ ಜತೆ ಸ್ಥಳಕ್ಕೆ ತೆರಳಿ ಆರೋಪಿಯನ್ನು ಬಂಧಿಸಲು ಮುಂದಾಗಿದ್ದಾರೆ. ಆಗ ಆರೋಪಿ ಮಾರಕಾಸ್ತ್ರಗಳಿಂದ ಪಿಎಸ್‌ಐ ನಯಾಜ್ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದ. ಹೀಗಾಗಿ ಆರೋಪಿಯ ಬಂಧನಕ್ಕೆ ವಿಶೇಷ ತಂಡ ರಚನೆ ಮಾಡಲಾಗಿತ್ತು ಎಂದು ಅಧಿಕಾರಿಯೊಬ್ಬರು ವಿವರಿಸಿದರು.
ಆತ್ಮಹತ್ಯೆಯ ಹೈಡ್ರಾಮಾ: ಈ ಮಧ್ಯೆ ಮಂಗಳವಾರ ತಡರಾತ್ರಿ 2 ಗಂಟೆ ಸುಮಾರಿಗೆ ಖಾಸಗಿ ಸುದ್ದಿವಾಹಿನಿಯೊಂದರ ಬಳಿ ಹೋಗಿದ್ದ ಆರೋಪಿ ನದೀಂ, ನನಗೆ ಪೊಲೀಸರಿಂದ ಜೀವ ಭಯವಿದ್ದು, ಯಾವುದೇ ಸಂದರ್ಭದಲ್ಲೂ ಎನ್‌ಕೌಂಟರ್ ಮಾಡಬಹುದು. ನಯಾಜ್ ಪಿಎಸ್‌ಐ ಎಂದು ತಿಳಿಯದೆ ಹಲ್ಲೆ ನಡೆಸಿದ್ದೆ.
ನನ್ನ ಸಹೋದರ ಮತ್ತು ಮಾವನನ್ನು ಪೊಲೀಸರು ಠಾಣೆಗೆ ಕರೆದೊಯ್ದಿದ್ದಾರೆ. ನನಗೆ ರಕ್ಷಣೆ ಕೊಡಿ ಎಂದು ಬ್ಲೇಡ್‌ನಿಂದ ಕತ್ತುಕೊಯ್ದುಕೊಂಡು ಹೈಡ್ರಾಮಾ ಮಾಡಿದ್ದಾನೆ. ಕೂಡಲೇ ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಬಂದು ಆರೋಪಿಯನ್ನು ಬಂಧಿಸಿದ್ದು, 7 ದಿನಗಳ ಕಾಲ ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.