Advertisement
ಬೃಜ್‌ಕಿಶೋರ್ ಗಿರಿ ಎಂಬ ವ್ಯಕ್ತಿ ಅರುಣ್ ಮತ್ತು ದೀಪಕ್ ರಾಮ್ ಎಂಬ ಇಬ್ಬರನ್ನು ದೇಶದಲ್ಲಿರುವ ರೈಲ್ವೇ ಜಾಲದ ಮೇಲೆ ದಾಳಿ ನಡೆಸಲು ನಿಯೋಜನೆ ಮಾಡಿದ್ದ. ಆದರೆ ಅದನ್ನು ಅನುಷ್ಠಾನಗೊಳಿಸುವಲ್ಲಿ ಅವರಿಬ್ಬರು ವಿಫಲರಾಗಿದ್ದರು. ಹೀಗಾಗಿ ಅವರಿಬ್ಬರನ್ನು ನೇಪಾಲದಲ್ಲಿ ಗಿರಿ ಎಂಬಾತ ಕೊಂದಿದ್ದಾನೆ ಎಂದು ಹೇಳಲಾಗಿದೆ. ಇಂಥ ಕೃತ್ಯ ಎಸಗುವಂತೆ ಐಎಸ್‌ಐನ ಹ್ಯಾಂಡ್ಲರ್ ಶಮ್‌ಶೂಲ್ ಹೂಡಾ ಎಂಬಾತ ಸೂಚನೆ ನೀಡಿದ್ದ. ರೈಲ್ವೇ ಹಳಿಗಳಲ್ಲಿ ಸ್ಫೋಟ ನಡೆಸಲು ದೀಪಕ್ ಮತ್ತು ಅರುಣ್ ಸ್ಫೋಟಕಗಳನ್ನು ಇರಿಸಿದ್ದನ್ನು ಪೊಲೀಸರು ಪತ್ತೆ ಹಚ್ಚಿದ್ದರಿಂದ ಸಂಭಾವ್ಯ ದುರಂತ ತಪ್ಪಿಹೋಗಿತ್ತು. ಇದರಿಂದಾಗಿ ಕ್ರುದ್ಧಗೊಂಡ ಗಿರಿ ಅವರಿಬ್ಬರನ್ನು ಹತ್ಯೆ ಮಾಡಿದ. ಅದರ ದಾಖಲೆಗಾಗಿ ಆಡಿಯೋವನ್ನು ಧ್ವನಿ ಮುದ್ರಿಸಿ ಶಮ್‌ಶೂಲ್ ಹೂಡಾಗೆ ಕಳುಹಿಸಿಕೊಟ್ಟಿದ್ದ.
ತನಿಖೆ ವೇಳೆ ಗೊತ್ತಾಯಿತು: ದೀಪಕ್ ಮತ್ತು ಅರುಣ್ ಎಂಬುವರ ಹತ್ಯೆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿರಬೇಕಾದರೆ ಕಾನ್ಪುರ ರೈಲು ದುರಂತಕ್ಕೂ ಐಎಸ್‌ಐಗೂ ಸಂಬಂಧವಿದೆ ಎಂಬ ಅಂಶ ಗೊತ್ತಾಯಿತು. ಅದಕ್ಕೆ ಪೂರಕವಾಗಿ ಬಿಹಾರದ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಭಾರತ ಮತ್ತು ನೇಪಾಳ ಗಡಿ ಸಮೀಪ ಇರುವ ಘೋರ್‌ಸಹಾನ್ ಎಂಬಲ್ಲಿ ಹಳಿಯಲ್ಲಿ ಸ್ಫೋಟಕಗಳನ್ನು ಇರಿಸಲು ಹತ್ಯೆಗೀಡಾದ ದೀಪಕ್, ಅರುಣ್ ಮುಂದಾಗಿದ್ದರು. ಬಿಹಾರ ಪೊಲೀಸರು ಅದನ್ನು ಪತ್ತೆ ಹಚ್ಚಿ ನಿಷ್ಕ್ರಿಯಗೊಳಿಸಿದ್ದರು. ಹೀಗಾಗಿ, ಅವರಿಬ್ಬರನ್ನು ನೇಪಾಳಕ್ಕೆ ಕರೆದೊಯ್ದು ಅಲ್ಲಿನ ಅರಣ್ಯ ಪ್ರದೇಶದಲ್ಲಿ ಹತ್ಯೆ ಮಾಡಲಾಗಿದೆ ಎಂದು ಮೂಲಗಳನ್ನು ಉಲ್ಲೇಖೀಸಿ ಚಾನೆಲ್ ವರದಿ ಮಾಡಿದೆ.