Advertisement

ಅಥ್ಲೆಟಿಕ್‌ ಟ್ರ್ಯಾಕ್‌ ಕಾಮಗಾರಿ ಕಳಪೆ

07:23 AM Mar 20, 2019 | Team Udayavani |

ದೇವನಹಳ್ಳಿ: ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಆಟದ ಮೈದಾನದಲ್ಲಿ ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯಿಂದ ನಿರ್ಮಾಣ ಮಾಡಿರುವ 200 ಮೀ. ಅಥ್ಲೆಟಿಕ್‌ ಟ್ರ್ಯಾಕ್‌ ಕಾಮಗಾರಿ ಕಳಪೆಯಿಂದ ಕೂಡಿದೆ. ಆಟಗಾರರಿಗೆ ಯಾವುದೇ ಉಪಯೋಗವಿಲ್ಲ ಎಂದು ಕ್ರೀಡಾಭಿಮಾನಿಗಳು ಆರೋಪ ಮಾಡಿದ್ದಾರೆ. 

Advertisement

ನಗರದ ಹೃದಯ ಭಾಗದಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜು ಆಟದ ಮೈದಾನದಲ್ಲಿ ದಿನನಿತ್ಯ ಬೆಳಗ್ಗೆ ಮತ್ತು ಸಂಜೆ ನಗರದ ಸುಮಾರು ಒಂದು ಸಾವಿರ ಜನರು ವಾಯುವಿಹಾರ ಮತ್ತು ವಿವಿಧ ರೀತಿಯ ದೈಹಿಕ ವ್ಯಾಯಾಮಗಳನ್ನು ಮಾಡುತ್ತಾರೆ. ಶಾಲಾ ಮಕ್ಕಳು ಹಾಗೂ ಯುವಕರು ಕ್ರಿಕೆಟ್‌, ವಾಲಿಬಾಲ್‌ ಇತರೆ ಆಟಗಳ ಅಭ್ಯಾಸ ಮಾಡುತ್ತಾರೆ. ಆದರೆ, ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ 5.60 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಿರುವ 200 ಮೀಟರ್‌ ಟ್ರ್ಯಾಕ್‌ ಸಂಪೂರ್ಣ ಕಳಪೆಯಾಗಿದೆ ಎಂದು ಆರೋಪಿಸಿದ್ದಾರೆ.

ಒತ್ತುವರಿ ತೆರವಿಗೆ ಆಗ್ರಹ: ಟ್ರ್ಯಾಕ್‌ ಅನ್ನು ಸರಿಯಾದ ರೀತಿ ಹಾಗೂ ವ್ಯವಸ್ಥಿತವಾಗಿ ನಿರ್ಮಾಣ ಮಾಡಿಲ್ಲ. ಅಡ್ಡಾದಿಡ್ಡಿ ಮಾಡಿದ್ದಾರೆ. 9 ಇಂಚು ಅಗೆದು ಜೆಸಿಬಿ ಮೂಲಕ ರೋಲ್‌ ಮಾಡಿಸಿದ್ದಾರೆ. ಈ ಮೈದಾನ 5.18 ಎಕರೆ ಜಾಗದಲ್ಲಿದ್ದು, ಅದರಲ್ಲಿ ಅಂದಾಜು 1.18 ಗುಂಟೆ ಜಾಗ ಒತ್ತುವರಿಯಾಗಿದೆ. ಅದನ್ನು ಈ ಕೂಡಲೇ ತೆರವು ಗೊಳಿಸಬೇಕೆಂದು ಕ್ರೀಡಾಸಕ್ತರು ಆಗ್ರಹಿಸಿದ್ದಾರೆ. 

ಸರ್ಕಾರದ ಹಣ ಪೋಲು: ಅಂತಾರಾಷ್ಟ್ರೀಯ ಅಥ್ಲಾಟಿಕ್‌ ಪಟು ನಟರಾಜ್‌ ಮಾತನಾಡಿ, 200 ಮೀ. ಟ್ರ್ಯಾಕ್‌ಗೆ 40 ಸಿಎಂ ಆಳ ಅಗೆಯಲಾಗಿದೆ. 15 ಸಿಎಂ ಜೆಲ್ಲಿ ಪುಡಿ ಬಳಸಲಾಗಿದೆ. 10 ಸಿಎಂ ಇಟ್ಟಿಗೆ ಪುಡಿ, 8 ಸಿಎಂ ಮಣ್ಣು, 7 ಸಿಎಂ ಶೇ.35 ಮರಳು ಮತ್ತು ಶೇ.65 ಮಣ್ಣು, ಜೆಸಿಬಿ ಮೂಲಕ ರೋಲಿಂಗ್‌ ಹಾಗೂ ವಾಟರಿಂಗ್‌ ಮತ್ತು 5 ಸಿಎಂ ಇಟ್ಟಿಗೆ ಬಾರ್ಡ್‌ ಮಾಡಬೇಕಾಗುತ್ತದೆ. ಆದರೆ, ಕಳಪೆ ಕಾಮಗಾರಿ ಮಾಡಿ ಸರ್ಕಾರದ ಹಣವನ್ನು ಪೋಲು ಮಾಡಿದ್ದಾರೆ. ಇದರಿಂದ ಕ್ರಿಕೆಟ್‌, ವಾಲಿಬಾಲ್‌ ಇತರೆ ಆಟಗಳಿಗೆ ಅನಾನುಕೂಲವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಸೌಲಭ್ಯಗಳಿಲ್ಲದ ಮೈದಾನ: ಅಧಿಕಾರಿಗಳು  ಟ್ರ್ಯಾಕ್‌ ನಿರ್ಮಾಣ ಮಾಡುವಾಗ 9 ಇಂಚು ಅಗೆದು ಮಾಡಿದ್ದೇವೆ ಎನ್ನುತ್ತಾರೆ. ಆದರೆ, ಅಗೆದು ನೋಡಿದಾಗ ಜೆಲ್ಲಿ ಪುಡಿ, ಇಟ್ಟಿಗೆ ಪುಡಿ, ಮರಳು ಹಾಗೂ ಮಣ್ಣು ಕಾಣಿಸುತ್ತಿಲ್ಲ. ಕೇವಲ 2 ರಿಂದ 3 ಬಾರಿ ಜೆಸಿಬಿ ಮೂಲಕ ರೋಲಿಂಗ್‌ ಮಾಡಿದ್ದಾರೆ. 3 ದಿನದಲ್ಲಿ ಕಾಮಗಾರಿ ಮುಗಿಸಿದ್ದಾರೆ. ನಗರದ ಪ್ರದೇಶದಲ್ಲಿ ಸುಸಜ್ಜಿತ ಆಟದ ಮೈದಾನವಿಲ್ಲ. ಇರುವ ಮೈದಾನದ ಮಧ್ಯ ಭಾಗದಲ್ಲಿ ನಾಮಕೆವಾಸ್ತೆ 200 ಮೀ. ಟ್ರ್ಯಾಕ್‌ ನಿರ್ಮಾಣ ಮಾಡಿದ್ದಾರೆ. ಮೈದಾನದಲ್ಲಿ ಶೌಚಾಲಯ, ಕುಡಿಯುವ ನೀರು ಹೀಗೆ ಯಾವುದೇ ಸೌಲಭ್ಯಗಳಿಲ್ಲ. ಯಾವುದಾದರೂ ಕಾರ್ಯಕ್ರಮ ಮಾಡಬೇಕಾದರೆ ಎಲ್ಲಿಗೆ ಹೋಗಬೇಕೆಂದು   ಆರೋಪಿಸಿದರು. 

Advertisement

5.18 ಎಕರೆ  ಪ್ರದೇಶದಲ್ಲಿ ಆಟದ ಮೈದಾನವಿದ್ದು, ಅದರಲ್ಲಿ ಸುಮಾರು 1.18 ಗುಂಟೆ ಒತ್ತುವರಿ ಆಗಿರುವುದರಿಂದ ಕೂಡಲೇ ಜಿಲ್ಲಾಧಿಕಾರಿಗಳು ಸರ್ವೆ ಮಾಡಿಸಿ ಒತ್ತುವರಿ ಜಾಗವನ್ನು ತೆರವುಗೊಳಿಸಬೇಕು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಧಿಕಾರಿಯ ತಪ್ಪುಗಳಿಂದ ಕ್ರೀಡಾಪಟುಗಳು ಸಮಸ್ಯೆ ಎದುರಿಸುವಂತಾಗಿದೆ ಎಂದು ಮತ್ತೂಬ್ಬ ಕ್ರೀಡಾಪಟು ಮುನಿರಾಜು ಬೇಸರ ವ್ಯಕ್ತಪಡಿಸಿದರು. 

ಅಧಿಕಾರಿ ಅಮಾನತು ಮಾಡಿ: ಸಾಕಷ್ಟು ವರ್ಷಗಳಿಂದ ಯುವಕರು ಕ್ರಿಕೆಟ್‌ ಮತ್ತಿತರ ಪಂದ್ಯಾವಳಿಗಳನ್ನು ಆಯೋಜಿಸುತ್ತಿದ್ದರು. ಕ್ರಿಕೆಟ್‌ ಆಡುವ ಪಿಚ್‌ ಅನ್ನೇ ಹಾಳು ಮಾಡಿದ್ದಾರೆ. ಇಂತಹ ಕಾಮಗಾರಿಗಳನ್ನು ಮಾಡುವಾಗ ಜನಪ್ರತಿನಿಧಿಗಳ ಗಮನಕ್ಕೆ ತಂದು ಮುಂದಿನ ಕೆಲಸ ಮಾಡಬೇಕು. ಕಳಪೆ ಕಾಮಗಾರಿ ಹಾಗೂ ಸರ್ಕಾರದ ಹಣ ದುರುಪಯೋಗವಾಗಿದೆ. ಆದ್ದರಿಂದ, ಈ ಕುಡಲೇ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಧಿಕಾರಿಯನ್ನು ಅಮಾನತು ಮಾಡಬೇಕು.  ಗುಣಮಟ್ಟದ ಟ್ರ್ಯಾಕ್‌ ನಿರ್ಮಾಣ ಮಾಡಬೇಕು. ತಾಲೂಕಿನ ವಿಜಯಪುರ ರಸ್ತೆಯಲ್ಲಿರುವ ತಾಲೂಕು ಕ್ರೀಡಾಂಗಣದ ಮಾದರಿಯಲ್ಲಿ ಮಿನಿ ಕ್ರೀಡಾಂಗಣವನ್ನು ನಿರ್ಮಿಸಬೇಕೆಂದು ಇನ್ನೊಬ್ಬ ಕ್ರೀಡಾಪಟು ಸುನೀಲ್‌ ಆಗ್ರಹಿಸಿದರು. 

200 ಮೀ.ಟ್ರ್ಯಾಕ್‌ ನಿರ್ಮಾಣ ಮಾಡಿರುವುದು ಸರಿಯಾಗಿಲ್ಲ. ಹಾಗಾಗಿ, ಗುತ್ತಿಗೆದಾರರಿಗೆ ಪತ್ರ ಬರೆದು ಗುಣಮಟ್ಟದ ಟ್ರ್ಯಾಕ್‌ ನಿರ್ಮಾಣ ಮಾಡುವಂತೆ ಸೂಚಿಸಲಾಗಿದೆ. ಇಲ್ಲವಾದರೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆಯನ್ನೂ ನೀಡಲಾಗಿದೆ. ಗುತ್ತಿಗೆದಾರರು ಸರಿಪಡಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. ಅದಕ್ಕಾಗಿ ನಾವು ಕಾಯಬೇಕಾಗಿದೆ. 
-ದೇವಿಕಾ ರಾಣಿ, ಸಹಾಯಕ ನಿರ್ದೇಶಕಿ, ಜಿಲ್ಲಾ ಯುವ ಸಬಲೀಕರಣ, ಕ್ರೀಡಾ ಇಲಾಖೆ  

Advertisement

Udayavani is now on Telegram. Click here to join our channel and stay updated with the latest news.

Next