Advertisement

ತಾ|ಮಹಿಳಾ ಮಂಡಳಿಗಳ ಒಕ್ಕೂಟಕ್ಕೆ ಸ್ವಂತ ನಿವೇಶನ ಭರವಸೆ

07:05 AM Jul 19, 2018 | Team Udayavani |

ಉಡುಪಿ: ಆಟಿಡೊಂಜಿ ದಿನದಂತಹ ವಿನೂತನ ಕಾರ್ಯಕ್ರಮ ನಡೆಸುವ ಮೂಲಕ ತುಳುನಾಡಿನ ಸಂಸ್ಕೃತಿ, ಆಚರಣೆ, ಸಂಪ್ರದಾಯಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಹೋರಾಟ ನಡೆಸುತ್ತಿರುವ ತಾ| ಮಹಿಳಾ ಮಂಡಳಿಗಳ ಒಕ್ಕೂಟದ ಸಭೆ, ಸಮಾರಂಭ ನಡೆಸಲು ಅಗತ್ಯವಿರುವ ಕಟ್ಟಡ ರಚನೆಗೆ ಬೇಕಾದ ನಿವೇಶನ ಕೊಡಿಸಲು ಪ್ರಯತ್ನಿಸುದಾಗಿ ಶಾಸಕ ಕೆ. ರಘುಪತಿ ಭಟ್‌ ಭರವಸೆ ನೀಡಿದರು.

Advertisement

ಉಡುಪಿ ತಾ| ಮಹಿಳಾ ಮಂಡಳಿಗಳ ಒಕ್ಕೂಟ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬಂಟರ ಯಾನೆ ನಾಡವರ ಸಂಘ ತಾಲೂಕು ಸಮಿತಿ, ಬಂಟರ ಸಂಘ, ತುಳುಕೂಟ ಆಶ್ರಯದಲ್ಲಿ ಉಡುಪಿಯ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ಬುಧವಾರ ನಡೆದ ಆಟಿಡೊಂಜಿ ದಿನ/ಮಹಿಳೆಯರ ಕೂಟವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಉನ್ನತ ಹುದ್ದೆಗಳಲ್ಲಿ ಮಹಿಳೆಯರು
ತಾಲೂಕು, ಜಿಲ್ಲಾ ಮಟ್ಟದಲ್ಲಿ ಒಕ್ಕೂಟಗಳಿದ್ದರೂ ರಾಜ್ಯಮಟ್ಟದಲ್ಲಿ ಮಹಿಳಾ ಮಂಡಳಿಗಳ ಒಕ್ಕೂಟವಿಲ್ಲ. ಈ ಬಗ್ಗೆ ಮುಂದಿನ ಅಧಿವೇಶನದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯನ್ನು ಪ್ರಶ್ನಿಸುತ್ತೇನೆ. ಒಂದು ಕಾಲದಲ್ಲಿ 4 ಗೋಡೆಗಳಿಗೆ ಸೀಮಿತರಾಗಿದ್ದ ಮಹಿಳೆಯರು ಪ್ರಸ್ತುತ ಎಲ್ಲ ಕ್ಷೇತ್ರಗಳಲ್ಲಿಯೂ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ದೇಶದಲ್ಲಿ ರಕ್ಷಣಾ ಖಾತೆ, ವಿದೇಶಾಂಗ ಖಾತೆ ಸೇರಿದಂತೆ ಹಲವಾರು ಉನ್ನತ ಹುದ್ದೆಗಳನ್ನು ಮಹಿಳೆಯರೇ ಅಲಂಕರಿಸಿದ್ದಾರೆ ಎಂದರು.

ತುಳುಕೂಟ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ಆಹಾರ ಪದ್ಧತಿಯಿಂದಲೇ ಆರೋಗ್ಯ ವೃದ್ಧಿಸಿಕೊಳ್ಳುವ ಕಾಲವೊಂದಿತ್ತು. ಇದೀಗ ಆ ಪದ್ಧತಿ ಮರೆಯಾಗಿದೆ. ಇಂದಿನ ಮಕ್ಕಳು ಜಂಕ್‌ ಫ‌ುಡ್‌ಗೆ ಹಾತೊರೆಯುತ್ತಾರೆ. ಇದಕ್ಕೆ ಹೆತ್ತವರು ಸಂಪ್ರದಾಯಬದ್ಧ ಆಹಾರಗಳ ಪರಿಚಯವನ್ನು ಮಕ್ಕಳಿಗೆ ಮಾಡಿಸಿ ಅದರ ಉಪಯೋಗವನ್ನು ತಿಳಿಸಿಕೊಡಬೇಕಾದ ಅವಶ್ಯಕತೆಯಿದೆ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕಿ ಪೂರ್ಣಿಮಾ, ತಾ.ಪಂ. ಅಧ್ಯಕ್ಷೆ ನಳಿನಿ ಪ್ರದೀಪ್‌ ರಾವ್‌, ಮಹಿಳಾ ಮಂಡಳಿಗಳ ಒಕ್ಕೂಟ ಜಿಲ್ಲಾಧ್ಯಕ್ಷೆ ಸರಳಾ ಕಾಂಚನ್‌, ಕುಂದಾಪುರ ತಾ| ಅಧ್ಯಕ್ಷೆ ರಾಧಾದಾಸ್‌, ಬಂಟರ ಸಂಘದ ಕಾರ್ಯದರ್ಶಿ ಮೋಹನ್‌ ಶೆಟ್ಟಿ, ಉಡುಪಿ ತಾ| ಮಹಿಳಾ ಮಂಡಳಿಗಳ ಒಕ್ಕೂಟ ಪ್ರ.ಕಾರ್ಯದರ್ಶಿ ಯಶೋದಾ ಕೆ. ಶೆಟ್ಟಿ ಉಪಸ್ಥಿತರಿದ್ದರು.

Advertisement

ಲಯನೆಸ್‌ ಮಾಜಿ ಜಿಲ್ಲಾ ಸಂಯೋಜಕಿ ನಿರುಪಮಾ ಪ್ರಸಾದ್‌ ಶೆಟ್ಟಿ ವಿವಿಧ ಆಟೋಟ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿದರು. 

ವಿಶೇಷ ತಿನಿಸುಗಳನ್ನು ತಯಾರಿಸಿದ ಮಹಿಳೆಯರನ್ನು ಗೌರವಿಸಲಾಯಿತು. ಉಡುಪಿ ತಾ| ಮಹಿಳಾ ಮಂಡಳಿಗಳ ಒಕ್ಕೂಟ ಅಧ್ಯಕ್ಷೆ ಶೀಲಾ ಕೆ. ಶೆಟ್ಟಿ ಸ್ವಾಗತಿಸಿ, ಪ್ರಸ್ತಾವನೆಗೈದರು. ಪ್ರಸನ್ನಾ ಭಟ್‌ ನಿರೂಪಿಸಿ, ಗೀತಾ ರವಿ ವಂದಿಸಿದರು.

ಊಟಕ್ಕೆ ಏನೇನಿದೆ?
ಉಪೆìರ್‌ ಅರಿತ್ತ ನುಪ್ಪು (ಕೊಚ್ಚಿಗೆ ಅನ್ನ), ಕುಡುತ್ತ ಸಾರ್‌ (ಹುರುಳಿ ಸಾರು), ಮೂಡೆ (ಕಡುಬು), ಅರೆಪುದಡೆÂ (ಪುಂಡಿ ಗಸಿ), ಪೆಲಕ್ಕಾಯಿದ ಗಟ್ಟಿ, ಬಾರೆದ ಇರೆ (ಹಲಸಿನ ಕಡುಬು), ಉಪ್ಪಡ್‌ ಪಚ್ಚಿರ್‌ ಕಜಿಪು (ಹಲಸಿನ ಸೊಳೆ ಪದಾರ್ಥ), ಮಂಜೊಲ್ದ ಇರೆತ್ತ ಗಟ್ಟಿ (ಅರಶಿನ ಎಲೆ ಕಡುಬು), ಪತ್ರೊಡೆ, ಪೆಕಾಯಿದ ಮುಳ್ಕ (ಹಲಸಿನ ಹಣ್ಣಿನ ಮುಳ್ಕ), ಮೆಂತೆ ಪಾಯಸ, ಬೆಂಜನ, ಉಪ್ಪಡ್‌ (ಮೊಸರು, ಉಪ್ಪಿನಕಾಯಿ), ತೇವುದ ಚಟ್ನಿ (ಕೆಸುವಿನ ಚಟ್ನಿ), ಚಿಲಿಂಬಿದ ಅಡ್ಯ (ಹಲಸಿನ ಚಿಲಿಂಬಿ), ಕುಕ್ಕುದ, ಪೆಜಕಾಯಿದ ಚಟ್ನಿ (ಮಾವಿನಹಣ್ಣು, ಹೆಬ್ಬಲಸಿನ ಕಾಯಿಯ ಚಟ್ನಿ), ನುರ್ಗೆ ಸೊಪ್ಪುದ ಕಜಿಪು (ನುಗ್ಗೆಸೊಪ್ಪಿನ ಪದಾರ್ಥ), ಕೆಂಡದಡ್ಯ (ಕೆಂಡದ ಮೇಲಿಟ್ಟು ಮಾಡುವ ಮಣ್ಣಿ), ನುರ್ಗೆ ಸೊಪ್ಪುದ ವಡೆ (ನುಗ್ಗೆಸೊಪ್ಪಿನ ವಡೆ), ಕಣಿಲೆ ಪದೆಂಗಿ ಸೌತೆ ಗಸಿ (ಕಣಿಲೆ+ಮೊಳಕೆ ಬರಿಸಿದ ಹೆಸರು+ಸೌತೆಕಾಯಿ ಗಸಿ), ಪೆಲಕಾಯಿದ ಪಚ್ಚಿರ್‌ (ಹಲಸಿನ ಹಣ್ಣಿನ ಸೊಳೆ) ಇತ್ಯಾದಿ ವಿಶೇಷ ತಿನಿಸುಗಳನ್ನು ಮಹಿಳೆಯರು ಮನೆಯಿಂದಲೇ ತಯಾರಿಸಿ ತಂದು ಸಂಪ್ರದಾಯದಂತೆ ಬಾಳೆಎಲೆಯಲ್ಲಿ ಬಡಿಸುವ ಮೂಲಕ ಆಟಿಡೊಂಜಿ ದಿನ ಕಾರ್ಯಕ್ರಮ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next