ಬೆಂಗಳೂರು: ಫರ್ಜಿ ಕೆಫೆಯಲ್ಲಿ ಮೊಹಮದ್ ನಲಪಾಡ್ ಹ್ಯಾರಿಸ್‌ನಿಂದ ಹಲ್ಲೆಗೊಳಗಾಗಿ ಚಿಕಿತ್ಸೆಗೆ ದಾಖಲಾಗಿದ್ದ ವಿದ್ವತ್ ಅವರ ವೈದ್ಯಕೀಯ ವರದಿಯನ್ನೇ ತಿರುಚಲಾಗಿದೆ ಎಂದು ಎಂದು ಪ್ರಾಸಿಕ್ಯೂಶನ್ ಹೈಕೋರ್ಟ್‌ಗೆ ತಿಳಿಸಿದೆ.
ಮೊಹಮದ್ ನಲಪಾಡ್ ಹ್ಯಾರಿಸ್ ಸಲ್ಲಿಸಿರುವ ಮಧ್ಯಂತರ ಜಾಮೀನು ಅರ್ಜಿ ವಿಚಾರಣೆಯನ್ನು ಶುಕ್ರವಾರ ನಡೆಸಿದ ನ್ಯಾಯಮೂರ್ತಿ ಶ್ರೀನಿವಾಸ ಹರೀಶ್‌ಕುಮಾರ್ ಅವರಿದ್ದ ಏಕಸದಸ್ಯ ಪೀಠಕ್ಕೆ, ವಿಶೇಷ ಸರ್ಕಾರಿ ಅಭಿಯೋಜಕ ಶ್ಯಾಮ್ ಸುಂದರ್ ತಿಳಿಸಿದರು. ಫೆ.17ರಂದು ರಾತ್ರಿ ಫರ್ಜಿ ಕೆಫೆಯಲ್ಲಿ ವಿದ್ವತ್ ಮೇಲೆ ನಲಪಾಡ್ ಹಾಗೂ ಆತನ ಸಹಚರರು ಎಸಗಿದ ಹಲ್ಲೆ ದೃಶ್ಯಗಳಿರುವ ಸಿಸಿಟಿವಿ ಫೂಟೇಜ್‌ಗಳ ಸಿ.ಡಿ.ಯನ್ನು ನ್ಯಾಯ ಪೀಠಕ್ಕೆ ಸಲ್ಲಿಸಿದರು.
ನ್ಯಾಯಮೂರ್ತಿಗಳು ತಮ್ಮ ಚೇಂಬರ್‌ನಲ್ಲಿ “ಘಟನೆ ದೃಶ್ಯಾವಳಿ ವೀಕ್ಷಿಸಲು ಒಪ್ಪಿಗೆ ಸೂಚಿಸಿ’ ವಿಚಾರಣೆಯನ್ನು ಮಾ.12ಕ್ಕೆ ಮುಂದೂಡಿದರು.
ವಿಚಾರಣೆ ವೇಳೆ ವಾದ ಮಂಡಿಸಿದ ಎಸ್‌ಪಿಪಿ ಶ್ಯಾಮ್ ಸುಂದರ್, ಫೆ. 17ರಂದು ರಾತ್ರಿ ಫರ್ಜಿ ಕೆಫೆಯಲ್ಲಿ ಅತ್ಯಂತ ಕ್ರೂರ ರೀತಿಯಲ್ಲಿ ನಲಪಾಡ್ ಹಾಗೂ ಆತನ ಸಹಚರರು ವಿದ್ವತ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ವಿದ್ವತ್ ಮೂಗು, ಪಕ್ಕೆಲುಬು, ಮುಖ ಸೇರಿ ಹಲವೆಡೆ ಗಾಯವಾಗಿದೆ. ಆ ದಿನ ರಾತ್ರಿ ಮಲ್ಯ ಆಸ್ಪತ್ರೆಗೆ ದಾಖಲಿಸಿದಾಗ, ವಿದ್ವತ್‌ರನ್ನು ಪರೀಕ್ಷಿಸಿದ ಡಾ. ಆನಂದ್, ವಿದ್ವತ್ ಗಂಭೀರವಾಗಿ ಗಾಯ ಗೊಂಡಿದ್ದಾನೆ ಎಂದಿದ್ದರು. ಇದೀಗ ರಾಜಕೀಯ ಒತ್ತಡಕ್ಕೆ ಮಣಿದು ವಿದ್ವತ್ ಗಂಭೀರವಾಗಿ ಗಾಯ ಗೊಂಡಿಲ್ಲ ಎಂದು ಸುಳ್ಳು ವೈದ್ಯಕೀಯ ವರದಿ
ನೀಡಿದ್ದಾರೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
“ಮೆಡಿಕೋ ಲೀಗಲ್ ಕೇಸ್‌ನಲ್ಲಿ’ ಅನುಸರಿಸ ಬೇಕಾದ ನಿಯಮಗಳನ್ನು ಮಲ್ಯ ಆಸ್ಪತ್ರೆ ವೈದ್ಯರು ಉಲ್ಲಂ ಸಿದ್ದಾರೆ. ತನಿಖಾಧಿಕಾರಿಗಳು ಹಲವು ಬಾರಿ ಮನವಿ ಮಾಡಿದರೂ ನೀಡದ ವಿದ್ವತ್‌ರ ವೈದ್ಯಕೀಯ ವರದಿ, ನಲಪಾಡ್ ತಂದೆ ಶಾಸಕ ಹ್ಯಾರಿಸ್‌ಗೆ ಹೇಗೆ ಸಿಕ್ಕಿತು. ಡಾ. ಆನಂದ್ ಹ್ಯಾರಿಸ್ ಗೆ ಆಪ್ತರಾಗಿದ್ದು ಜಾಮೀನು ಪಡೆದುಕೊಳ್ಳಲು ನೆರವಾಗಲೆಂದೇ ಸುಳ್ಳು ವೈದ್ಯಕೀಯ ವರದಿ ನೀಡಿದ್ದಾರೆ. ಈ ವರದಿಯನ್ನು ಶಾಸಕ ಹ್ಯಾರಿಸ್ ತಮ್ಮ ಫೇಸ್ ಬುಕ್ ಪೇಜ್‌ನಲ್ಲಿ ಪ್ರಕಟಿಸಿದ್ದಾರೆ. ಈಗಾಗಲೇ ಡಾ. ಆನಂದ್‌ಗೆ ತನಿಖಾಧಿಕಾರಿಗಳು ನೋಟಿಸ್ ಜಾರಿಗೊಳಿಸಿದ್ದಾರೆ ಎಂದರು.
ಇದಕ್ಕೂ ಮೊದಲು ನಲಪಾಡ್ ಪರವಾಗಿವಾದ ಮಂಡಿಸಿದ ಹಿರಿಯ ವಕೀಲ ಸಿ.ವಿ ನಾಗೇಶ್, ಅರ್ಜಿದಾರ ನಲಪಾಡ್ ಹಾಗೂ ಆತನ ಸಹಚರರು ಕೊಲ್ಲುವ ಉದ್ದೇಶದಿಂದ ವಿದ್ವತ್ ಮೇಲೆ ಹಲ್ಲೆ ನಡೆಸಿಲ್ಲ. ಆಕಸ್ಮಿಕವಾಗಿ ನಡೆದ ಘರ್ಷಣೆ ಘಟನೆ ಅದಾಗಿದೆ. ಅಲ್ಲದೆ, ವಿದ್ವತ್ ಗಂಭೀರವಾಗಿ ಗಾಯಗೊಂಡಿಲ್ಲ ಎಂದು ವೈದ್ಯರೇ ಡಿಸ್ಚಾರ್ಜ್ ವರದಿಯಲ್ಲಿ ಉಲ್ಲೇಖೀಸಿದ್ದಾರೆ. ಜತೆಗೆ ಉದ್ದೇಶಪೂರ್ವಕವಾಗಿ ಆಸ್ಪತ್ರೆಯಲ್ಲಿ ಡಿಸ್ಚಾರ್ಜ್ ಆಗದೇ ಇರಲು ಯತ್ನಿಸುತ್ತಿದ್ದರು ಎಂದು ವರದಿಯಲ್ಲಿ ತಿಳಿಸಲಾಗಿದೆ ಎಂದರು.
ವಿದ್ವತ್ ವೈದ್ಯಕೀಯ ವರದಿ ತಿರುಚಲಾಗಿದೆ: ಪ್ರಾಸಿಕ್ಯೂಶನ್ ವಾದ.
ಮಾ.12ಕ್ಕೆ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ.