Advertisement

ಹತ್ಯೆ ತನಿಖೆ ರಾಜಕೀಯ ಪ್ರೇರಿತ

12:11 PM Sep 05, 2018 | Team Udayavani |

ಬೆಂಗಳೂರು: “ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ತನಿಖೆ ಸಂಪೂರ್ಣ ರಾಜಕೀಯಪ್ರೇರಿತವಾಗಿದೆ,’ ಎಂದು ಹಿಂದೂ ವಿಧಿಜ್ಞ ಪರಿಷತ್ತಿನ ರಾಷ್ಟ್ರೀಯ ಅಧ್ಯಕ್ಷ ವೀರೇಂದ್ರ ಇಚಲಕರಂಜಿಕರ್‌ ಆರೋಪಿಸಿದರು. 

Advertisement

ಹಿಂದೂ ಕಾರ್ಯಕರ್ತರ ಕೊಲೆ ಪ್ರಕರಣಗಳ ತನಿಖೆಯ ದಿಕ್ಕುತಪ್ಪಿಸಲು ಗೌರಿ ಲಂಕೇಶ್‌ ಹತ್ಯೆ ಪ್ರಕರಣವನ್ನು ಉದ್ದೇಶಪೂರ್ವಕವಾಗಿ ಮುನ್ನೆಲೆಗೆ ತರಲಾಗುತ್ತಿದೆ. ಜತೆಗೆ ತನಿಖೆ ವಿಚಾರದಲ್ಲೂ ದ್ವಂದ್ವ ನೀತಿ ಅನುಸರಿಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಇದು ರಾಜಕೀಯ ಪ್ರೇರಣೆಯಿಂದ ಕೂಡಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ದೂರಿದರು. 

ಗೌರಿ ಹತ್ಯೆ ನಡೆದ ಮರುದಿನವೇ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗಿದೆ. ಆರೋಪಿಗಳ ವಿರುದ್ಧ “ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ’ (ಕೋಕಾ) ಅಡಿ ಕೇಸು ದಾಖಲಿಸಲಾಗಿದೆ. ಆದರೆ, 2009ರಿಂದ 2016ರವರೆಗೆ ಮೈಸೂರಿನ ಅಬಿದ್‌ ಪಾಷ ಮತ್ತು ಸಹಚರರು ಎಂಟು ಜನ ಹಿಂದೂ ಕಾರ್ಯಕರ್ತರರನ್ನು ಹತ್ಯೆಗೈದಿದ್ದಾರೆ.

ಈ ಬಗ್ಗೆ ಆರೋಪಿಗಳೂ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ. ಈ ಆರೋಪಿ ವಿರುದ್ಧ “ಕೋಕಾ’ ಅಸ್ತ್ರ ಪ್ರಯೋಗಿಸಿಲ್ಲ ಯಾಕೆ? ಇದು ಹಿಂದುತ್ವವಾದಿಗಳನ್ನು ಮುಗಿಸುವ ವ್ಯವಸ್ಥಿತ ಷಡ್ಯಂತ್ರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

“ಕೋಕಾ’ ಈವರೆಗೆ ಐವರ ಮೇಲೆ ಪ್ರಯೋಗ: 2000ರಲ್ಲಿ ಅಸ್ತಿತ್ವಕ್ಕೆ ಬಂದ “ಕೋಕಾ’ ಅಸ್ತ್ರವನ್ನು ಇದುವರೆಗೆ ಕರೀಂಲಾಲ್‌ ತೆಲಗಿ ಸೇರಿ ಐವರ ವಿರುದ್ಧ ಪ್ರಯೋಗಿಸಲಾಗಿದೆ. ಅದರಲ್ಲಿ ಗೌರಿ ಹತ್ಯೆ ಪ್ರಕರಣದ ಆರೋಪಿಯೂ ಸೇರಿದ್ದಾರೆ. ಆದರೆ, ಎಂಟು ಜನರನ್ನು ಕೊಲೆ ಪ್ರಕರಣಗಳ ತನಿಖೆಗೆ ಎಸ್‌ಐಟಿ ಇಲ್ಲ; ಕೋಕಾದಡಿ ಪ್ರಕರಣವನ್ನೂ ದಾಖಲಿಸಿಲ್ಲ. ಕಾನೂನಿನ ಸ್ಪಷ್ಟ ದುರ್ಬಳಕೆ ನಡೆಯುತ್ತಿದ್ದು, ಈ ತಾರತಮ್ಯ ತಕ್ಷಣ ನಿಲ್ಲಿಸಬೇಕು ಎಂದು ಆಗ್ರಹಿಸಿದರು. 

Advertisement

ನಾವು ಆರೋಪಿ ಪರ ವಕಾಲತ್ತು ವಹಿಸುತ್ತಿಲ್ಲ; ಸರ್ಕಾರದ ದ್ವಂದ್ವ ನಿಲುವುಗಳ ವಾಸ್ತವವನ್ನು ಹೇಳುತ್ತಿದ್ದೇವೆ. ಹಬೀದ್‌ ಪಾಷ ಪೀಪಲ್‌ ಫ್ರಂಟ್‌ ಆಫ್ ಇಂಡಿಯಾ ಜತೆ ಗುರುತಿಸಿಕೊಂಡಿದ್ದಾನೆ. ಆ ಸಂಘಟನೆ ನಿಷೇಧದ ಬಗ್ಗೆ ಮಾತನಾಡುವುದಿಲ್ಲ. ಆದರೆ, ಸನಾತನ ಸಂಸ್ಥೆಯ ನಿಷೇಧಕ್ಕೆ ಒತ್ತಾಯಿಸಲಾಗುತ್ತಿದೆ. ಇದು ಯಾವ ನ್ಯಾಯ ಎಂದು ಕೇಳಿದರು. 

ಹಿಂದೂ ವಿಧಿಜ್ಞ ಪರಿಷತ್ತಿನ ರಾಷ್ಟ್ರೀಯ ಉಪಾಧ್ಯಕ್ಷ ಎನ್‌.ಪಿ. ಅಮೃತೇಶ್‌ ಮಾತನಾಡಿ, ಚುನಾವಣೆ ಹತ್ತಿರ ಬರುತ್ತಿದ್ದಂತೆ ಗೌರಿ ಹತ್ಯೆ ಪ್ರಕರಣದ ತನಿಖೆ ಚುರುಕುಗೊಳ್ಳುತ್ತದೆ. ಯಾರಾದರೂ ಒಬ್ಬರ ಬಂಧನ ಆಗುತ್ತದೆ. ಚಾರ್ಜ್‌ಶೀಟ್‌ ಸಿದ್ಧಗೊಳ್ಳುತ್ತದೆ. ತನಿಖಾಧಿಕಾರಿಗಳ ಈ ನಡೆ ಅನುಮಾನಕ್ಕೆ ಎಡೆಮಾಡಿಕೊಡುತ್ತಿದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಹಿಂದೂ ಜನಜಾಗೃತಿ ಸಮಿತಿ ರಾಜ್ಯ ಘಟಕದ ವಕ್ತಾರ ಮೋಹನ್‌ಗೌಡ ಇದ್ದರು. 

ಈಗ ಮೌನ ವಹಿಸಿದ್ದೇಕೆ?: ನಗರ ನಕ್ಸಲ್‌ ಬೆಂಬಲಿಗರ ಬಂಧನದ ತಕ್ಷಣ ಮಾತನಾಡುವ ಎಡಪಂಥೀಯರು ಮತ್ತು ಮಾನವ ಹಕ್ಕು ಆಯೋಗವು ಗೌರಿ ಹತ್ಯೆ ಆರೋಪಿಗಳಿಗೆ ಚಿತ್ರಹಿಂಸೆ ನೀಡಿದಾಗ ಯಾಕೆ ಮೌನ ವಹಿಸಿತ್ತು ಎಂದು ಎನ್‌.ಪಿ. ಅಮೃತೇಶ್‌ ಕೇಳಿದರು. 

ಬಂಧಿತರು ಅಧಿಕಾರಿಗಳ ಪ್ರಕಾರ ಹತ್ಯೆಯ ಆರೋಪಿಗಳಾಗಿದ್ದರೂ, ಅವರು ಕೂಡ ಮನುಷ್ಯರು. ಪೊಲೀಸರು ಅವರಿಗೆ ಸಾಕಷ್ಟು ಚಿತ್ರಹಿಂಸೆ ನೀಡುತ್ತಿದ್ದಾರೆ. ಈ ಚಿತ್ರಹಿಂಸೆ ಬಗ್ಗೆ ಯಾರೊಬ್ಬರೂ ದನಿ ಎತ್ತಲಿಲ್ಲ. ಈ ರೀತಿಯ ಧೋರಣೆ ಎಷ್ಟು ಸರಿ ಎಂದು ಪ್ರಶ್ನಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next