ಕೊಪ್ಪಳ: ಕೋವಿಡ್-19 ನಿಯಂತ್ರಣಕ್ಕಾಗಿ ವೈದ್ಯರು, ಆಶಾ ಕಾರ್ಯಕರ್ತೆಯರು ಸೇರಿದಂತೆ ಹಲವು ಸಿಬ್ಬಂದಿ ವರ್ಗ ಹಗಲಿರುಳು ಶ್ರಮಿಸುತ್ತಿದ್ದಾರೆ. ಅಂತವರ ಮೇಲೆ ಹಲ್ಲೆ ಮಾಡುವವರು ಸಮಾಜ ವಿರೋಧಿಗಳು ಹಾಗೂ ದೇಶದ್ರೋಹಿಗಳು, ಇಂತವರನ್ನು ಶಿಕ್ಷಿಸಬೇಕು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ಹೇಳಿದರು.
ಕೊಪ್ಪಳದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಆಶಾ ಕಾರ್ಯಕರ್ತೆಯರ ಮೇಲೆ ಮಾಡುವುದು ಒಳ್ಳೆಯದಲ್ಲ. ಅವರು ಕೋವಿಡ್-19 ಪತ್ತೆ ಹಚ್ಚಲು ಹಗಲಿರುಳು ಶ್ರಮಿಸುತ್ತಿದ್ದಾರೆ. ಅಂತವರ ಮೇಲೆ ಕೆಲವೆಡೆ ಹಲ್ಲೆಗಳು ನಡೆಯುತ್ತಿವೆ. ಹಲ್ಲೆ ಮಾಡೋರು ನಿಜಕ್ಕೂ ದೇಶದ್ರೋಹಿಗಳು. ಇಂತವರನ್ನು ಹಿಡಿದು ಲಾಕಪ್‌ನಲ್ಲಿ ಹಾಕಿ ಶಿಕ್ಷೆ ವಿಧಿಸಬೇಕು. ಸರ್ಕಾರ ಆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಿದೆ ಎಂದರು.
ಕೋವಿಡ್-19 ರಾಜ್ಯದಲ್ಲಿ ನಿಯಂತ್ರಣಕ್ಕೆ ಬರುತ್ತಿತ್ತು. ಆದರೆ ದೆಹಲಿಯ ನಿಜಾಮುದ್ದೀನ್‌ನ ಜಮಾತ್ ನಲ್ಲಿ ಪ್ರಾರ್ಥನೆಯು ಹಾಗೂ ಕಾಸರಗೂಡಿನಿಂದಾಗಿ ಕೋವಿಡ್-19 ಸೋಂಕು ಹೆಚ್ಚಳವಾಗಿದೆ. ಇದೇ ನಮಗೆ ಸಮಸ್ಯೆಯಾಗಿದೆ. ಕೋವಿಡ್-19 ನಿಯಂತ್ರಣಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವು ಕಟ್ಟುನಿಟ್ಟಿನ ಕ್ರಮ ಕೈಗೊಂಡಿವೆ ಎಂದರು.
ಇನ್ನೂ ರೈತರ ಕೃಷಿ ಉತ್ಪನ್ನಗಳಿಗೆ ಯಾವುದೇ ನಿರ್ಬಂಧ ವಿಧಿಸಿಲ್ಲ. ಲಾಕ್ ಡೌನ್ ಇದ್ದರೂ ಅವರ ಉತ್ಪನ್ನ ಸಾಗಾಟಕ್ಕೆ ಸರ್ಕಾರ ಅನುವು ಮಾಡಿಕೊಟ್ಟಿದೆ. ಆದೇಶ, ನಿಯಮಾವಳಿಯನ್ನು ಸರಿಯಾಗಿ ತಿಳಿದುಕೊಳ್ಳಬೇಕು. ಪ್ರತಿ ಜಿಲ್ಲಾವಾರು ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ನಡೆಸಿ ಇದೇ ಮಾಹಿತಿ ನೀಡುತ್ತಿದ್ದೇನೆ. ರೈತನ ಉತ್ಪನ್ನಕ್ಕೆ ಯಾವುದೇ ನಿರ್ಬಂಧ ಹೇರುವಂತಿಲ್ಲ. ಆದರೆ ಸಾಮಾಜಿಕ ಅಂತರ ಕಾಯ್ದುಕೊಂಡು ಉತ್ಪನ್ನ ಮಾರಾಟಕ್ಕೆ ಅಗತ್ಯ ಕ್ರಮ ಕೈಗೊಳ್ಳಲು ಸೂಚನೆ ನೀಡಬೇಕು. ಕೂಡಲೇ ರೈತ ಸಂಪರ್ಕ ಕೇಂದ್ರ ಆರಂಭಿಸಬೇಕು. ರೈತರ ಉತ್ಪನ್ನ ಖರೀದಿಗೆ ಸರ್ಕಾರ ಆರಂಭಿಸಿದ ಖರೀದಿ ಕೇಂದ್ರವನ್ನು ಕೂಡಲೇ ತೆರೆಯಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಸದ ಸಂಗಣ್ಣ ಕರಡಿ, ಶಾಸಕರಾದ ಹಾಲಪ್ಪ ಆಚಾರ್, ಬಸವರಾಜ ದಡೆಸೂಗೂರು, ಪರಣ್ಣ ಮುನವಳ್ಳಿ, ಅಮರೆಗೌಡ ಬಯ್ಯಾಪೂರ, ರಾಘವೇಂದ್ರ ಹಿಟ್ನಾಳ, ಡಿಸಿ ಸುನೀಲ್ ಕುಮಾರ ಸೇರಿ ಇತರರು ಉಪಸ್ಥಿತರಿದ್ದರು.