ಕೆಜಿಎಫ್: ರಾಬರ್ಟಸನ್‌ಪೇಟೆ ನಗರಸಭೆ ಚುನಾವಣೆಯ ಕಾವು ದಿನದಿನಕ್ಕೆ ಹೆಚ್ಚಾಗುತ್ತಿದ್ದು, ನಾಮಪತ್ರ ಸಲ್ಲಿಸಲು ಆಕಾಂಕ್ಷಿಗಳು ದಾವಂತದಲ್ಲಿದ್ದಾರೆ. ನ.12ರಂದು ನಡೆಯಲಿರುವ ಚುನಾವಣೆಯಲ್ಲಿ 35 ವಾರ್ಡ್‌ಗಳ ಮತದಾರರು, ತಮ್ಮ ಪ್ರತಿನಿಧಿಗಳನ್ನು ಆಯ್ಕೆ
ಮಾಡಿಕೊಳ್ಳಲು ಉತ್ಸುಕರಾಗಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ತೀವ್ರ ಪೈಪೋಟಿ ಕಾಣಿಸುತ್ತಿದೆ. ಕಾಂಗ್ರೆಸ್‌ನಲ್ಲಿ ಎಲ್ಲಾ 35 ವಾರ್ಡ್‌ಗಳಿಗೆ ಅರ್ಜಿ ಬಂದಿದೆ.ಎಲ್ಲೆಡೆ ಆಕಾಂಕ್ಷಿಗಳ ಸಂಖ್ಯೆ ಜಾಸ್ತಿ ಇದೆ. ಆಕಾಂಕ್ಷಿಗಳಿಗೆ ಟಿಕೆಟ್ ಸಿಗದೆ ಇದ್ದರೆ ಬಂಡಾಯವೇಳುವ ಸಾಧ್ಯತೆ ಕೂಡ ಇದೆ. ಈಗಾಗಲೇ ಕಾಂಗ್ರೆಸ್ ಪಕ್ಷದ ವೀಕ್ಷಕರು ನಗರಕ್ಕೆ ಆಗಮಿಸಿ ಆಕಾಂಕ್ಷಿಗಳ ಮತ್ತು ಅವರ ಬೆಂಬಲಿಗರ ಜೊತೆ ಸಭೆ ನಡೆಸಿದ್ದಾರೆ. ಪಕ್ಷಯಾರಿಗೇ ಟಿಕಿಟ್ ನೀಡಿದರೂ ಕೆಲಸ ಮಾಡುತ್ತೇವೆ ಎಂದು ಹೇಳಿದರೆ ಮಾತ್ರ ನಿಮ್ಮ ಅರ್ಜಿಯನ್ನು ಪುರಸ್ಕರಿಸುತ್ತೇವೆ ಎಂದು ವೀಕ್ಷಕರು ಎಚ್ಚರಿಸಿದ್ದಾರೆ.
ಕಾಂಗ್ರೆಸ್‌ನಲ್ಲಿ ಶಾಸಕಿ ರೂಪಕಲಾ ಅವರ ಬಣ ಕೂಡ ಸದ್ದು ಮಾಡುತ್ತಿದೆ. ನಮ್ಮ ಗುಂಪಿಗೆ ರೂಪಾ ಟಿಕೆಟ್ ನೀಡುವುದಿಲ್ಲ. ನಮ್ಮ ಬೆಂಬಲಿಗರಿಗೂ ಟಿಕೆಟ್ ಕೊಡಿ ಎಂದು ಭಿನ್ನಮತೀಯರು ತಮ್ಮ ಪಕ್ಷದ ಮುಖಂಡರಲ್ಲಿ ಅಂಗಲಾಚುತ್ತಿದ್ದಾರೆ. ಆದರೆ, ಕೆಜಿಎಫ್ನಲ್ಲಿ ಕಾಂಗ್ರೆಸ್ ಪಕ್ಷ ಇಲ್ಲದೆ ಇದ್ದಾಗ, ಕಟ್ಟಿ ಬೆಳೆಸಿದವಳು ನಾನು. ನಗರಸಭೆಯನ್ನು ಕೈವಶ ಮಾಡಿಕೊಂಡಿದ್ದರಲ್ಲಿ ಸಹ ನನ್ನ ಪಾತ್ರಇದೆ. ನನಗೆ ಜವಾಬ್ದಾರಿ ನೀಡಿದರೆ ಪುನಃ ಪಕ್ಷವನ್ನುಅಧಿಕಾರಕ್ಕೆ ತರುತ್ತೇನೆ ಎಂದು ಶಾಸಕಿ ರೂಪಕಲಾ ನಾಯಕರಿಗೆ ಸ್ಪಷ್ಟವಾಗಿ ಹೇಳಿದ್ದಾರೆ. ಅಂತಿಮವಾಗಿ ಅವರು ಆಯ್ಕೆ ಮಾಡುವ ಅಭ್ಯರ್ಥಿಗೆ ಟಿಕೆಟ್ ಸಿಗುವ ಸಾಧ್ಯತೆ ಇದೆ.
ಶಾಸಕಿ ರೂಪ ಅವರಿಗೆ ಸ್ಪರ್ಧೆ ಮಾಡಬೇಕು ಎಂಬ ಬೇಡಿಕೆಯನ್ನು ಕಾರ್ಯಕರ್ತರು ನೀಡುತ್ತಿದ್ದಾರೆ. ಆದರೆ, ಅವರ ಸ್ಪರ್ಧೆ ಇನ್ನೂ ನಿಗೂಢವಾಗಿದೆ. ಆರ್‌ಪಿಐ ಅಧ್ಯಕ್ಷ ಮತ್ತು ಮಾಜಿ ಶಾಸಕ ಎಸ್.ರಾಜೇಂದ್ರನ್ ಹದಿ ನೈದು ಸೀಟ್‌ಗೆ ಅಭ್ಯರ್ಥಿಗಳನ್ನು ಹೂಡು ತ್ತೇನೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಅವರು ಕೂಡ ಸ್ಪರ್ಧಿಸುವ ಸಂಭವ ಇದೆ. ಅವರು ಎಷ್ಟರ ಮಟ್ಟಿಗೆ ಪ್ರಭಾವ ಬೀರುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ. ಇದುವರೆಗೂ ಕೇವಲ 3 ನಾಮಪತ್ರ ಸಲ್ಲಿಕೆ ಯಾಗಿದೆ. ಬುಧವಾರ, ಗುರುವಾರ ಅಧಿಕ ಸಂಖ್ಯೆಯಲ್ಲಿ ನಾಮಪತ್ರ ಸಲ್ಲಿಸುವ ನಿರೀಕ್ಷೆ ಇದೆ.
ಬಿ.ಆರ್.ಗೋಪಿನಾಥ್