ಸುಪ್ರಸಿದ್ಧ ಕಲಾವಿದರಾದ ಅರುವ ಕೊರಗಪ್ಪ ಶೆಟ್ಟಿ ಅವರದು ಯಕ್ಷರಂಗದಲ್ಲಿ ಚಿರಪರಿಚಿತ ಹೆಸರು. ಸರಳ, ಸಜ್ಜನಿಕೆಯ ವ್ಯಕ್ತಿತ್ವದ ಕೊರಗಪ್ಪ ಶೆಟ್ಟರು ತಮ್ಮಿಂದ ಯಕ್ಷರಂಗಕ್ಕೆ ಹಾಗೂ ಸಮಾಜಕ್ಕೆ ಉಪಕಾರವಾಗಬೇಕು ಎಂಬ ಉದ್ದೇಶದಿಂದ ಸ್ಥಾಪಿಸಿದ ಸಂಸ್ಥೆ ಅರುವ ಕೊರಗಪ್ಪ ಶೆಟ್ಟಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಅರುವ. ತಾವು ಸಮಾಜದಿಂದ ಪಡೆದುದರ ಅಲ್ಪ ಭಾಗವನ್ನಾದರೂ ಸಮಾಜಕ್ಕೆ ವಿನಿಯೋಗಿಸುವ ಸದುದ್ದೇಶದಿಂದ ಸ್ಥಾಪಿಸಲ್ಪಟ್ಟ ಸಂಸ್ಥೆಯಿದು. ತಮ್ಮ ಜೀವಿತ ಕಾಲದಲ್ಲೇ ಪ್ರತಿಷ್ಠಾನ ರಚಿಸಿದ ಯಕ್ಷಗಾನದ ಪ್ರಥಮ ಕಲಾವಿದರು ಅರುವ ಕೊರಗಪ್ಪ ಶೆಟ್ಟರು ಎಂಬುದು ಉಲ್ಲೇಖನೀಯ.
2007ರಲ್ಲಿ ಸ್ಥಾಪಿಸಲ್ಪಟ್ಟ ಈ ಪ್ರತಿಷ್ಠಾನ ಇದೀಗ ಸೆಪ್ಟೆಂಬರ್ 20, 2017ರಂದು ಮಂಗಳೂರು ಪುರಭವನದಲ್ಲಿ ತನ್ನ ದಶಮಾನೋತ್ಸವ ಸಂಭ್ರಮ ಕಾರ್ಯಕ್ರಮ ಆಯೋಜಿಸಿದೆ.
ಕಳೆದ ಈ ಹತ್ತು ವರ್ಷಗಳಲ್ಲಿ ಪ್ರತಿಷ್ಠಾನವು ಹಲವಾರು ಸಮಾಜಮುಖೀ ಸೇವೆಯನ್ನು ಸಲ್ಲಿಸಿದೆ. 70 ಮಂದಿ ಹಿರಿಯ ಯಕ್ಷಗಾನ ಕಲಾವಿದರಿಗೆ ನಿಧಿಸಹಿತ ಸಮ್ಮಾನ, 20 ಅಶಕ್ತ ಕಲಾವಿದರಿಗೆ ನಿಧಿ ಸಮರ್ಪಣೆ, 310 ಹೆಣ್ಣುಮಕ್ಕಳ ವಿವಾಹಕ್ಕೆ ಆರ್ಥಿಕ ಸಹಾಯ, 1000 ಮಕ್ಕಳಿಗೆ ವಿದ್ಯಾರ್ಥಿ ವಿದ್ಯಾಭ್ಯಾಸ ವೇತನ, 450 ಮಂದಿ ವಯೋವೃದ್ಧರಿಗೆ ಆವಶ್ಯಕ ಸಾಮಗ್ರಿಗಳ ಕಿಟ್ ವಿತರಣೆ, ಅನಾರೋಗ್ಯ ಪೀಡಿತರಿಗೆ ಆರ್ಥಿಕ ಸಹಾಯ, ಯುವಪ್ರತಿಭೆಗಳಿಗೆ ಪುರಸ್ಕಾರ, ಯಕ್ಷಗಾನ ಕಲಾವಿದರಿಗೆ ಅಗತ್ಯದ ಕಾಲದಲ್ಲಿ ನಿಧಿ ಸಮರ್ಪಣೆ – ಹೀಗೆ ಹತ್ತು ಹಲವು ಸಮಾಜಮುಖೀ ಸೇವೆ ಸಲ್ಲಿಸಿದ ಹೆಗ್ಗಳಿಕೆ ಪ್ರತಿಷ್ಠಾನದ್ದು. ಈ ಹತ್ತು ವರ್ಷಗಳಲ್ಲಿ 60 ಲಕ್ಷ ರೂ.ಗಳನ್ನು ಈ ಉದ್ದೇಶಕ್ಕಾಗಿ ವಿನಿಯೋಗಿಸಲಾಗಿದೆ ಎನ್ನುವುದು ಉಲ್ಲೇಖನೀಯ.
ಈ ದಶಮಾನೋತ್ಸವದ ಶುಭ ಸಂದರ್ಭದಲ್ಲಿ ಯಕ್ಷರಂಗದ ಹತ್ತು ಮಂದಿ ಹಿರಿಯ ಕಲಾವಿದರನ್ನು ಅರುವ ಪ್ರಶಸ್ತಿ – 2017 ಹಾಗೂ ತಲಾ 10,000 ರೂ.ಗಳ ನಿಧಿಯೊಂದಿಗೆ ಗಣ್ಯರ ಸಮಕ್ಷಮ ಗೌರವಿಸಲಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಸಮಾಜಸೇವೆ ಮಾಡಿದ ಐವರು ಸಾಧಕರನ್ನು ಸಮ್ಮಾನಿಸುವ ಯೋಜನೆಯೂ ಇದೆ. ಜತೆಗೆ “ಕೋರ್ದಬ್ಬು ತನ್ನಿಮಾನಿಗ’ ನೃತ್ಯರೂಪಕ ಮತ್ತು “ದೇವುಪೂಂಜ ಪ್ರತಾಪ’ ತುಳು ಯಕ್ಷಗಾನವನ್ನು ಹಮ್ಮಿಕೊಂಡಿದ್ದಾರೆ.
ಇವೆಲ್ಲವುಗಳ ಜತೆಗೆ ಅರುವ ಕೊರಗಪ್ಪ ಶೆಟ್ಟರು ತಮ್ಮ ಪ್ರತಿಷ್ಠಾನದ ಮೂಲಕ ವನಮಹೋತ್ಸವ, ಅರುವ ಪಟ್ಟಣ ಸ್ವತ್ಛತಾ ಯೋಜನೆ ಮುಂತಾದ ಸಾಮಾಜಿಕ ಸೇವೆಯನ್ನೂ ಮಾಡುತ್ತಿದ್ದಾರೆ. ಅರುವದ ಸುತ್ತಮುತ್ತಲಿನ ವಿವಿಧ ಸಂಘಸಂಸ್ಥೆಗಳಲ್ಲಿ ಕಾರ್ಯಕ್ರಮಗಳ ಪ್ರಾಯೋಜಕತ್ವ ನೀಡುವುದಲ್ಲದೇ ಅರ್ಥಿಕ ಸಹಾಯ ನೀಡುವ ಮೂಲಕ ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದೆ. 60 ಮಂದಿ ಮಕ್ಕಳಿಗೆ ಯಕ್ಷಗಾನ ತರಬೇತಿ ನೀಡುತ್ತಿದ್ದಾರೆ.
ಅರುವ ಕೊರಗಪ್ಪ ಶೆಟ್ಟರು ತಮಗೆ ಯಕ್ಷಗಾನದಿಂದ ದೊರಕುವ ಸಂಪೂರ್ಣ ಆದಾಯವನ್ನು ಈ ಯೋಜನೆಗೆ ಬಳಸಿಕೊಳ್ಳುತ್ತಿರುವುದು ಶ್ಲಾಘನಾರ್ಹ. ಜತೆಗೆ ಪ್ರತಿಷ್ಠಾನದಲ್ಲಿ ದೇಶವಿದೇಶಗಳ ಅರುವ ಅಭಿಮಾನಿಗಳಿದ್ದು, ಅವರ ಸಂಪೂರ್ಣ ಸಹಕಾರ ಹಾಗೂ ಈ ಯೋಜನೆಗೆ ಪ್ರಮುಖ ಸಂಪನ್ಮೂಲ ಒದಗುತ್ತಿದೆ.
ಎಂ. ಶಾಂತರಾಮ ಕುಡ್ವ