ವರ್ಷಗಳು ಕಳೆದ ಹಾಗೆ ಜಗತ್ತು ತುಂಬಾ ಬದಲಾಗುತ್ತಾ ಬಂದಿದೆ. ವೈಜ್ಞಾನಿಕವಾಗಿ, ತಾಂತ್ರಿಕವಾಗಿ, ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ ಹೀಗೆ ಹಲವಾರು ರೀತಿ. ಒಟ್ಟಿನಲ್ಲಿ ಸ್ಪರ್ಧಾತ್ಮಕ ಜೀವನದೊಂದಿಗೆ ಹಾಸು ಹೊಕ್ಕಾಗಿ ಹೊಂದಿಕೊಂಡಿದೆ..
ಜನರು ಏನಾದರೊಂದು ಸಾಧಿಸುವ ನಿಟ್ಟಿನಲ್ಲಿ ಸಾಲು ಸಾಲು ಸಂಶೋಧನೆಗಳಿಗೆ ಸಾಕ್ಷಿಯಾಗಿದ್ದಾರೆ. ಎಲ್ಲ ಕ್ಷೇತ್ರದಲ್ಲೂ ಹೊಸತನದ ಛಾಯೆ ಅಬ್ಬರದಿಂದ ಅಡಿ ಇಟ್ಟಿದೆ.
ಹಿಂದೆ ಒಂದು ಕಾಲದಲ್ಲಿ ಒಬ್ಬ ವ್ಯಕ್ತಿ ತನ್ನ ಅಭಿನಯವನ್ನು ಜನಾಭಿಮನಿಗಳ ಮುಂದೆ ವ್ಯಕ್ತ ಪಡಿಸಬೇಕಾದಲ್ಲಿ ಪಡುವ ಪಾಡು ಅಷ್ಟಿಷ್ಟಲ್ಲ ! ಶಾಲೆ, ಕಾಲೇಜುಗಳಲ್ಲಿ ಭಾಗವಹಿಸಿ ಅಲ್ಲಿಂದ ಸಣ್ಣ ತಂಡದೊಂದಿಗೆ ಬೀದಿ ನಾಟಕಗಳಲ್ಲಿ ಪಾಲ್ಗೊಂಡು, ಅನಂತರದಲ್ಲಿ ಒಂದು ರಂಗ ಕಲಾವಿದರ ತೆಕ್ಕೆಗೆ ಬಿದ್ದು ಅಲ್ಲಿ ಪಳಗಿ ತನ್ನ ಪಾತ್ರದ ಪರಕಾಯ ಪ್ರವೇಶ ಮಾಡಿ, ತಾನೊಬ್ಬ ನಟ ಎಂದೆನಿಸಿದ ಮೇಲಷ್ಟೇ ಆತನಿಗೊಂದು ಹೆಸರು, ಜೀವನಕ್ಕೊಂದು ದಾರಿ ಆಗುತಿತ್ತು.ಆದರೆ ಈಗಿನ ಆಧುನಿಕ ಜಗತ್ತಿನಲ್ಲಿ ಎಲ್ಲವೂ ಬೆರಳ ತುದಿಯಲ್ಲಿ!..
ಕಂಡ ಕಂಡಲ್ಲಿ ಮೊಬೈಲ್ ಇಟ್ಟು ರೀಲ್ಸು, ಡಾನ್ಸು ಮಾಡಿ ಜನರ ಚಿತ್ತವನ್ನು ಸುಲಭವಾಗಿ ಸೆಳೆಯುವಲ್ಲಿ ಯಶಸ್ವಿಯಾಗಿದೆ. ನಮ್ಮ ಯುವ ಪೀಳಿಗೆ. ಮೊದಲೆಲ್ಲಾ ಧಾರಾವಾಹಿ, ಸಿನೆಮಾಗಳ ಮೂಲಕ ಕಿರುತೆರೆ ಹಿರಿತೆರೆಗಳಿಗೆ ಕಾಲಿಡಬೇಕೆಂದರೆ ಅದರ ಹಿಂದೆ ಬಹಳಷ್ಟು ಹಸಿವಿನ ಕಥೆಗಳಿತ್ತು, ಶ್ರಮದ ಸಮಾಕ್ಷಮವಿತ್ತು, ಅರ್ಥಬದ್ಧ ಸಿನೆಮಾಗಳಲ್ಲಿ ಅಭಿನಯಕಷ್ಟೇ ಅವಕಾಶವಿತ್ತು.
ಇಂದು ಹಾಗಿಲ್ಲ ಅಲ್ಪ ಸ್ವಲ್ಪ ಅನುಕರಣೆ ಹಾಗೂ ಧ್ವನಿಪಥದೊಂದಿಗಿನ ಹೋಲಿಕೆ ಇವಿಷ್ಟಿದ್ದರೆ ಇತ್ತೀಚಿನ ದಿನಗಳಲ್ಲಿ ಧಾರಾವಾಹಿಗಳಿಗೂ ಚಲನಚಿತ್ರ ರಂಗಕ್ಕೂ ಸುಲಭವಾಗಿ ಬರಬಹುದಾಗಿದೆ.
ಇದು ತಪ್ಪು ಎಂದಲ್ಲ ಇದರಿಂದಾಗಿ ನಮ್ಮ ಸುತ್ತಲಿರುವ ರಂಗ ಕಲಾವಿದರ ಗುರುತಿಸುವಿಕೆ ಕಡಿಮೆ ಆಗಿದೆ. ಬಹುಶಃ ಕರ್ನಾಟಕದಲ್ಲಿ ಬೆರಳಣಿಕೆಯಷ್ಟೇ ರಂಗ ಭೂಮಿ ತಂಡಗಳು ಇದೆ ಎನ್ನಬಹುದು ಆದರೆ ಮನೆಗೊಬ್ಬ ರೀಲ್ಸ್ ಸ್ಟಾರ್ ಇದ್ದಾನೆ ಎಂದರೆ ತಪ್ಪಾಗಲಾರದು. ನಶಿಸುತ್ತಿರುವ ರಂಗಕಲೆಯನ್ನು ಉಳಿಸೋಣ, ನಮ್ಮ ಮನೆಯ ಕಲಾವಿದನನ್ನು ಒಂದು ಉತ್ತಮ ದಾರಿಯ ಮೂಲಕ ವೇದಿಕೆಯತ್ತ ಸಾಗುವಂತೆ ಮಾಡೋಣ….
-ಶ್ರೇಯಾ ಆಚಾರ್ಯ
ಮೂಲ್ಕಿ