Advertisement

ಬಯಲಾಟ ಕಲೆ ಪುನರುಜ್ಜೀವನ ಅಗತ್ಯ

03:05 PM Apr 28, 2019 | Suhan S |

ಶಿಗ್ಗಾವಿ: ಉತ್ತರ ಕರ್ನಾಟಕದ ಮೂಲ ಬಯಲಾಟ ಕಲೆಯು ಅಳಿವಿನತ್ತ ಸಾಗುತ್ತಿದ್ದು, ಅದನ್ನು ಇಂದಿನ ಕಾಲಕ್ಕೆ ತಕ್ಕಂತೆ ಪುನರುಜ್ಜೀವನಗೊಳಿಸಬೇಕಾದ ಅಗತ್ಯವಿದೆ ಎಂದು ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಇಂಗಳಗಿಯ ರಂಗ ಕಲಾವಿದ ಎಂ.ಎಸ್‌. ಮಾಳವಾಡ ಅಭಿಪ್ರಾಯಪಟ್ಟರು.

Advertisement

ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಆಡಳಿತ ಭವನದ ಮಲ್ಲಿಗೆದಂಡೆ ಸಭಾಂಗಣದಲ್ಲಿ ಜರುಗಿದ ತಿಂಗಳ ಅತಿಥಿ ಕಲಾವಿದರೊಂದಿಗೆ ‘ಚಾವಡಿ- 11’ ಕಾರ್ಯಕ್ರಮ ತಿಂಗಳ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಒಬ್ಬ ವೃತ್ತಿ ರಂಗಭೂಮಿ ಕಲಾವಿದನಾಗಲು ಛಲವಿರಬೇಕಾಗುತ್ತದೆ. ಹಸಿವು, ಬಡತನಗಳೇ ಬದುಕಿನ ಪಾಠ ಕಲಿಸಿಕೊಡುತ್ತವೆ. ಈ ಹಿನ್ನೆಲೆಯಲ್ಲಿ ಸಮಾಜಕ್ಕೆ ಉಪಯುಕ್ತವಾದ ಸಂದೇಶಗಳನ್ನು ನೀಡುವ ನಾಟಕಗಳನ್ನು ಅಭಿನಯಿಸುವ ಕಲಾವಿದ ತನ್ನ ಕಲೆಯನ್ನು ತಾನು ಮೊದಲು ಆನಂದಿಸ ಬಲ್ಲವನಾಗಿರಬೇಕು. ಆಗ ಮಾತ್ರ ಒಬ್ಬ ಕಲಾವಿದನಾಗಿ ಯಶಸ್ಸು ಕಾಣಬಹುದು ಎಂದರು.

ವೃತ್ತಿ ರಂಗಭೂಮಿ ಕಲಾವಿದನಾಗಿ ಡೊಡ್ಡಾಟ ಕಲೆಯನ್ನೂ ರೂಢಿಸಿಕೊಂಡು ಅದನ್ನು ಯಶಸ್ವಿಯಾಗಿ ಮುನ್ನಡೆಸಲು ಸಾಕಷ್ಟು ಸಂಕಷ್ಟಗಳನ್ನು ಅನುಭವಿಸಲಾಗಿದೆ. ಅದಕ್ಕಾಗಿ ದೊಡ್ಡಾಟ ಕಲೆಯನ್ನು ಸರ್ವರಿಗೂ ಅರ್ಥವಾಗುವಂತೆ ಸರಳಗೊಳಿಸುವ ಅನಿವಾರ್ಯತೆ ಇದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ| ಡಿ.ಬಿ. ನಾಯಕ ಮಾತನಾಡಿ, ಕಲೆ ಒಂದು ತಪಸ್ಸು ಇದ್ದಂತೆ. ನಾವು ನೋಡುವ ನಿಸರ್ಗವೇ ಕಲೆಯ ಕಲಿಕೆಗೆ ಗುರುವಾಗಬೇಕು. ಸಹಜವಾಗಿ ನಮ್ಮ ಪರಿಸರದಲ್ಲಿ ಘಟಿಸುವ ಘಟನಾವಳಿಗಳೇ ಕಲೆಯನ್ನು ರೂಢಿಸಿಕೊಳ್ಳಲು ಪ್ರೇರಣೆ ಒದಗಿಸುತ್ತದೆ. ಕಲಾವಿದರು ಉಳಿದರೆ ಕಲೆಯು ಉಳಿಯುತ್ತದೆ. ಪರಿಶ್ರಮದಿಂದ ಕಲಾವಿದರು ಕಲೆಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ ಎಂದು ಕಲಾವಿದರ ಕಾರ್ಯವನ್ನು ಶ್ಲಾಘಿಸಿದರು.

Advertisement

ಕರ್ನಾಟಕ ಜಾನಪದ ವಿಶ್ವವಿದ್ಯಾಲಯವು ಕಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಹೊಸ ಯೋಜನೆಗಳನ್ನು ರೂಪಿಸುತ್ತಿದೆ ಹಾಗೂ ದೊಡ್ಡಾಟ, ಸಣ್ಣಾಟ ಹಾಗೂ ಶ್ರೀಕೃಷ್ಣ ಪಾರಿಜಾತದಂಥಹ ಉತ್ತರ ಕರ್ನಾಟಕದ ಕಲಾ ಪರಂಪರೆಗಳನ್ನು ಸಂರಕ್ಷಿಸಲು ಸದಾ ಬದ್ಧವಾಗಿದೆ ಎಂದರು.

ವಿಶ್ವವಿದ್ಯಾಲಯ ಕುಲಸಚಿವ ಪ್ರೊ| ಚಂದ್ರಶೇಖರ, ಮೌಲ್ಯಮಾಪನ ಕುಲಸಚಿವ ಡಾ| ಎಂ.ಎನ್‌. ವೆಂಕಟೇಶ ವೇದಿಕೆಯಲ್ಲಿದ್ದರು. ಸಾಹಿತಿ ಸತೀಶ ಕುಲಕರ್ಣಿ, ಡಾ| ಶ್ರೀಶೈಲ ಹುದ್ದಾರ, ಪರಿಮಳಾ ಜೈನ್‌, ಡಾ| ಹಾ.ತಿ. ಕೃಷ್ಣೇಗೌಡ ಸೇರಿದಂತೆ ಹಲವು ವಿದ್ವಾಂಸರು ಕಾರ್ಯಕ್ರಮದಲ್ಲಿದ್ದರು.

ಎಂ.ಎಸ್‌. ಮಾಳವಾಡ ಅವರ ನೇತೃತ್ವದ ಇಂಗಳಗಿಯ ‘ಗ್ರಾಮರಂಗ’ ಕಲಾ ತಂಡದವರು ಕಿತ್ತೂರ ರಾಣಿ ಚೆನ್ನಮ್ಮ ಕಥೆಯಾಧಾರಿತ ದೊಡ್ಡಾಟದ ಪ್ರಾತ್ಯಕ್ಷಿತೆ ನೀಡಿದರು.

ವಿವಿ ಗೀತ ಸಂಪ್ರದಾಯ ಕೋರ್ಸ್‌ನ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಸಹಾಯಕ ಪ್ರಾಧ್ಯಾಪಕ ಡಾ| ಚಂದ್ರಪ್ಪ ಸೊಬಟಿ ಸ್ವಾಗತಿಸಿದರು. ಡಾ| ಹನಮಪ್ಪ ಎಸ್‌. ಘಂಟಿ ಕಾರ್ಯಕ್ರಮ ನಿರ್ವಹಿಸಿದರು. ಸಂಶೋಧನಾ ವಿದ್ಯಾರ್ಥಿ ಸಣ್ಣಯ್ಯ ಜಿ.ಎಸ್‌. ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next