Advertisement

ಹುಲ್ಲೇ ನಮ್ಮನೆ ದೇವರು!

09:56 AM Nov 12, 2019 | mahesh |

ಝೀರೋ ಟು ಹೀರೋ
ಹೆಸರು- ಪ್ರಕಾಶ್‌ ವಿಜಾಪುರ
ಸ್ಥಳ- ಕುಸುಗಲ್‌ ಗ್ರಾಮ, ಹುಬ್ಬಳ್ಳಿ
ಸಿನ್ಸ್‌- 20011

Advertisement

ಜಾನುವಾರುಗಳಿಗೆ ಮೇವು ನೀಡಲಾಗದೆ ಹೈನುಗಾರಿಕೆಯನ್ನೇ ಬಿಡಬೇಕೆಂದಿದ್ದ ಪ್ರಕಾಶ್‌ ನೀರು ಬೇಡದ ಹೈಡ್ರೋಪೋನಿಕ್‌ ವಿಧಾನದಲ್ಲಿ ಮೇವು ಬೆಳೆದರು.

ಹುಬ್ಬಳ್ಳಿ ಸಮೀಪದ ಕುಸುಗಲ್‌ ಗ್ರಾಮದ ಪ್ರಕಾಶ್‌ ವಿಜಾಪುರರಿಗೆ ಹೈನುಗಾರಿಕೆಯಲ್ಲಿ ಮೂರು ದಶಕದ ಅನುಭವ ಇದ್ದರೂ ಹೈನುಗಾರಿಕೆಯನ್ನು ಬಿಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಅದಕ್ಕೆ ಕಾರಣವಾಗಿದ್ದು ಬರ. ಅವರು, ನೀರು ಕಾಣದ ಪ್ರದೇಶಗಳಲ್ಲಿ ಹಸಿರು ಮೇವನ್ನು ಬೆಳೆಯುತ್ತಿದ್ದಿದ್ದರ ಕುರಿತು ಅವರು ಹಿಂದೆಲ್ಲೋ ಓದಿದ್ದರು. ಆ ಕುತೂಹಲದ ಬೆನ್ನು ಹತ್ತಿ, ನಾನಾ ಬರ ಪ್ರದೇಶಗಳಿಗೆ ಪ್ರಯಾಣಿಸಿ ಅಲ್ಲಿನ ಹೈನುಗಾರಿಕೆ ಮಾದರಿಗಳನ್ನು ಅಧ್ಯಯನ ಮಾಡಿದರು. ಕೃಷಿ ವಿಜ್ಞಾನಿಗಳ ಜೊತೆ ಚರ್ಚೆ ನಡೆಸಿ ಮಾಹಿತಿ ಕಲೆ ಹಾಕಿದರು.

ಬ್ರೆಜಿಲ್‌ ಮತ್ತು ಡೆನ್ಮಾರ್ಕ್‌ ದೇಶಗಳಲ್ಲಿ ಹವಾನಿಯಂತ್ರಿತ ಕೊಠಡಿಗಳಲ್ಲಿ ಮೇವು ಬೆಳೆಸುತ್ತಿರುವ ಬಗ್ಗೆ ಮಾಹಿತಿ ದೊರೆಯಿತು. ಅದರ ಜಾಡು ಹಿಡಿದು, ಬೀಜದ ಆಯ್ಕೆ, ಮೇವು ಬೆಳೆಸುವ ವಿಧಾನವನ್ನು ಕೂಲಂಕಷವಾಗಿ ಅರಿತು, ಮಣ್ಣನ್ನು ಬಳಸದೆಯೇ ಹಸಿರು ಮೇವು ಬೆಳೆಯಲು ಮುಂದಾದರು.

ಸರಳ ಶೆಡ್‌ ರಚನೆ
ಸ್ಥಳೀಯವಾಗಿ ಸಿಗುವ ವಸ್ತುಗಳನ್ನೇ ಬಳಸಿ ಹೈಡ್ರೋಪೋನಿಕ್‌ ಮೇವು ಬೆಳೆಸಲು ಬೇಕಾದ ಶೆಡ್‌ ರಚಿಸಿಕೊಂಡರು. ಬಿದಿರು ಮತ್ತಿತರ ಕಟ್ಟಿಗೆಯ ಕಂಬಗಳನ್ನು ನಿಲ್ಲಿಸಿ, ಅಡ್ಡಲಾಗಿ ಉದ್ದನೆಯ ಕಟ್ಟಿಗೆಯ ಕೋಲುಗಳನ್ನೇ ಕಟ್ಟಿ ಟ್ರೇಗಳನ್ನಿಡಲು ವ್ಯವಸ್ಥೆ ರೂಪಿಸಿಕೊಂಡರು. ಎಪ್ಪತ್ತು ಅಡಿ ಉದ್ದ, ಆರು ಅಡಿ ಅಗಲವಿರುವ ಐದು ಖಾನೆಗಳನ್ನು ಹೊಂದಿರುವ ಸರಳವಾದ ಘಟಕ ರಚನೆ ಮಾಡಿಕೊಂಡರು. ಘಟಕದ ಸುತ್ತಲೂ ಹಸಿರು ಬಣ್ಣದ ಶೆಡ್‌ ನೆಟ್‌ ಅಳವಡಿಸಿಕೊಂಡರು. ನೀರು ಪೂರೈಕೆಗೆಂದು 2000 ಲೀಟರ್‌ ಸಾಮರ್ಥ್ಯದ ಸಿಂಟೆಕ್ಸ್‌ ಅಳವಡಿಸಿಕೊಂಡರು. ನೀರು ಹದವಾಗಿ ಮೇವಿನ ಬೆಳೆಗೆ ಸಿಂಪಡಣೆ ಆಗುವಂತೆ ಮಾಡಲು ಟೈಮರ್‌ ಅಳವಡಿಸಿಕೊಂಡರು. ಪ್ರತಿ ಗಂಟೆಗೊಮ್ಮೆ ಒಂದು ನಿಮಿಷಗಳ ಕಾಲ ನೀರು ತನ್ನಿಂದ ತಾನೇ ಸ್ಪ್ರೆ ಆಗುವುದು ಇದರ ವಿಶೇಷತೆ.

Advertisement

ಬೆಳೆಯುವ ವಿಧಾನ
ಹೈಡ್ರೋಪೋನಿಕ್‌ ಮಾದರಿಯಲ್ಲಿ ಹಸಿರು ಮೇವು ಬೆಳೆಸಲು ಮೆಕ್ಕೆ ಜೋಳ, ಗೋಧಿ, ಬಾರ್ಲಿ, ಹೆಸರುಕಾಳು, ಮಡಿಕೆಕಾಳು, ಅಲಸಂದಿ ಇತ್ಯಾದಿ ಕಾಳುಗಳನ್ನು ಬಳಸಿಕೊಳ್ಳಬಹುದು. ಗೋವಿನ ಜೋಳವನ್ನು ರೈತರಿಂದ ಖರೀದಿಸುವುದು ಉತ್ತಮ. ನುಸಿ ಬಾಧೆಗೆ ಒಳಗಾಗಿರದ, ಚಿಕ್ಕ ಚಿಕ್ಕ ರಂದ್ರಗಳಿಂದ ಕೂಡಿರದ, ಅತೀ ಸಣ್ಣಗಿರುವ ಕಾಳುಗಳನ್ನು ಆಯ್ದುಕೊಳ್ಳಬಾರದು. ಒಂದು ವೇಳೆ ಕಾಳು ಚಿಕ್ಕದಿದ್ದರೂ ಮೊಳಕೆ ಬರುವ ಸ್ಥಳದಲ್ಲಿ ಸ್ಥಳಾವಕಾಶ ಸರಿಯಾಗಿರುವ ಕಾಳುಗಳನ್ನು ಆರಿಸಿಕೊಳ್ಳಬೇಕು. ಆಯ್ದುಕೊಂಡ ಕಾಳುಗಳನ್ನು ನೀರಿನಲ್ಲಿ ತೊಳೆದು ಶುದ್ದಗೊಳಿಸಿಕೊಳ್ಳಬೇಕು. ನಂತರ ಆ ಕಾಳುಗಳನ್ನು ಒಂದು ದಿನದ ಮಟ್ಟಿಗೆ ನೀರಿನಲ್ಲಿ ನೆನೆ ಇಡಬೇಕು. ನೀರಿನಿಂದ ತೆಗೆದ ಕಾಳುಗಳನ್ನು ಎರಡು ದಿನಗಳ ಕಾಲ ಗೋಣಿ ಚೀಲ ಅಥವಾ ಪ್ಲಾಸ್ಟಿಕ್‌ ಬ್ಯಾಗ್‌ನಲ್ಲಿ ಬಿಗಿಯಾಗಿ ಕಟ್ಟಿ ಗಾಳಿಯಾಡದಂತೆ ಬೆಚ್ಚಗಿಡುವುದು ಮುಂದಿನ ಹಂತ. ಚಿಕ್ಕ ಮೊಳಕೆ ಬಂದಂತೆ ಕಂಡು ಬರುವ ಕಾಳುಗಳು ಎರಡು ದಿನದಲ್ಲಿ ಸಿದ್ಧಗೊಂಡಿರುತ್ತದೆ. ಈ ಕಾಳುಗಳನ್ನು ಒಂದು ಅಡಿ ಅಗಲ, ಒಂದೂವರೆ ಅಡಿ ಉದ್ದವಿರುವ ಟ್ರೇಗಳಲ್ಲಿ ಹಾಕಬೇಕು. ಒಂದು ಕಾಳಿನ ಮೇಲೆ ಒಂದು ಕಾಳು ಬೀಳದಂತೆ ತೆಳುವಾಗಿ ಹರಡುವುದು ಬಹಳ ಮುಖ್ಯ. ಒಂದು ಟ್ರೇಗೆ 800 ಗ್ರಾಂ ಕಾಳು ಅಗತ್ಯ.

ಅವರು, ಹಸಿರು ಮೇವಿಗೆ ಜೀವಾಮೃತ ದ್ರಾವಣವನ್ನು ಸಿಂಪಡಿಸುತ್ತಾರೆ. ಪ್ರತಿದಿನ ಸಾಯಂಕಾಲದ ವೇಳೆಗೆ 14 ಲೀಟರ್‌ ನೀರಿಗೆ ಒಂದು ಲೀಟರ್‌ ಜೀವಾಮೃತ ಮಿಶ್ರಣ ಮಾಡಿ ಸಿಂಪಡಿಸುತ್ತಾರೆ. ಒಂಭತ್ತು ದಿನಕ್ಕೆ ಹುಲ್ಲು 8- 10 ಇಂಚುಗಳಷ್ಟು ಬೆಳೆದಿರುತ್ತದೆ. ಪ್ರಕಾಶ್‌ ವಿಜಾಪುರರಿಗೆ ಹೈನುಗಾರಿಕೆ ಬದುಕು ರೂಪಿಸಿಕೊಟ್ಟಿದೆ. ಹೆಸರನ್ನೂ ತಂದುಕೊಟ್ಟಿದೆ. ಕೃಷಿ ವಿಶ್ವವಿದ್ಯಾಲಯ, ಇವರ ಸಾಧನೆಯನ್ನು ಗುರುತಿಸಿ ಗೌರವಿಸಿದೆ. ಸಾವಿರಕ್ಕೂ ಅಧಿಕ ರೈತರು ಇವರ ಡೈರಿ ಫಾರ್ಮ್ಗೆ ಭೇಟಿ ನೀಡಿ ಮೆಚ್ಚುಗೆ ಸೂಚಿಸಿ ಮಾಹಿತಿ ಪಡೆದಿದ್ದಾರೆ. ಸಂಪರ್ಕಿಸಲು: 9538146978

ಒಂದು ಕೆ. ಜಿ ಮೇವು 2 ರೂ.
ಹೈಡ್ರೋಪೋನಿಕ್‌ ವಿಧಾನದಲ್ಲಿ ಬೆಳೆದ ಮೇವು ಜಾನುವಾರುಗಳಿಗೆ ಪರಿಪೂರ್ಣ ಪೋಷಕಾಂಶಗಳನ್ನು ಒದಗಿಸುತ್ತದೆ. ಏನಿಲ್ಲವೆಂದರೂ 10-12 ದಿನಗಳವರೆಗೆ ಹುಲ್ಲನ್ನು ಜಾನುವಾರುಗಳಿಗೆ ನೀಡಬಹುದು. ಒಂದು ಆಕಳಿಗೆ ಒಮ್ಮೆ ಎರಡು ಟ್ರೇ ಹಸಿರು ಮೇವು ನೀಡಿದರೆ ಹಿಂಡಿಯ ಪ್ರಮಾಣವನ್ನು ತಗ್ಗಿಸಬಹುದು. ಕೇವಲ ಎರಡು ರೂಪಾಯಿಗಳಲ್ಲಿ ಒಂದು ಕಿಲೋಗ್ರಾಂ ಮೇವು ಉತ್ಪಾದನೆ ಮಾಡಬಹುದು ಎನ್ನುವುದು ಪ್ರಕಾಶ್‌ ವಿಜಾಪುರ ಅವರ ಅಭಿಪ್ರಾಯ.

ಸಾವಯವ ಕೃಷಿಗೆ
ಕೊಟ್ಟಿಗೆ ತೊಳೆದ ನೀರು, ಗೋಮೂತ್ರ, ಗಂಜಲಗಳು ನೇರವಾಗಿ ಹರಿದು ತೊಟ್ಟಿಯನ್ನು ಸೇರುವ ವ್ಯವಸ್ಥೆ ರೂಪಿಸಿಕೊಂಡಿದ್ದಾರೆ. ಹತ್ತು ಅಡಿ ಆಳ, ಹದಿನೈದು ಅಡಿ ಉದ್ದ, ಹದಿನೈದು ಅಡಿ ಅಗಲದ ತೊಟ್ಟಿ ರಚಿಸಿದ್ದು, ದ್ರವ ತ್ಯಾಜ್ಯಗಳೆಲ್ಲ ತೊಟ್ಟಿಯಲ್ಲಿ ಸರಾಗವಾಗಿ ಹರಿದು ತುಂಬಿಕೊಳ್ಳುತ್ತದೆ. ಹೀಗೆ ತುಂಬಿಕೊಂಡ ದ್ರವವನ್ನು 5 ಎಚ್‌.ಪಿ ಪಂಪ್‌ ಮೂಲಕ ಮೇಲಕ್ಕೆತ್ತಿ ತಮ್ಮ ಕೃಷಿ ಭೂಮಿಗೆ ಹಾಯಿಸುತ್ತಾರೆ. ಇದಕ್ಕಾಗಿಯೇ 800 ಅಡಿ ಉದ್ದದ ಪೈಪ್‌ಲೈನ್‌ ಅಳವಡಿಸಿದ್ದು ವಾರಕ್ಕೊಮ್ಮೆ ಪ್ರತಿ ಎಕರೆ ಹೊಲಕ್ಕೆ ಕೊಟ್ಟಿಗೆಯ ದ್ರವ ತ್ಯಾಜ್ಯ ಹಾಯಿಸುತ್ತಾರೆ.

– ಕೋಡಕಣಿ ಜೈವಂತ ಪಟಗಾರ

Advertisement

Udayavani is now on Telegram. Click here to join our channel and stay updated with the latest news.

Next