Advertisement

ದೂರದೂರುಗಳಲ್ಲಿ ರಾರಾಜಿಸುತ್ತಿದೆ ಉಡುಪಿಯ ಕಲಾಕೃತಿ

10:01 PM Dec 28, 2020 | mahesh |

ಉಡುಪಿ: ಉಡುಪಿಯಲ್ಲಿ ಅರಳಿದ ರಾಮಧ್ಯಾನನಿರತ ಹನುಮನ ಕಲಾಕೃತಿ ಚೆನ್ನೈನಂತಹ ದೂರದೂರುಗಳಲ್ಲಿರುವ ಪ್ರಸಿದ್ಧ ಸಂಗೀತ ಕಲಾವಿದರ ಮನೆಗಳಲ್ಲಿ ರಾರಾಜಿಸುತ್ತಿವೆ. ಕಲಾವಿದರ ವೈಶಿಷ್ಟ್ಯವೆಂದರೆ ಮಧ್ಯವಯಸ್ಸಿನ ಅನಂತರ ಅರಳಿದ ಕಲಾಕುಸುಮವಿದು.
ಈ ಹನುಮನ ಚಿತ್ರಕ್ಕೆ ಪ್ರೇರಣೆ ಸುಳ್ಯಪದವು ಸಮೀಪದ ಈಶ್ವರಮಂಗಲದ ರಾಮಾಂಜನೇಯ ದೇವಸ್ಥಾನದಲ್ಲಿರುವ ಗ್ರಾನೈಟ್‌ ಶಿಲ್ಪ ಕಲಾಕೃತಿ. ಅದನ್ನು ನೋಡಿ 4×3 ಅಡಿ ಕ್ಯಾನ್‌ವಾಸ್‌ನಲ್ಲಿ ಚಿತ್ರವನ್ನು ಬರೆದಾಗ ಇದಕ್ಕೆ ಬಲು ಬೇಡಿಕೆ ಬಂತು. ಇದರ ಪರಿಣಾಮ ಚಿತ್ರವು ದೂರದೂರುಗಳಿಗೆ ಲಂಘನ ಮಾಡುವಂತಾಯಿತು.

Advertisement

ಕಲಾವಿದೆಯ ಕೈಚಳಕ
ಉಡುಪಿಯ ಹಯಗ್ರೀವನಗರದ ನಿವಾಸಿ, ಎಂಜಿಎಂ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ, ಸಂಗೀತಕಾರ ಪ್ರೊ|ವಿ.ಅರವಿಂದ ಹೆಬ್ಟಾರ್‌ ಅವರ ಪತ್ನಿ, ಸ್ವತಃ ಸಂಗೀತ ಕಲಾವಿದೆಯೂ, ಚಿತ್ರಕಲಾವಿದೆಯೂ ಆದ ವಸಂತಲಕ್ಷ್ಮೀ ಹೆಬ್ಟಾರ್‌ ಅವರು ಈ ಚಿತ್ರಕಲಾವಿದೆ. 1980ರ ದಶಕದ ಆರಂಭದಲ್ಲಿ ಎಂಜಿಎಂ ಕಾಲೇಜಿನಲ್ಲಿ ಬಿ.ಕಾಂ. ಓದುವಾಗಲೇ ಚಿತ್ರ ಕಲಾವಿದೆಯಾಗಿ ವಸಂತಲಕ್ಷ್ಮೀ ಮೂಡಿಬಂದಿದ್ದರು. ಆಗ ನೈಫ್ ಆರ್ಟ್‌ ನಲ್ಲಿ ಮೂಡಿಬಂದ ಏಸುಕ್ರಿಸ್ತನ ಚಿತ್ರ “ತರಂಗ’ ವಾರಪತ್ರಿಕೆಯಲ್ಲಿ ಪ್ರಕಟವಾಗಿ ಶಹಬ್ಟಾಸ್‌ಗಿರಿ ಪಡೆದುಕೊಂಡಿತ್ತು. ಕ್ರಮೇಣ ಅವರಲ್ಲಿದ್ದ ಕಲಾವಿದ ಮನಸ್ಸು ಅರಳುತ್ತ ಅರಳುತ್ತ ಈಗ ಪೇಜಾವರ ಶ್ರೀ, ಭೀಮ್‌ಸೇನ್‌ ಜೋಷಿ, ಡಿ.ಕೆ.ಪಟ್ಟಮ್ಮಾಳ್‌, ಎಂ.ಎಸ್‌.ಸುಬ್ಬಲಕ್ಷ್ಮೀ, ರವಿಶಂಕರ್‌ ಗುರೂಜಿ, ಕುಮಾರಗಂಧರ್ವ, ಗಂಗೂಬಾಯಿ ಹಾನಗಲ್‌, ಶಮ್ಮಂಗುಡಿ ಶ್ರೀನಿವಾಸ ಅಯ್ಯಂಗಾರ್‌, ಎ.ಈಶ್ವರಯ್ಯ ಮೊದಲಾದವರ ಕಲಾಕೃತಿಗಳು ಮನೆಯನ್ನು ಅಂದಗಾಣಿಸಿವೆ. ಇತ್ತೀಚೆಗೆ ಮೈಸೂರಿಗೆ ಹೋಗಿದ್ದಾಗ ಕುವೆಂಪು ಕಲಾಕೃತಿ ಎರಡೇ ಗಂಟೆಗಳಲ್ಲಿ ಕುಂಚದಲ್ಲಿ ಮೂಡಿಬಂತು.

ಸುಪ್ರಸಿದ್ಧರ ಮನೆಗೆ ಕಲಾಕೃತಿ
ಅರವಿಂದ ಹೆಬ್ಟಾರ್‌, ವಸಂತಲಕ್ಷ್ಮೀಯವರ ಮನೆಗೂ ಸಂಗೀತ ಕಲಾವಿದರಿಗೂ ಅದಮ್ಯವಾದ ನಂಟಿದೆ. ಇವರ ಮಾರ್ಗದರ್ಶನ, ಪೋಷಕತ್ವದಲ್ಲಿ ನಡೆಯುತ್ತಿರುವ ಲತಾಂಗಿ ಸ್ಕೂಲ್‌ ಆಫ್ ಮ್ಯೂಸಿಕ್‌ನಲ್ಲಿ ಅರಳಿದ ಪ್ರತಿಭೆಗಳು ಈಗ ರಾಷ್ಟ್ರ ಮಟ್ಟಕ್ಕೆ ತಲುಪಿವೆ. ಇಲ್ಲಿಗೆ ಸಂಗೀತ ಕಛೇರಿ ನಡೆಸಲು ಬಂದ ಕಲಾವಿದರು ಹನುಮನ ಚಿತ್ರವನ್ನು ಕಂಡು ಆಸಕ್ತಿ ತಾಳಿದಾಗ ಅದರ ಪ್ರತಿಕೃತಿಯನ್ನು ಮುದ್ರಿಸಿ ಕಲಾವಿದರಿಗೆ ನೀಡಲು ಆರಂಭಿಸಿದರು. ಹೀಗಾಗಿ ಪ್ರಸಿದ್ಧ ಕಲಾವಿದರ ಮನೆಗೆ ಈ ಕಲಾಕೃತಿ ತಲುಪುವಂತಾಯಿತು.

ವಸಂತಲಕ್ಷ್ಮೀಅವರು ಉಡುಪಿಯ ದೃಶ್ಯ ಸ್ಕೂಲ್‌ ಆಫ್ ಆರ್ಟ್ಸ್ನ ಮುಖ್ಯಸ್ಥ, ಹಿರಿಯ ಚಿತ್ರ ಕಲಾವಿದ ರಮೇಶ ರಾವ್‌ ಅವರಲ್ಲಿ ಮಾರ್ಗದರ್ಶನ ಪಡೆಯುತ್ತಿದ್ದರು. ಏಳು ವರ್ಷಗಳ ಹಿಂದೆ ಪುತ್ರಿ, ಪ್ರಸಿದ್ಧ ಕಲಾವಿದೆ ರಂಜನಿ ಹೆಬ್ಟಾರ್‌ ನಿಧನರಾದ ಬಳಿಕ ರಂಜನಿಯಂತಹ ಉತ್ಕೃಷ್ಟ ಸಂಗೀತ ಕಲಾವಿದೆಯರನ್ನು ತಯಾರುಗೊಳಿಸುತ್ತಲೇ ಚಿತ್ರಕಲೆಯಲ್ಲಿ ತೊಡಗಿಸಿಕೊಳ್ಳಲು ಮುಂದಾದರು. ಮುಂಬಯಿಗೆ ತೆರಳಿ ಕಲಾವಿದೆ ಶರ್ಮಿಳಾ ಗುಪ್ತರಲ್ಲಿ ಒಂದು ತಿಂಗಳಿದ್ದು ತರಬೇತಿ ಪಡೆದರು. ಇವರು ಪೆನ್ಸಿಲ್‌ನಲ್ಲಿ ಚಿತ್ರ ಮೂಡಿಸಿ ಬಳಿಕ ಅಕ್ರಿಲಿಕ್‌/ತೈಲವರ್ಣದಲ್ಲಿ ಚಿತ್ರಗಳನ್ನು ಮೂಡಿಸುತ್ತಿದ್ದಾರೆ. ಎಪ್ರಿಲ್‌ನಲ್ಲಿ ರಮೇಶ್‌ ರಾವ್‌ ಮಾರ್ಗದರ್ಶನದಲ್ಲಿ ಚಿತ್ರ ಪ್ರದರ್ಶನ ನೀಡುವ ಇರಾದೆ ಹೊಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next