Advertisement

ಕಲೆ ಅಳಿಸುವ ಕಲೆ

07:33 PM Feb 11, 2020 | mahesh |

ಹಾಲು ಒಡೆಯಲು ಒಂದು ಹನಿ ಹುಳಿ ಸಾಕು. ಹಾಗೆಯೇ, ಬಟ್ಟೆ ಹಾಳಾಗಲು ಒಂದು ಚಿಕ್ಕ ಕಲೆ ಸಾಕು. ಅದರಲ್ಲೂ ಹೊಸ ಬಟ್ಟೆ ಮೇಲೆ ಕಲೆ ಆಗಿಬಿಟ್ಟರಂತೂ, ಧರಿಸುವಂತಿಲ್ಲ, ಬಿಡುವಂತಿಲ್ಲ ಎಂದು ಪೇಚಾಡುವ ಪರಿಸ್ಥಿತಿ. ಕಠಿಣ ಕಲೆಯನ್ನು ಅಳಿಸುವುದು ಸವಾಲಿನ ಕೆಲಸವೇ. ಆ ಸವಾಲನ್ನು ಸ್ವಲ್ಪ ಸುಲಭ ಮಾಡುವಂಥ ಟಿಪ್ಸ್‌ಗಳು ಇಲ್ಲಿವೆ. ಯಾವ ಕಲೆಗೆ, ಯಾವುದು ರಾಮಬಾಣ ಅಂತ ನೋಡಿ…

Advertisement

-ಆಯಿಲ್‌ ಪೇಂಟ್‌, ಗ್ರೀಸ್‌
ಆಯಿಲ್‌ ಪೇಂಟ್‌ ಹತ್ತಿದ ಬಟ್ಟೆಯನ್ನು, ಸೀಮೆಎಣ್ಣೆಯಲ್ಲಿ ಒಂದು ಗಂಟೆ ನೆನೆಸಿಟ್ಟು, ಬಟ್ಟೆ ಸೋಪ್‌/ಪೌಡರ್‌ನಿಂದ ತೊಳೆದರೆ ಕಲೆ ಹೋಗುತ್ತದೆ.

-ಲಿಪ್‌ಸ್ಟಿಕ್‌
ಲಿಪ್‌ಸ್ಟಿಕ್‌ ಕಲೆಯ ಅಂಟಿರುವ ಜಾಗಕ್ಕೆ ಗ್ಲಿಸರಿನ್‌ ಹಚ್ಚಿ, ಕಲೆ ಸಂಪೂರ್ಣವಾಗಿ ಹೋಗುವವರೆಗೆ ಉಜ್ಜಿ, ನಂತರ ಸೋಪ್‌ ಹಾಕಿ ತೊಳೆಯಿರಿ.

-ರಕ್ತ
ಬಟ್ಟೆಯ ಮೇಲೆ ರಕ್ತ ಬಿದ್ದ ತಕ್ಷಣ, ಉಪ್ಪುನೀರಿನಿಂದ ತೊಳೆದರೆ ಕಲೆ ಉಳಿಯುವುದಿಲ್ಲ. ಇಲ್ಲದಿದ್ದರೆ, ಉಪ್ಪಿನ ನೀರಿನಲ್ಲಿ ಒಂದೆರಡು ಗಂಟೆ ನೆನೆಸಿಟ್ಟು, ನಂತರ ತೊಳೆದರೆ ಕಲೆ ಹೋಗುತ್ತದೆ.

-ಟೀ, ಕಾಫಿ
ಕಲೆ ಆಗಿರುವ ಜಾಗಕ್ಕೆ ಎತ್ತರದಿಂದ ಬಿಸಿ ನೀರನ್ನು ಚೆಲ್ಲಿ. ನಂತರ, ಬಿಸಿ ಸೋಪಿನ ನೀರಿನಲ್ಲಿ ತೊಳೆಯಬೇಕು.

Advertisement

-ಶಾಯಿಯ ಬಣ್ಣ
ಟೊಮೇಟೋ ತುಂಡಿನಿಂದ, ಕಲೆಯಿರುವ ಭಾಗವನ್ನು ಚೆನ್ನಾಗಿ ಉಜ್ಜಿ. ನಂತರ ಕಲೆಯ ಭಾಗಕ್ಕೆ ಉಪ್ಪು ಲೇಪಿಸಿ, ತಣ್ಣೀರಿನಲ್ಲಿ ತೊಳೆಯಿರಿ. ಕಲೆಯಿರುವ ಭಾಗವನ್ನು ಅರ್ಧ ಗಂಟೆ ಮೊಸರಿನಲ್ಲಿ ನೆನೆಸಿಟ್ಟು, ನಂತರ ತೊಳೆದರೂ ಸರಿಯೇ.

-ಎಲೆ ಅಡಿಕೆ ರಸ
ಬಟ್ಟೆಯ ಮೇಲೆ ಎಲೆ ಅಡಿಕೆ ರಸವೇನಾದರೂ ಬಿದ್ದಿದ್ದರೆ, ಆ ಜಾಗಕ್ಕೆ ಸೀಬೆಕಾಯಿ ರಸ ಹಚ್ಚಿ, ಚೆನ್ನಾಗಿ ಉಜ್ಜಿ ಆನಂತರ ತೊಳೆಯಬೇಕು.

-ಎಣ್ಣೆ
ಕಲೆಯಾಗಿರುವ ಭಾಗವನ್ನು ಹೀರಿಕೊಳ್ಳುವಂತೆ ಸೀಮೆ ಸುಣ್ಣ, ಫೇಸ್‌ ಪೌಡರ್‌, ಟಾಲ್ಕಮ್‌ ಪೌಡರ್‌ನಂಥ ವಸ್ತುಗಳಿಂದ ಪುಡಿಯನ್ನು ಹರಡಬೇಕು. ಕುದಿಯುವ ನೀರನ್ನು ಬಹಳ ಎತ್ತರದಿಂದ ಸುರಿದು ಸೋಪಿನಿಂದ ತೊಳೆಯಬೇಕು.

-ತುಕ್ಕು
ಲಿಂಬೆ ರಸ ಮತ್ತು ಉಪ್ಪನ್ನು ಬೆರೆಸಿದ ಮಿಶ್ರಣದಲ್ಲಿ ತುಕ್ಕಿನ ಕಲೆ ಇರುವ ಬಟ್ಟೆಯ ಭಾಗವನ್ನು ಸ್ವಲ್ಪ ಹೊತ್ತು ನೆನೆಸಿ, ನಂತರ ಬಟ್ಟೆಯನ್ನು ಬಿಸಿಲಿನಲ್ಲಿ ಒಣಗಿಸಿ. ಇದೇ ರೀತಿ 2-3 ಸಾರಿ ಮಾಡಿದರೆ ಕಲೆ ಹೋಗುತ್ತದೆ.

-ಬಾಲ್‌ ಪಾಯಿಂಟ್‌ ಪೆನ್‌
ಸ್ಪಿರಿಟ್‌ ಅನ್ನು ಲೇಪಿಸಿ ಸರಿಯಾಗಿ ಉಜ್ಜಿ, ಆಮೇಲೆ ಸೋಪಿನಿಂದ ತೊಳೆಯಬೇಕು.

-ಶಿವಲೀಲಾ ಸೊಪ್ಪಿಮಠ

Advertisement

Udayavani is now on Telegram. Click here to join our channel and stay updated with the latest news.

Next