ಉಡುಪಿ: ಕಡಂದೇಲು ಪುರುಷೋತ್ತಮ ಭಟ್ ಅವರ ಕಲಾಪ್ರೌಢಿಮೆ ಪ್ರತಿಯೊಬ್ಬ ಕಲಾವಿದನಿಗೂ ಸ್ಫೂರ್ತಿ ಎಂದು ಪರ್ಯಾಯ ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಹೇಳಿದರು.
ಶ್ರೀಕೃಷ್ಣ ಮಠ, ಪರ್ಯಾಯ ಶ್ರೀ ಪೇಜಾವರ ಮಠದ ಆಶ್ರಯದಲ್ಲಿ ಯಕ್ಷಗಾನ ಕಲಾರಂಗ ಅ. 29ರಂದು ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಆಯೋಜಿಸಿದ ಕಡಂದೇಲು ಪುರುಷೋತ್ತಮ ಭಟ್ ಶತಸ್ಮತಿ ಮರ್ಯಾದಾ ಪುರುಷೋತ್ತಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಂಸ್ಮರಣಾ ಭಾಷಣ ಮಾಡಿದ ಯಕ್ಷಗಾನ ವಿದ್ವಾಂಸ ಡಾ| ಎಂ. ಪ್ರಭಾಕರ ಜೋಶಿ ಮಾತನಾಡಿ, ಕಡಂದೇಲು ಪುರುಷೋತ್ತಮ ಭಟ್ ಅವರು ತನ್ನ ಪಾತ್ರದ ಸ್ವರೂಪ, ಬೇರೆಬೇರೆ ಘಟ್ಟಗಳನ್ನು ಅತ್ಯುತ್ತಮವಾಗಿ ಚಿತ್ರಿಸಿದವರು.ಕಲಾವಿದನ ಗೌರವ ಕಾಪಾಡಿಕೊಂಡು ಬದುಕಿದ್ದರು ಎಂದು ಹೇಳಿದರು.
ಪತ್ರಕರ್ತ ಪೃಥ್ವಿರಾಜ್ ಕವತ್ತಾರು ರಚಿಸಿರುವ ಕಡಂದೇಲು ಪುರುಷೋತ್ತಮ ಅವರ ಕುರಿತಾದ “ಮರ್ಯಾದಾ ಪುರುಷೋತ್ತಮ’ ಕೃತಿಯನ್ನು ಪರ್ಯಾಯ ಶ್ರೀಗಳು ಅನಾವರಣಗೊಳಿಸಿದರು. ಶಿಮಂತೂರು ನಾರಾಯಣ ಶೆಟ್ಟಿ ಅವರಿಗೆ ಶ್ರೀರಾಮ ವಿಠಲ ಪ್ರಶಸ್ತಿ ಪ್ರದಾನ ಮಾಡಿದರು.
ಗೋಪಾಲಕೃಷ್ಣ ಆಸ್ರಣ್ಣ, ಕುದ್ರೆಗೋಡ್ಲು ರಾಮ ಭಟ್, ಪಡ್ರೆ ಚಂದು,ಪಡ್ರೆ ಶ್ರೀಪತಿ ಶಾಸಿŒ, ಅಳಕೆ ರಾಮ ರೈ ಹಾಗೂ ಬಲಿಪ ನಾರಾಯಣ ಭಾಗವತ ಅವರಿಗೆ ಸ್ಮತಿ ಗೌರವ ಸಲ್ಲಿಸಲಾ
ಯಿತು. ಮೂವರು ಯಕ್ಷಗಾನ ಕಲಾವಿದರ ಕುಟುಂಬಸ್ಥರಿಗೆ ತಲಾ 50 ಸಾವಿರದಂತೆ 1.5. ಲಕ್ಷ ರೂ. ಗುಂಪು ವಿಮೆ ಹಸ್ತಾಂತರಿಸಲಾಯಿತು.
ಪೇಜಾವರ ಮಠದ ಕಿರಿಯ ಯತಿ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು, ಕಟೀಲು ಕ್ಷೇತ್ರದ ಆನುವಂಶಿಕ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ, ಕೆ. ಸದಾಶಿವ ಭಟ್ ಇದ್ದರು. ಯಕ್ಷಗಾನ ಕಲಾರಂಗದ ಅಧ್ಯಕ್ಷ ಕೆ.ಗಣೇಶ್ ರಾವ್ ಸ್ವಾಗತಿಸಿ, ಕಾರ್ಯದರ್ಶಿ ಮುರಲಿ ಕಡೆಕಾರ್ ನಿರೂಪಿಸಿದರು.ಎಚ್.ಎನ್. ಶೃಂಗೇಶ್ವರ್ ವಂದಿಸಿದರು.