Advertisement

ಸಂಚಾರಿ ಗೊಂಬೆಯ ಸಮಾಚಾರ

02:42 PM Sep 29, 2018 | |

ಗೊಂಬೆಯಾಟ ಎಂದರೆ ಈಗಿನ ಮಕ್ಕಳ ಕಣ್ಮುಂದೆ ಕಾರ್ಟೂನ್‌ ಗೊಂಬೆಗಳೇ ಕುಣಿಯುತ್ತವೇನೋ. ಒಂದು ಕಾಲದಲ್ಲಿ ಮನೆಮನೆಯ ಮಾತಾಗಿದ್ದ ಗೊಂಬೆಯಾಟ ಕ್ರಮೇಣ ನೇಪಥ್ಯಕ್ಕೆ ಸರಿಯುತ್ತಾ ಬಂತು. ಈ ಪುರಾತನ ಕಲೆಯನ್ನು ಜೀವಂತವಾಗಿರಿಸಲು ಪ್ರಯತ್ನಗಳು ನಡೆಯುತ್ತಲೇ ಇದ್ದು, ಆ ನಿಟ್ಟಿನಲ್ಲಿ ಪುತ್ಥಳಿ ಕಲಾರಂಗ ಸಂಚಾರಿ ಸೂತ್ರಗೊಂಬೆಯಾಟ ರಂಗಶಾಲೆಯ ಕೆಲಸ ಗುರುತಿಸುವಂಥದ್ದು. ವೃತ್ತಿಯಲ್ಲಿ ಅಧ್ಯಾಪಕರಾಗಿರುವ ದತ್ತಾತ್ರೇಯ ಅರಳಿಕಟ್ಟೆ, ಮತ್ತವರ ತಂಡ ಈ ಶಾಲೆಯ ಮೂಲಕ ಗೊಂಬೆಯಾಟಕ್ಕೆ ಜೀವ ತುಂಬಿದೆ. 

Advertisement

ಸೂತ್ರ ಸಲಾಕೆ ಗೊಂಬೆಯಾಟ…
ಗೊಂಬೆಯಾಟದಲ್ಲಿ ಒಟ್ಟು 5 ಪ್ರಕಾರಗಳಿವೆ. ಸೂತ್ರ ಗೊಂಬೆ, ಸಲಾಕೆ ಗೊಂಬೆ, ಸೂತ್ರ ಸಲಾಕೆ ಗೊಂಬೆ, ತೊಗಲು ಗೊಂಬೆ ಹಾಗೂ ಕೈಗೊಂಬೆ. ಪುತ್ಥಳಿ ಕಲಾರಂಗಶಾಲೆ, ಸೂತ್ರ ಸಲಾಕೆ ಗೊಂಬೆಗಳ ಪ್ರದರ್ಶನದಲ್ಲಿ ವಿಭಿನ್ನ ಪ್ರಯತ್ನಗಳನ್ನು ಮಾಡುತ್ತಿದೆ. ಈ ಗೊಂಬೆಗಳು ಮೂರೂವರೆ ಅಡಿ ಎತ್ತರವಿದ್ದು, ಸುಮಾರು 8 ಕೆ.ಜಿ. ತೂಗುತ್ತವೆ. ಮರದಿಂದ ಮಾಡುವ ಈ ಗೊಂಬೆಗಳನ್ನು, ಶಿಲ್ಪಶಾಸ್ತ್ರಕ್ಕೆ ಅನುಗುಣವಾಗಿ ಅಲಂಕರಿಸಲಾಗುತ್ತದೆ. ಈ ಗೊಂಬೆಯಾಟ, ಪುರಾಣ ಪ್ರಸಂಗಗಳನ್ನು ಆಧರಿಸಿದ್ದಾಗಿರುತ್ತವೆ.

ರಂಜನೆ, ಬೋಧನೆ…
ಕುಮಾರ ಸಂಭವ, ಗಿರಿಜಾ ಕಲ್ಯಾಣ, ಕೃಷ್ಣ ತುಲಾಭಾರ, ಶ್ರೀಕೃಷ್ಣ ಪಾರಿಜಾತ, ಹನುಮತ್‌ ವಿಲಾಸ್‌, ಲಂಕಾದಹನ… ಇತ್ಯಾದಿ ಪ್ರಸಂಗಗಳ ಮೂಲಕ ಜನರನ್ನು ರಂಜಿಸುವುದಲ್ಲದೆ, ಜನಸಂಖ್ಯಾಸ್ಫೋಟ, ಪರಿಸರ ಮಾಲಿನ್ಯ, ಸ್ತ್ರೀ ಶಿಕ್ಷಣ ಮುಂತಾದ ಸಮಸ್ಯೆಗಳನ್ನೂ ಗೊಂಬೆಯಾಟಕ್ಕೆ ಅಳವಡಿಸಿ ಅರಿವು ಮೂಡಿಸಲಾಗುತ್ತಿದೆ. ಅಷ್ಟೇ ಅಲ್ಲದೆ, ಗೊಂಬೆ ರಚನೆ ತರಬೇತಿಯನ್ನೂ ದತ್ತಾತ್ರೇಯ ಮತ್ತು ತಂಡ ನೀಡುತ್ತದೆ. ಇದುವರೆಗೆ ದೇಶ- ವಿದೇಶಗಳಲ್ಲಿ ನಡೆದಿರುವ ಈ ಕಾರ್ಯಾಗಾರಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ.
  ಅಂದಹಾಗೆ, ದತ್ತಾತ್ರೇಯ ಅವರು ಮೂಲತಃ ಶೃಂಗೇರಿ ಸಮೀಪದ ಅರಳಿಕಟ್ಟೆಯವರು. ವಿದ್ಯಾರ್ಥಿ ದಿಶೆಯಲ್ಲಿ ರಂಗಭೂಮಿಯ ಬಗ್ಗೆ ಆಸಕ್ತಿ ಹೊಂದಿದ್ದ, ಇವರು ನಂತರದ ದಿನಗಳಲ್ಲಿ ವಿಭಿನ್ನ ಸಾಹಸಕ್ಕೆ ಕೈ ಹಾಕಿದರು. ಆ ಫ‌ಲವೇ ಸಂಚಾರಿ ಪುತ್ಥಳಿ ಕಲಾರಂಗ ಶಾಲೆ. ಇವರಿಗೆ ಆರ್ಯಭಟ ಪ್ರಶಸ್ತಿಯೂ ಸೇರಿ ರಾಷ್ಟ್ರ- ಅಂತಾರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿವೆ.

ಸಪ್ತ ಕಲಾವಿದರ ಸಂಚಾರಿ ತಂಡ
7 ಕಲಾವಿದರಿರುವ ಈ ತಂಡ, ಸುಮಾರು 35 ವರ್ಷಗಳಿಂದ, ಜನರು ಕರೆದಲ್ಲಿಗೇ ಹೋಗಿ ವಿಭಿನ್ನ ಪ್ರಯೋಗಗಳ ಮೂಲಕ ಮನರಂಜಿಸುತ್ತಾ ಬಂದಿದೆ. ದತ್ತಾತ್ರೇಯ ಅವರು, ಬಿ.ಎಚ್‌.ಎಸ್‌. ವಿದ್ಯಾಸಂಸ್ಥೆಯಲ್ಲಿ ಅಧ್ಯಾಪಕರಾಗಿದ್ದುಕೊಂಡೇ ತಂಡವನ್ನು ಮುನ್ನಡೆಸುತ್ತಿದ್ದಾರೆ. 

ಬಳಕೂರು ವಿ.ಎಸ್‌. ನಾಯಕ್‌ 

Advertisement
Advertisement

Udayavani is now on Telegram. Click here to join our channel and stay updated with the latest news.

Next