ಹೊಸಪೇಟೆ: ಇದೆ ಆ.20 ಮತ್ತು 21 ರಂದು ತುಂಗಭದ್ರಾ ಡ್ಯಾಂ ಮತ್ತು ಐತಿಹಾಸಿಕ ಹಂಪಿಗೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಭೇಟಿ ನೀಡಲಿದ್ದಾರೆ. ಗಣ್ಯರ ಭೇಟಿ ಹಿನ್ನೆಲೆ ಹಂಪಿಯಲ್ಲಿ ಸಿದ್ಧತೆ ಕಾರ್ಯ ನಡೆದಿದೆ.
ಆಗಸ್ಟ್ 20 ರಂದು ಹುಬ್ಬಳ್ಳಿಯಿಂದ ಹೆಲಿಕಾಪ್ಟರ್ ಮೂಲಕ ನಗರದ ತಾಲೂಕು ಕ್ರೀಡಾಂಗಣಕ್ಕೆ ಸಂಜೆ 5.20ಕ್ಕೆ ಆಗಮಿಸಲಿದ್ದಾರೆ. ಬಳಿಕ ಅವರು ತುಂಗಭದ್ರಾ ಜಲಾಶಯ ವೀಕ್ಷಿಸಲಿದ್ದಾರೆ. ಆನಂತರ ಕಮಲಾಪುರದ ಮಯೂರ ಭುವನೇಶ್ವರಿ ಹೊಟೇಲ್‌ನಲ್ಲಿ ತಂಗಲಿದ್ದಾರೆ.
ಆ.21 ರಂದು ಹಂಪಿಯ ಸ್ಮಾರಕಗಳನ್ನು ವೀಕ್ಷಿಸಲಿದ್ದಾರೆ. ಇಲ್ಲಿನ ಶ್ರೀವಿರೂಪಾಕ್ಷೇಶ್ವರ ದೇವಸ್ಥಾನ, ಕಡಲೆ ಕಾಳು, ಸಾಸಿವೆ ಕಾಳು ಗಣೇಶ ಮಂಟಪಗಳು, ಶ್ರೀಕೃಷ್ಣ ದೇವಸ್ಥಾನ, ಕಮಲ ಮಹಲ, ಗಜಶಾಲೆ, ಮಹಾನವಮಿ ದಿಬ್ಬ, ವಿಜಯ ವಿಠ್ಠಲ ದೇಗುಲ, ಕಲ್ಲಿನ ತೇರು ಸೇರಿದಂತೆ ನಾನಾ ಸ್ಮಾರಕಗಳನ್ನು ವೀಕ್ಷಿಸಲಿದ್ದಾರೆ. ಆ. 22 ರಂದು ವಿಶೇಷ ಹೆಲಿಕಾಪ್ಟರ್‌ನಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ತೆರಳಲಿದ್ದಾರೆ.
ಉಪರಾಷ್ಟ್ರಪತಿ ಅವರ ಆಗಮನದ ಹಿನ್ನೆಲೆಯಲ್ಲಿ ಹಂಪಿಯಲ್ಲಿನ ಸ್ಮಾರಕಗಳ ಸುತ್ತ ಸ್ವಚ್ಛತೆ ಕೈಗೊಳ್ಳಲಾಗುತ್ತಿದೆ. ಜತೆಗೆ ಸ್ಮಾರಕಗಳಿಗೆ ಕಟ್ಟಿಗೆ ಮೆಟ್ಟಿಲು ಕೂಡ ಜೋಡಿಸಲಾಗಿದೆ.