ಬೆಂಗಳೂರು: ಕ್ಷುಲ್ಲಕ ವಿಚಾರಕ್ಕೆ ಪರಿಚಿತ ಯುವಕನಿಗೆ ಚಾಕುವಿನಿಂದ ಇರಿದು ಹಲ್ಲೆ ನಡೆಸಿದ್ದ ಇಬ್ಬರು ಆರೋಪಿಗಳನ್ನು ಬ್ಯಾಟರಾಯನಪುರ ಪೊಲೀಸರು ಬಂಧಿಸಿದ್ದಾರೆ.
ಶ್ರೀನಗರದ ಕಿರಣ್‌ಕುಮಾರ್ ಅಲಿಯಾಸ್ ತಲೆ (26) ಮತ್ತು ಶಿವಕುಮಾರ್ ಅಲಿಯಾಸ್ ಲಾಲಿ (26) ಬಂಧಿತರು.
ಆರೋಪಿಗಳು ಮೇ 12ರ ಮುಂಜಾನೆ ಮೈಸೂರು ರಸ್ತೆಯಲ್ಲಿರುವ ಸ್ಯಾಟಲೈಟ್ ಬಸ್ ನಿಲ್ದಾಣದ ಸಮೀಪದಲ್ಲಿ ಶ್ರೀನಗರ ನಿವಾಸಿ ಶಿವು ಎಂಬಾತನಿಗೆ ಚಾಕುವಿನಿಂದ ಹಲ್ಲೆ ನಡೆಸಿದ್ದರು. ಅದೃಷ್ಟವಶಾತ್ ಶಿವು ಪ್ರಾಣಾಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾನೆ.
ಆರೋಪಿಗಳ ಪೈಕಿ ಶಿವಕುಮಾರ್ ಆಟೋ ಚಾಲಕನಾಗಿದ್ದಾನೆ. 2017ರಲ್ಲಿ ಸುಬ್ರಹ್ಮಣ್ಯ ನಗರದಲ್ಲಿ ನಡೆದ ಕೊಲೆ ಪ್ರಕರಣದ ಆರೋಪಿಯಾಗಿರುವ ಕಿರಣ್ ಕುಮಾರ್, ಒಂದೂವರೆ ವರ್ಷ ಜೈಲಿನಲ್ಲಿದ್ದು ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ. ಹಲ್ಲೆಗೊಳಗಾದ ಶಿವು, ಸಂಬಂಧಿಯೊಬ್ಬರ ಐರನ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು ಪೊಲೀಸರು ಹೇಳಿದರು.
ಶಿವು ಹಾಗೂ ಆರೋಪಿಗಳು ಪರಸ್ಪರ ಪರಿಚಿತರು. ಮೇ 12ರಂದು ಮುಂಜಾನೆ 2.45ರ ಸುಮಾರಿಗೆ ಶಿವು ಮೈಸೂರು
ರಸ್ತೆಯಲ್ಲಿರುವ ಸ್ಯಾಟಲೈಟ್ ಬಸ್ ನಿಲ್ದಾಣದ ಸಮೀಪದಲ್ಲಿರುವ ಅಂಗಡಿಯಲ್ಲಿ ಸೀಗರೇಟ್ ಸೇದಲು ಹೋಗಿದ್ದಾನೆ. ಅದೇ ವೇಳೆ ಅಲ್ಲೇ ನಿಂತಿದ್ದ ಶಿವಕುಮಾರ್ ಮತ್ತು ಕಿರಣ್ ಕುಮಾರ್, ಶಿವು ಜತೆ ಕ್ಷುಲ್ಲಕ ವಿಚಾರಕ್ಕೆ ಜಗಳ ತೆಗೆದಿದ್ದಾರೆ. ಈ ವೇಳೆ ಕಿರಣ್ ಕುಮಾರ್ ತನ್ನ ಬಳಿಯಿದ್ದ ಚಾಕುವಿನಿಂದ ಶಿವು ಹೊಟ್ಟೆಗೆ ಇರಿದಿದ್ದಾನೆ. ಶಿವು ರಕ್ಷಣೆಗಾಗಿ ಜೋರಾಗಿ ಕೂಗಿಕೊಳ್ಳುತ್ತಿದ್ದಂತೆ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ಅನಂತರ ಸ್ನೇಹಿತರೊಬ್ಬರ ನೆರವಿನಿಂದ ಶಿವು ಆಸ್ಪತ್ರೆಗೆ ದಾಖಲಾಗಿದ್ದ. ವಿಷಯ ತಿಳಿದ ಶಿವು ಪೋಷಕರು, ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದರು. ಅದರಂತೆ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಬ್ಯಾಟರಾಯನಪುರ ಪೊಲೀಸರು ಹೇಳಿದರು.