ಮಹಾನಗರ: ನಗರದ ನಾಗುರಿ ಆಂಜೆಲೋರ್ ಚರ್ಚ್ ಬಳಿಯ ಸಾರ್ವಜನಿಕ ರಸ್ತೆಯಲ್ಲಿ ಕಳೆದ ಎ. 22ರಂದು ಮಧ್ಯಾಹ್ನ ದಾರಿ ಕೇಳುವ ನೆಪದಲ್ಲಿ ಒಂಟಿಯಾಗಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರ ಕುತ್ತಿಗೆಯಿಂದ ಚಿನ್ನದ ಕರಿಮಣಿ ಸರವನ್ನು ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿ ಅವರಿಂದ ಒಟ್ಟು 1,10,000 ರೂ. ಮೌಲ್ಯದ ಸೊತ್ತುಗಳನ್ನು ವಶ ಪಡಿಸಿಕೊಂಡಿದ್ದಾರೆ.
ನಗರದ ಅಳಪೆ ಗ್ರಾಮ ನಿಡ್ಡೇಲ್ ಗೋಕರ್ಣ ನಿವಾಸಿಗಳಾದ ಹರ್ಷಿತ್ ಶೆಟ್ಟಿ ಯಾನೆ ಹರ್ಷಿತ್ (25) ಮತ್ತು ಹವಿತ್ ಪೂಜಾರಿ (24) ಬಂಧಿತ ಆರೋಪಿಗಳು. ಅವರನ್ನು ಕೃತ್ಯಕ್ಕೆ ಉಪಯೋಗಿಸಿದ ಮೋಟಾರ್ ಬೈಕ್‌ನೊಂದಿಗೆ ಮೇ 10ರಂದು ಪಡೀಲ್ ಜಂಕ್ಷನ್‌ನಲ್ಲಿ ವಶಕ್ಕೆ ಪಡೆದು ಬಂಧಿಸಲಾಗಿದೆ.
ಆರೋಪಿ ಹರ್ಷಿತ್ ಶೆಟ್ಟಿ ವಿರುದ್ಧ ಪಾಂಡೇಶ್ವರ ಠಾಣೆಯಲ್ಲಿ ಕೊಲೆ ಪ್ರಕರಣ, ಕಾವೂರು ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್. ಕಾಯ್ದೆ ಹಾಗೂ ದರೋಡೆಗೆ ಯತ್ನ ಪ್ರಕರಣ, ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್. ಕಾಯ್ದೆ ಪ್ರಕರಣ, ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣಗಳು ದಾಖಲಾಗಿವೆ.
ಇನ್ನೋರ್ವ ಆರೋಪಿ ಹವಿತ್ ಪೂಜಾರಿ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ, ಕಾವೂರು ಠಾಣೆಯಲ್ಲಿ ಕೊಲೆ ಪ್ರಕರಣಗಳು ದಾಖಲಾಗಿವೆ. ಆರೋಪಿಗಳು ದರೋಡೆ ಮಾಡಿದ 50,000 ರೂ. ಮೌಲ್ಯದ ಚಿನ್ನದ ಕರಿಮಣಿ ಸರ ಹಾಗೂ ಕೃತ್ಯಕ್ಕೆ ಉಪಯೋಗಿಸಿದ 60,000 ರೂ. ಮೌಲ್ಯದ ಮೋಟಾರ್ ಬೈಕನ್ನು ವಶಪಡಿಸಿಕೊಳ್ಳಲಾಗಿದೆ.ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಎಸಿಪಿ ರಾಮರಾವ್ ಮಾರ್ಗ ದರ್ಶನದಲ್ಲಿ ಕಂಕನಾಡಿ ನಗರ ಪೊಲೀಸ್ ಠಾಣೆಯ ಪಿಐ ಜಗದೀಶ್ ಆರ್., ಪಿಇ ಎಸ್‌ಐ ಪ್ರದೀಪ್ ಟಿ.ಆರ್., ಪ್ರೊ| ಪಿ.ಎಸ್. ಐ. ಸುದೀಪ್, ಸಿಬಂದಿ ಸಂತೋಷ್, ಮದನ್, ವಿನೋದ್, ರಾಜೇಶ್, ಸತೀಶ್, ನೂತನ್, ಸಂದೀಪ್, ಭರಣಿ ದೀಕ್ಷಿತ್, ಕಾರ್ತಿಕ್, ಜೀವನ್ ಮತ್ತು ಮೇಘರಾಜ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.