ಬೆಂಗಳೂರು: ವಿವಾಹದ ನಂತರ ಜೀವನ ನಿರ್ವಹಣೆಗೆ ಬೈಕ್ ಕಳವು ಮಾಡುತ್ತಿದ್ದ ಯುವಕನನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ. ಮಾಚೋಹಳ್ಳಿ ನಿವಾಸಿ ರವಿಕಿರಣ್ (24) ಬಂಧಿತ. ಈತನ ಕೃತ್ಯಕ್ಕೆ ಸಹಕಾರ ನೀಡುತ್ತಿದ್ದ ಸ್ನೇಹಿತ ಹಾರೋಹಳ್ಳಿಯ ರಾಜೀವ್ ಕುಮಾರ್‌ನನ್ನೂ ಬಂಧಿಸಲಾಗಿದೆ. ಆರೋಪಿಗಳಿಂದ 5 ಲಕ್ಷ ರೂ. ಮೌಲ್ಯದ 11 ಬೈಕ್‌ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಆರೋಪಿ ರವಿಕಿರಣ್ ಒಂದು ವರ್ಷದ ಹಿಂದೆ ಪೋಷಕರ ವಿರೋಧದ ನಡುವೆ ನೆಲಮಂಗಲ ಮೂಲದ ಯುವತಿಯನ್ನು ಪ್ರೀತಿಸಿ ವಿವಾಹವಾಗಿದ್ದ. ಬಳಿಕ ದಂಪತಿ ನಗರದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು. ಸಣ್ಣ-ಪುಟ್ಟ ಕೆಲಸ ಮಾಡಿಕೊಂಡಿದ್ದ ರವಿಕಿರಣ್ ಸಂಪಾದಿಸುತ್ತಿದ್ದ ಹಣದಿಂದ ಜೀವನ ನಿರ್ವಹಣೆ ಕಷ್ಟವಾಗಿತ್ತು. ಹೀಗಾಗಿ ಬೈಕ್ ಕಳವು ಮಾರ್ಗ ಹಿಡಿದುಕೊಂಡಿದ್ದ.
ದ್ವಿಚಕ್ರ ವಾಹನ ಕಳವು ಮಾಡಲು ಗ್ಯಾರೇಜ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ರಾಜೀವ್ ಕುಮಾರ್‌ನನ್ನು ಪರಿಚಯಸಿಕೊಂಡಿದ್ದ. ಇಬ್ಬರೂ ಸೇರಿ ಮನೆ ಮುಂದೆ ನಿಲ್ಲಿಸುತ್ತಿದ್ದ ಡ್ನೂಕ್, ಬುಲೆಟ್ ಹಾಗೂ ಇತರೆ ದುಬಾರಿ ಬೈಕ್‌ಗಳನ್ನು ಲಾಕ್ ಮುರಿದು ಇಬ್ಬರು ಕಳವು ಮಾಡುತಿದ್ದರು. ನಂತರ ನಂಬರ್ ಪ್ಲೇಟ್ ಬದಲಿಸಿ ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ ಸೇರಿದಂತೆ ಸುತ್ತಮುತ್ತಲ ಜಿಲ್ಲೆಯ ಪರಿಚಯಸ್ಥರಿಗೆ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಏಳು ತಿಂಗಳ ಹಿಂದೆ ಬೈಕ್ ಕಳ್ಳತನ ಪ್ರಕರಣದಲ್ಲಿ ಆರೋಪಿ ರವಿಕಿರಣ್ ಜೈಲು ಸೇರಿದ್ದ. ಕೆಲ ತಿಂಗಳ ಹಿಂದಷ್ಟೇ ಹೊರ ಬಂದಿದ್ದು, ಮತ್ತೆ ಅದೇ ಕೃತ್ಯ ಮುಂದುವರಿಸಿದ್ದ. ಈ ನಡುವೆ ಇತ್ತೀಚೆಗೆ ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ಒಂದು ಬೈಕ್ ಕಳ್ಳತನವಾಗಿರುವ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ವಿಶೇಷ ಕಾರ್ಯಾಚರಣೆ ನಡೆಸಿದಾಗ ಕಳುವಾಗಿದ್ದ ಬೈಕ್ ತುಮಕೂರು ಮೂಲದ ವ್ಯಕ್ತಿ ಬಳಿ ಇರುವ ಮಾಹಿತಿ ಸಂಗ್ರಹಿಸಿದ್ದರು.
ಕೊನೆಗೆ ಈತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆರೋಪಿಗಳ ಹೆಸರು ಬಾಯಿಬಿಟ್ಟಿದ್ದ. ಈ ಮಾಹಿತಿ ಆಧರಿಸಿ ಸುಂಕದಕಟ್ಟೆಯಲ್ಲಿ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳ ಬಂಧನದಿಂದ ಕಾಮಾಕ್ಷಿಪಾಳ್ಯ, ಅನ್ನಪೂರ್ಣೇಶ್ವರಿನಗರ, ಬ್ಯಾಡರಹಳ್ಳಿ ಠಾಣೆ ಸೇರಿ ನಗರದ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ 11 ಬೈಕ್ ಕಳವು ಪ್ರಕರಣಗಳು ಪ್ತತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಜಪ್ತಿ ಮಾಡಿದ ಬೈಕ್ ಎಂದು ಮಾರಾಟ: ಕಾಮಾಕ್ಷಿಪಾಳ್ಯ, ಸುಂಕದಕಟ್ಟೆ ಹಾಗೂ ಇತರೆಡೆ ಮನೆ ಮುಂದೆ ನಿಲ್ಲಿಸುತ್ತಿದ್ದ ಐಷಾರಾಮಿ ಬೈಕ್‌ಗಳ ಲಾಕ್ ಮುರಿದು ಕಳ್ಳತನ ಮಾಡುತ್ತಿದ್ದ ಆರೋಪಿಗಳು, ಮಾಚೋಹಳ್ಳಿಯ ರವಿಕಿರಣ್ ಮನೆ ಹಿಂಭಾಗದ ಗೋಡೌನ್‌ವೊಂದರಲ್ಲಿ ನಿಲ್ಲಿಸುತ್ತಿದ್ದರು. ನಂತರ ರವಿಕಿರಣ್ ಬೈಕ್‌ಗಳ ನಂಬರ್ ಪ್ಲೇಟ್ ಬದಲಿಸಿದರೆ, ರಾಜೀವ್ ಕುಮಾರ್ ಎಂಜಿನ್‌ಗಳನ್ನು ಬದಲಿಸಿ ಇಡೀ ಬೈಕ್‌ನ್ನು ನವೀಕರಣ ಮಾಡುತ್ತಿದ್ದ.
ಬಳಿಕ ಪೊಲೀಸರು ಜಪ್ತಿ ಮಾಡಿದ ಬೈಕ್ ಇದಾಗಿದ್ದು, ಹಾರಾಜಿನಲ್ಲಿ ಖರೀದಿಸಿದ್ದೇವೆ. ಕೇವಲ 10 ಸಾವಿರ ರೂ. ಎಂದು ಪರಿಚಯಸ್ಥರಿಗೆ ಮಾರಾಟ ಮಾಡುತ್ತಿದ್ದರು. ಕಡಿಮೆ ಬೆಲೆಗೆ ಒಳ್ಳೆಯ ಬೈಕ್‌ಗಳು ಸಿಗುತ್ತಿದ್ದರಿಂದ ಯಾವುದೇ ದಾಖಲೆಗಳನ್ನು ಪರಿಶೀಲಿಸದೆ ಖರೀದಿಸುತ್ತಿದ್ದರು. ಇದೀಗ ಈ ರೀತಿಯ ಕಳವು ವಸ್ತುಗಳನ್ನು ಖರೀದಿಸಿದ್ದ ವ್ಯಕ್ತಿಗಳ ವಿರುದ್ಧವು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.