ಬೆಂಗಳೂರು: ಕಿರುಚಿತ್ರ ನಿರ್ಮಾಣ ಮಾಡುವುದಾಗಿ ಹೇಳಿ ಡ್ರೋಣ್ ಕ್ಯಾಮೆರಾ, ವಿಡಿಯೋ ಹಾಗೂ ಸ್ಟಿಲ್ ಕ್ಯಾಮೆರಾಗಳನ್ನು ಬಾಡಿಗೆಗೆ ಪಡೆದು ಬಳಿಕ ನಾಪತ್ತೆಯಾಗುತ್ತಿದ್ದ ಇಬ್ಬರು ಕಳ್ಳರನ್ನು ಮಲ್ಲೇಶ್ವರ ಪೊಲೀಸರು ಬಂಧಿಸಿದ್ದಾರೆ.
ಲಗ್ಗೆರೆ ನಿವಾಸಿ ಕುಮಾರ್ ಅಕ್ಷಯ್ (24) ಮತ್ತು ತುಮಕೂರಿನ ಪಾವಗಡ ನಿವಾಸಿ ಬಾಲಾಜಿ ನಾಯ್ಕ (24) ಬಂಧಿತರು. ಆರೋಪಿಗಳಿಬ್ಬರು ಸ್ನೇಹಿತರಾಗಿದ್ದು, ಆಧಾರ್‌ಕಾರ್ಡ್ ಮತ್ತು ಗುರುತಿನ ಚೀಟಿ ಕೊಟ್ಟು ಕ್ಯಾಮೆರಾ ಬಾಡಿಗೆಗೆ ಪಡೆದ ಬಳಿಕ ಅವುಗಳನ್ನು ನೆರೆ ರಾಜ್ಯಗಳಲ್ಲಿ ಮಾರಾಟ ಮಾಡುತ್ತಿದ್ದರು. ಇವರಿಂದ 26 ಲಕ್ಷ ಮೌಲ್ಯದ ಕೆಟಿಎಂ ಡ್ನೂಕ್ ಬೈಕ್, 1 ಡ್ರೋಣ್ ಕ್ಯಾಮೆರಾ, ವಿವಿಧ ಕಂಪೆನಿಯ 12 ಕ್ಯಾಮೆರಾಗಳು, 14 ಕ್ಯಾಮೆರಾ ಲೆನ್ಸ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಉತ್ತರ ವಿಭಾಗದ ಡಿಸಿಪಿ ಲಾಬೂರಾಮ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೆಲ ವರ್ಷಗಳಿಂದ ಕುಮಾರ್ ಪೋಷಕರೊಂದಿಗೆ ಲಗ್ಗೆರೆಯಲ್ಲಿ ವಾಸ ಮಾಡುತ್ತಿದ್ದು, ಖಾಸಗಿ ಕಂಪನಿಯಲ್ಲಿ ಕೆಲಸಕ್ಕೆ ಹೋಗುತ್ತಿದ್ದ. ಈ ವೇಳೆ ಬಾಲಾಜಿ ನಾಯ್ಕ ಪರಿಚಯವಾಗಿದೆ. ವೈಯಕ್ತಿಕ ಕಾರಣಗಳಿಗೆ ಆರೋಪಿಗಳು ಕೆಲಸ ಬಿಟ್ಟಿದ್ದು, ಮನೆಗೆ ಹೋಗುತ್ತಿರಲಿಲ್ಲ. ತಮ್ಮ ವಿಲಾಸಿ ಜೀವನಕ್ಕಾಗಿ ಕಳವನ್ನೇ ವೃತ್ತಿಯಾಗಿಸಿಕೊಂಡಿದ್ದರು. ಈ ಮಧ್ಯೆ ಸ್ನೇಹಿತ ಬಾಲಾಜಿ ನಾಯ್ಕ ಜತೆ ಚರ್ಚೆ ನಡೆಸಿ ಕಿರುಚಿತ್ರ ನಿರ್ಮಾಣ ಮಾಡುವ ನೆಪದಲ್ಲಿ ಕ್ಯಾಮೆರಾಗಳನ್ನು ಬಾಡಿಗೆಗೆ ಪಡೆದು,
-ಮಾರಿ ಹಣ ಸಂಪಾದಿಸಲು ಸಂಚು ರೂಪಿಸಿದ್ದರು. ಅದರಂತೆ ಮಲ್ಲೇಶ್ವರ, ಕೆ.ಆರ್.ಪುರ, ರಾಜಗೋಪಾಲನಗರ, ಮೈಕೋ ಲೇಔಟ್, ಜೆ.ಸಿ.ನಗರ, ಜಾಲಹಳ್ಳಿ, ಕೋರಮಂಗಲ, ಯಲಹಂಕ ಮತ್ತು ಪುಲಕೇಶಿ ನಗರ ಸೇರಿದಂತೆ ಹತ್ತಾರು ಠಾಣೆ ವ್ಯಾಪ್ತಿಗಳಲ್ಲಿ ಕ್ಯಾಮೆರಾ ಅಂಗಡಿಗಳಲ್ಲಿ ಕ್ಯಾಮೆರಾ ಬಾಡಿಗೆಗೆ ಪಡೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಿರುಚಿತ್ರ ನಿರ್ಮಾಣ: ಆರೋಪಿಗಳು ಪ್ರತಿ ಕ್ಯಾಮೆರಾ ಮಳಿಗೆಗಳಲ್ಲಿ ಸಾಮಾಜಿಕ ಕಳಕಳಿಯ ಕಿರುಚಿತ್ರವೊಂದನ್ನು ನಿರ್ಮಿಸುತ್ತಿದ್ದೇವೆ ಎಂದು ತಮ್ಮ ಆಧಾರ್‌ಕಾರ್ಡ್ ಮತ್ತು ಗುರುತಿನ ಚೀಟಿಗಳನ್ನು ಕೊಟ್ಟು ಕ್ಯಾಮೆರಾಗಳನ್ನು ಬಾಡಿಗೆಗೆ ಪಡೆಯುತ್ತಿದ್ದರು. ನಂತರ ಅದನ್ನು ಮುಂಬೈ ಅಥವಾ ಪುಣೆ, ಇತರೆಡೆ ಮಾರಾಟ ಮಾಡುತ್ತಿದ್ದರು. ಅಲ್ಲದೇ ಹೈದ್ರಾಬಾದ್, ತಮಿಳುನಾಡಿನಲ್ಲೂ ಇದೇ ರೀತಿಯ ಕೃತ್ಯವೆಸಗಿ ಕ್ಯಾಮೆರಾ ಪಡೆಯುತ್ತಿದ್ದರು. ನಂತರ ನಗರಕ್ಕೆ ಬಂದು ಮತ್ತೆ ಕ್ಯಾಮೆರಾಗಳನ್ನು ಬಾಡಿಗೆ ಪಡೆದು ಕದ್ದೊಯ್ಯುತ್ತಿದ್ದರು. ಹೀಗೆ ಸುಮಾರು 12 ಕ್ಯಾಮೆರಾ, 14 ಲೆನ್ಸ್‌ಗಳನ್ನು ಕಳವು ಮಾಡಿದ್ದರು.
ನಾಪತ್ತೆ ದೂರು: ಕ್ಯಾಮೆರಾ ಕಳೆದುಕೊಂಡ ಮಾಲೀಕರು ಆಧಾರ್‌ಕಾರ್ಡ್ ವಿಳಾಸದಂತೆ ಮನೆ ಬಳಿ ಬಂದು ಗಲಾಟೆ ಮಾಡುತ್ತಿದ್ದರು. ಇದರಿಂದ ಬೇಸತ್ತ ಪೋಷಕರು ಕಳೆದ ಆರು ತಿಂಗಳಿಂದ ಮನೆಗೆ ಬಾರದ ಪುತ್ರನನ್ನು ಹುಡುಕಿಕೊಡುವಂತೆ ಜನವರಿಯಲ್ಲಿ ರಾಜಗೋಪಾಲನಗರ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಆತನನ್ನು ಹುಡುಕಿಕೊಂಡು ಬರುತ್ತಿದ್ದ ಕ್ಯಾಮೆರಾ ಮಳಿಗೆ ಮಾಲೀಕರಿಗೂ ಪೊಲೀಸ್ ಠಾಣೆಯಲ್ಲಿ ದೂರು ನೀಡುವಂತೆ ಆಕ್ರೋಶದಿಂದ ಹೇಳುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.