ಬೆಂಗಳೂರು: ಕೆಲಸ ಮತ್ತು ನೀರು ಕೇಳುವ ನೆಪದಲ್ಲಿ ಒಂಟಿ ಮಹಿಳೆಯರ ಮನೆಗೆ ನುಗ್ಗಿ ಚಿನ್ನಾಭರಣ ದರೋಡೆ ಮಾಡುತ್ತಿದ್ದ ಮಹಿಳೆ ಸೇರಿ ನಾಲ್ವರನ್ನು ಬಸವೇಶ್ವರನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಾಮಾಕ್ಷಿಪಾಳ್ಯ ನಿವಾಸಿ ಹೇಮಾವತಿ (24), ಬಾಗಲಗುಂಟೆಯ ಭರತ್ (20), ಯಶವಂತಪುರದ ವಿನಯ್‌ಕುಮಾರ್ (23) ಮತ್ತು ತುಮಕೂರಿನ ರವಿಕಿರಣ್ (22) ಬಂಧಿತರು. ಮತ್ತೂಬ್ಬ ಆರೋಪಿ ಹೇಮಾ ತಲೆಮರೆಸಿಕೊಂಡಿದ್ದು, ಹುಡುಕಾಟ ನಡೆಯುತ್ತಿದೆ.
ಒಂಟಿ ಮಹಿಳೆಯರು ಮತ್ತು ವೃದ್ಧರು ಇರುವ ಮನೆಗಳನ್ನು ಗುರುತಿಸಿ, ಕೆಲಸ ಕೇಳುವ ನೆಪದಲ್ಲಿ ಮನೆಗೆ ಹೋಗುತ್ತಿದ್ದ ಈ ತಂಡ, ಮಹಿಳೆಯರ ಮೇಲೆ ಹಲ್ಲೆ ನಡೆಸಿ ದರೋಡೆ ಮಾಡುತ್ತಿತ್ತು. ಹೀಗೆ ಸುಮಾರು ನಗರದ ನಾಲ್ಕೈದು ಠಾಣೆಗಳ ವ್ಯಾಪ್ತಿಯಲ್ಲಿ ಇವರ ವಿರುದ್ಧ ದರೋಡೆ, ಕಳವು ಪ್ರಕರಣ ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದೇ ಜೂನ್ 4ರಂದು ಮಧ್ಯಾಹ್ನ 2 ಗಂಟೆಗೆ ಇಲ್ಲಿನ ಶಕ್ತಿ ಗಣಪತಿನಗರದ 7ನೇ ಕ್ರಾಸ್ ನಿವಾಸಿ ಕವಿತಾ ಎಂಬುವರು ಮನೆಯಲ್ಲಿ ಒಬ್ಬರೇ ಇದ್ದಾಗ ಕೆಲಸ ಕೇಳುವ ನೆಪದಲ್ಲಿ ಮನೆಗೆ ನುಗ್ಗಿದ ಆರೋಪಿಗಳು, ಟವಲ್‌ನಿಂದ ಕವಿತಾ ಅವರ ಮುಖವನ್ನು ಬಿಗಿದು, ಕೈ, ಕಾಲು ಕಟ್ಟಿ ಹಲ್ಲೆ ನಡೆಸಿ ಅವರ ಬಳಿಯಿದ್ದ 1.50 ಲಕ್ಷ ಮೌಲ್ಯದ ಚಿನ್ನದ ಬಳೆ, ಸರಗಳನ್ನು ದೋಚಿದ್ದರು. ಆರೋಪಿಗಳಿಂದ ಒಂದು ಚಿನ್ನದ ಉಂಗುರ, ಬ್ರಾಸ್‌ಲೇಟ್, ಚಿನ್ನದ ಸರಗಳು, ಬೆಳ್ಳಿ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪರಪ್ಪನ ಅಗ್ರಹಾರದಲ್ಲೇ ಸಂಚು
ಅನ್ನಪೂರ್ಣೇಶ್ವರಿನಗರ, ಬಾಗಲಗುಂಟೆ ಮತ್ತು ಹೆಣ್ಣೂರು ಠಾಣೆಗಳಲ್ಲಿ ದಾಖಲಾಗಿದ್ದ ಪ್ರತ್ಯೇಕ ದರೋಡೆ, ಕಳ್ಳತನ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಹೇಮಾ ಸೇರಿದಂತೆ ನಾಲ್ವರು ಜೈಲು ಸೇರಿದ್ದರು. ಇದೇ ವೇಳೆ ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಪ್ರವೀಣ್ ಅಲಿಯಾಸ್ ಇಟಾಚಿ ಎಂಬಾತನನ್ನುಪರಿಚಯಿಸಿಕೊಂಡಿದ್ದರು. ಜೈಲಿನಲ್ಲಿ ಆಗಾಗ್ಗೆ ಒಟ್ಟಿಗೆ ಸೇರುತ್ತಿದ್ದ ಆರೋಪಿಗಳು ಕೃತ್ಯಕ್ಕೆ ಸಂಚು ರೂಪಿಸಿದ್ದರು.
ಅದರಂತೆ ನಾಪತ್ತೆಯಾಗಿರುವ ಹೇಮಾ ಹಾಗೂ ಬಂಧಿತ ನಾಲ್ವರು ಆರೋಪಿಗಳು ಜೈಲಿನಿಂದ ಹೊರಬಂದು ಬಸವೇಶ್ವರನಗರ, ವಿಜಯನಗರ, ಅನ್ನಪೂರ್ಣೇಶ್ವರಿನಗರ ಸೇರಿದಂತೆ ಪಶ್ಚಿಮ ವಿಭಾಗದ ಪ್ರಮುಖ ನಗರಗಳಲ್ಲಿ ಸುತ್ತಾಡಿ ದಂಡುಪಾಳ್ಯ ಮಾದರಿಯಲ್ಲಿ ಒಂಟಿ ಮಹಿಳೆ ಮತ್ತು ವೃದ್ಧೆ ಇರುವ ಮನೆಗಳನ್ನು ಮೊದಲಿಗೆ ಗುರುತಿಸಿಕೊಳ್ಳುತ್ತಿದ್ದರು. ನಂತರ ಹೇಮಾವತಿ ಮತ್ತು ಹೇಮಾ ಇಬ್ಬರೂ ನೀರು, ಕೆಲಸ ಕೇಳಿಕೊಂಡು ಮನೆಯ ಬಾಗಿಲು ತಟ್ಟುತ್ತಿದ್ದರು.
ಇತ್ತ ಆರೋಪಿಗಳಾದ ಭರತ್, ವಿನಯ್ ಕುಮಾರ್, ರವಿಕಿರಣ್ ಮನೆಯ ಸಮೀಪವೇ ಕಾಯುತ್ತಿದ್ದರು. ಮಹಿಳೆಯರು ನೀರು ತರಲು ಒಳಗೆ ಹೋಗುತ್ತಿದ್ದಂತೆ ಹೇಮಾವತಿ, ಹೇಮಾ ಸೂಚನೆ ಮೇರೆಗೆ ಆರೋಪಿಗಳು ಹಿಂದಿನಿಂದ ದಾಳಿ ನಡೆಸುತ್ತಿದ್ದರು. ತಮ್ಮ ಕೈಯಲ್ಲಿದ್ದ ಹಗ್ಗ, ಟವೆಲ್ ಮತ್ತು ಇತರೆ ವಸ್ತುಗಳಿಂದ ಮಹಿಳೆಯರ ಮುಖ, ಕುತ್ತಿಗೆ ಬಿಗಿದು, ಕೈ, ಕಾಲು ಕಟ್ಟಿ ಅವರ ಮೈಮೇಲಿರುವ ಮತ್ತು ಮನೆಯಲ್ಲಿನ ಚಿನ್ನಾಭರಣ ದೋಚುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.