Advertisement

ದೇಗುಲದ ಹುಂಡಿ ದೋಚುತ್ತಿದ್ದ ಅಲೆಮಾರಿಗಳ ಬಂಧನ

12:24 PM Aug 22, 2018 | Team Udayavani |

ಬೆಂಗಳೂರು: ರಾಜಧಾನಿಯಲ್ಲಿ ದೇವಾಲಯಗಳ ಹುಂಡಿ ದೋಚುವ ಅಲೆಮಾರಿಗಳ ತಂಡಗಳು ಸಕ್ರಿಯವಾಗಿವೆ. ಹೌದು, ಹಗಲಿನಲ್ಲಿ ರಸ್ತೆ ಬದಿ ಪ್ಲಾಸ್ಟಿಕ್‌ ವಸ್ತು, ಪೆನ್‌, ಬೊಂಬೆ ಮಾರಾಟ ಮಾಡುವ ಈ ತಂಡಗಳು ರಾತ್ರಿಯಾಗುತ್ತಿದ್ದಂತೆ ದೇವಾಲಯಗಳಿಗೆ ಕನ್ನ ಹಾಕಿ ಹುಂಡಿಯಲ್ಲಿರುವ ಹಣ ದೋಚುವ ಕಾಯಕ ಮಾಡುತ್ತಿವೆ.

Advertisement

ಈ ಸಂಬಂಧ ವಿಶೇಷ ಕಾರ್ಯಾಚರಣೆ ನಡೆಸಿದ ಆಗ್ನೇಯ ವಿಭಾಗದ ಮೈಕೋ ಲೇಔಟ್‌ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಮೈಸೂರಿನ ಲಕ್ಷ್ಮೀಪುರ ನಿವಾಸಿ ಕುಮಾರ್‌ ಅಲಿಯಾಸ್‌ ಬಜಾಕಾ (23), ಮಂಜ ಅಲಿಯಾಸ್‌ ಸಂಗಪ್ಪ (24), ಎಚ್‌.ಡಿ.ಕೋಟೆ ನಿವಾಸಿ ಕೃಷ್ಣ (40) ಮತ್ತು ವಿಜಯ್‌ ಕುಮಾರ್‌ ಅಲಿಯಾಸ್‌ ಕುಮಾರ (21) ಬಂಧಿತರು. ಆರೋಪಿಗಳೆಲ್ಲರೂ ರಕ್ತ ಸಂಬಂಧಿಗಳಾಗಿದ್ದು, ನಿರ್ದಿಷ್ಟ ನೆಲೆ ಇಲ್ಲದೆ ಅಲೆಮಾರಿಗಳಾಗಿದ್ದಾರೆ.

ಹಗಲಿನ ವೇಳೆ ಬೀದಿ ಬೀದಿ ಸುತ್ತುತ್ತಾ ಪ್ಲಾಸ್ಟಿಕ್‌ ವಸ್ತುಗಳ ಮಾರಾಟ ಮಾಡುವುದು. ಸ್ಟೌವ್‌ ರಿಪೇರಿ ಹಾಗೂ ದೇವರನ್ನು ಹೊತ್ತು ತಿರುಗುವ ನೆಪದಲ್ಲಿ ದೇವಾಲಯಗಳನ್ನು ಗುರುತಿಸುವ ಈ ತಂಡ ರಾತ್ರಿ ಹುಂಡಿಗೆ ಕನ್ನ ಹಾಕುತ್ತಿದ್ದರು. ಆರೋಪಿಗಳಿಂದ 3 ಲಕ್ಷ ರೂ. ಮೌಲ್ಯದ 55 ಗ್ರಾಂ ತೂಕದ ಚಿನ್ನ, 1 ಕೆ.ಜಿ.314 ಗ್ರಾಂ ಬೆಳ್ಳಿ ವಸ್ತುಗಳು, 72 ಸಾವಿರ ರೂ. ನಗದು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳ ಬಂಧನದಿಂದ ಮೈಕೋ ಲೇಔಟ್‌ನ 3, ಎಲೆಕ್ಟ್ರಾನಿಕ್‌ ಸಿಟಿಯ 4, ಬೊಮ್ಮನಹಳ್ಳಿಯ 2, ತಿಲಕ್‌ನಗರ 1, ದಕ್ಷಿಣ ವಿಭಾಗದ ಕೆ.ಎಸ್‌.ಲೇಔಟ್‌ನ 2, ಜಯನಗರ, ಜೆ.ಪಿ.ನಗರ, ಸುಬ್ರಹ್ಮಣ್ಯಪುರ ಹಾಗೂ ತುಮಕೂರು ಜಿಲ್ಲೆಯ ಚೇಳೂರು ಠಾಣೆಯ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸರ್ಜಾಪುರ ಠಾಣೆ ಸೇರಿ ಒಟ್ಟು 17 ದೇವಾಲಯ ಕಳ್ಳತನ ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರರು ಹೇಳಿದರು.

ಅಲೆಮಾರಿ ಜೀವನ: ಅಲೆಮಾರಿಗಳಾದ ಆರೋಪಿಗಳು ನಗರದ ಹೊರವಲಯದ ಬಯಲು ಪ್ರದೇಶಗಳಲ್ಲಿ ಟೆಂಟ್‌ ಹಾಕಿಕೊಂಡು ಜೀವನ ನಡೆಸುತ್ತಿದ್ದರು. ಹೆಚ್ಚು ಭಕ್ತರು ಭೇಟಿ ನೀಡುವ ದೇವಾಲಯಗಳನ್ನು ಗುರುತಿಸಿ, ಅಂತಹ ದೇವಾಲಯಗಳಿಗೆ ಭಕ್ತರ ಸೋಗಿನಲ್ಲಿ ಹೋಗಿ ಕೆಲ ಹೊತ್ತು ಅಲ್ಲಿಯೇ ಇದ್ದು, ಎಷ್ಟು ಬಾಗಿಲು ಮತ್ತು ಕಿಟಕಿಗಳಿವೆ. ಹುಂಡಿ ಯಾವ ಭಾಗದಲ್ಲಿ ಇದೆ. ಸಿಸಿಟಿವಿ ಕ್ಯಾಮೆರಾ ಎಲ್ಲಿದೆ ಇತ್ಯಾದಿ ಮಾಹಿತಿ ಸಂಗ್ರಹಿಸುತ್ತಿದ್ದರು.

Advertisement

ಹುಂಡಿಯೊಳಗೆ ನಾಣ್ಯಹಾಕಿ ತುಂಬಿದೆಯೇ ಖಾತ್ರಿ ಪಡಿಸಿಕೊಂಡು ಸಂಚು ರೂಪಿಸುತ್ತಿದ್ದರು. ನಂತರ ಅದೇ ದಿನ ರಾತ್ರಿ ಆ ದೇವಾಲಯದ ಬಾಗಿಲು ಮುರಿದು ಒಳ ಪ್ರವೇಶಿಸಿ, ನಕಲಿ ಕೀ ಅಥವಾ ಕಬ್ಬಿಣ ಸಲಕರಣೆಗಳಿಂದ ಹುಂಡಿಯನ್ನು ಹೊಡೆದು ಹಣ, ಚಿನ್ನಾಭರಣ ದೋಚುತ್ತಿದ್ದರು ಎಂದು ಪೊಲೀಸರು ತಿಳಿಸಿದರು.

ಸಿಸಿಟಿವಿ ಕೊಟ್ಟ ಸುಳಿವು: ಆರೋಪಿಗಳು ಇತ್ತೀಚೆಗೆ ಮೈಕೋ ಲೇಔಟ್‌ ಠಾಣಾ ವ್ಯಾಪ್ತಿಯ ಆಂಜನೇಯ, ಯಲ್ಲಮ್ಮ ಹಾಗೂ ವೆಂಕಟೇಶ್ವರ ದೇವಾಲಯಗಳ ಹುಂಡಿ ದೋಚಿದ್ದರು. ಈ ವೇಳೆ ಸಿಸಿಟಿವಿ ಕ್ಯಾಮೆರಾದಲ್ಲಿ ಆರೋಪಿಗಳ ಪೈಕಿ ಕೃಷ್ಣನ ಮುಖ ಚಹರೆ ಪತ್ತೆಯಾಗಿತ್ತು. ಈ ಮಾಹಿತಿಯನ್ನಾಧರಿಸಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ಇದೇ ಮಾದರಿಯ ಮತ್ತೂಂದು ತಂಡ ನಗರದಲ್ಲಿ ಸಕ್ರಿಯವಾಗಿದೆ ಎಂದು ಆರೋಪಿಗಳು ತಿಳಿಸಿದ್ದಾರೆ ಎಂದು ಪೊಲೀಸರು ಹೇಳಿದರು.

ಚಿನ್ನಾಭರಣ ಖರೀದಿ: ಆರೋಪಿಗಳು ಕಳೆದ ಒಂದು ವರ್ಷದಿಂದ ಹುಂಡಿಗೆ ಕನ್ನ ಹಾಕಿ ಲಕ್ಷಾಂತರ ರೂ. ಗಳಿಸುತ್ತಿದ್ದರು ಟೆಂಟ್‌ಗಳಲ್ಲಿಯೇ ಜೀವನ ನಡೆಸುತ್ತಿದ್ದರು. ಹುಂಡಿಯ ಹಣದಲ್ಲಿ ತಮ್ಮ ಮನೆಯ ಮಹಿಳಾ ಸದಸ್ಯರಿಗೆ ಚಿನ್ನದ ಮೂಗುತಿ, ಒಲೆ, ಬಳೆ ಸೇರಿ ಸಣ್ಣ ಪ್ರಮಾಣ ಚಿನ್ನದ ಒಡವೆಗಳನ್ನು ಖರೀದಿಸುತ್ತಿದ್ದರು. ಇನ್ನು ಹುಂಡಿಯಲ್ಲಿ ಸಿಗುವ ಬೆಳ್ಳಿ ವಸ್ತುಗಳನ್ನು ಮಹಿಳೆಯರಿಗೆ ಕೊಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next