Advertisement

ಕುಖ್ಯಾತ ಕಳ್ಳ ಎಸ್ಕೇಪ್‌ ಕಾರ್ತಿಕ್‌ ಬಂಧನ

12:41 AM Nov 18, 2019 | mahesh |

ಬೆಂಗಳೂರು: ಮೋಜಿನ ಜೀವನ ನಡೆಸಲು ಮನೆಕಳ್ಳತನ ಮಾಡುತ್ತಿದ್ದ ಕುಖ್ಯಾತ ಕಳ್ಳ ಕಾರ್ತಿಕ್‌ ಕುಮಾರ್‌ ಅಲಿಯಾಸ್‌ ಎಸ್ಕೇಪ್‌ ಕಾರ್ತಿಕ್‌ (30)ನನ್ನು ಸಂಪಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದು, ಎಂಟು ಲಕ್ಷ ರೂ. ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿಕೊಂಡಿದ್ದಾರೆ. ಸುಮಾರು ಹನ್ನೆರಡು ವರ್ಷಗಳಿಂದಲೂ ಮನೆ ಕಳ್ಳತನವನ್ನೇ ಕಸುಬು ಮಾಡಿಕೊಂಡಿರುವ ಕಾರ್ತಿಕ್‌ ವಿರುದ್ಧ ನಗರದ ವಿವಿಧ ಪೊಲೀಸ್‌ ಠಾಣೆಗಳಲ್ಲಿ 32 ಮನೆಕಳವು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ಹೇಳಿದ್ದಾರೆ.

Advertisement

ಐಶಾರಾಮಿ ಮನೆಗಳನ್ನೇ ಟಾರ್ಗೆಟ್‌ ಮಾಡಿಕೊಳ್ಳುತ್ತಿದ್ದ ಕಾರ್ತಿಕ್‌, ಬಾಗಿಲು ಮುರಿದು, ಇಲ್ಲವೇ ಕಿಟಕಿ ಗ್ರಿಲ್‌ ಕತ್ತರಿಸಿ ಮನೆಗೆ ನುಗ್ಗುತ್ತಿದ್ದ. ಬಳಿಕ ಒಳಗಡೆಯಿಂದ ಮನೆಯ ಬಾಗಿಲಿನ ಲಾಕ್‌ ಮಾಡಿ ಚಿನ್ನಾಭರಣ ಕದ್ದು ಪರಾರಿಯಾಗುತ್ತಿದ್ದ. ಹಲವು ಬಾರಿ ಮನೆಯ ಮಾಲೀಕರಿದ್ದರೂ ಮನೆಗೆ ನುಗ್ಗಿ ಗೊತ್ತಾದ ಕೂಡಲೇ ಪರಾರಿಯಾಗುತ್ತಿದ್ದ. ಹೀಗಾಗಿ ಆತನಿಗೆ ಎಸ್ಕೇಪ್‌ ಕಾರ್ತಿಕ್‌ ಎಂಬ ಅಡ್ಡ ಹೆಸರು ಬಂದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಇತ್ತೀಚೆಗೆ ಎಸ್‌ಆರ್‌ಕೆ ನಗರದ ಮನೆಯೊಂದಕ್ಕೆ ನುಗ್ಗಿದ ಕಾರ್ತಿಕ್‌, ಮನೆಯಲ್ಲಿದ್ದ ಹಣ ದೋಚಿ ಹೊರಡಲು ಸಿದ್ಧನಾಗಿದ್ದ. ಅದೇ ವೇಳೆಗೆ ಮನೆಯ ಮಾಲೀಕರು ಬಂದಿದ್ದು ಒಳಗಿನಿಂದ ಬಾಗಿಲು ಲಾಕ್‌ ಆಗಿರುವುದನ್ನು ಗಮನಿಸಿ ಗಾಬರಿಯಾಗಿದ್ದಾರೆ. ಅದನ್ನು ಗಮನಿಸಿದ ಕಾರ್ತಿಕ್‌ ಮೊದಲೇ ತಪ್ಪಿಸಿಕೊಳ್ಳಲು ಕಿಟಕಿ ಗ್ರಿಲ್‌ ಕತ್ತರಿಸಿದ್ದ ಜಾಗದಿಂದ ಇಳಿದು ಪರಾರಿಯಾಗಿದ್ದ.

ಅಷ್ಟೇ ಅಲ್ಲದೆ ಅಮೃತಹಳ್ಳಿಯಲ್ಲಿ ಮನೆಯೊಂದಕ್ಕೆ ನುಗ್ಗಿದಾಗ ಮಾಲೀಕರು ಬಾಗಿಲಿಗೆ ಅಳವಡಿಸಿದ್ದ ಸುರಕ್ಷತಾ ಸಿಗ್ನಲ್‌ ಸಂದೇಶ ಅವರ ಮೊಬೈಲ್‌ಗೆ ಹೋಗಿತ್ತು. ಆದರೆ, ಅವರು ಅವರ ಸ್ನೇಹಿತರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಅವರು ಮನೆಯ ಬಳಿ ಬರುವಷ್ಟರಲ್ಲಿ ಕಾರ್ತಿಕ್‌ ಎಸ್ಕೇಪ್‌ ಆಗಿದ್ದ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಲಕ್ಷ ರೂ. ಮೌಲ್ಯದ ಆಭರಣ ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next