ಬೆಂಗಳೂರು: ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ ಉದ್ಯಮಿಯೊಬ್ಬರ ಹಣೆಗೆ ಪಿಸ್ತೂಲ್ ಇರಿಸಿ, ಕೊಲೆ ಮಾಡುವುದಾಗಿ ಬೆದರಿಸಿದ್ದ ಫೈನಾನ್ಷಿಯರ್‌ನನ್ನು ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.
ಶ್ರೀಹರಿ ಎಂಟರ್‌ಪ್ರೈಸಸ್‌ನ ಉದಯ್ ಶೆಟ್ಟಿ (51)ಬಂಧಿತ. ಆರೋಪಿಯಿಂದ 5.76 ಲಕ್ಷ ರೂ. ನಗದು, ಪರವಾನಗಿ ಹೊಂದಿರುವ ಒಂದು ಪಿಸ್ತೂಲ್, ನಾಲ್ಕು ಜೀವಂತ ಗುಂಡು, ಎರಡು ಜಿಂಕೆ ಕೊಂಬು, ಖಾಲಿ ಚೆಕ್‌ಗಳು, ಬಾಂಡ್ ಪೇಪರ್, ಆಸ್ತಿ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿ ಉದಯ್ ಶೆಟ್ಟಿ ಹೆಚ್ಚಿನ ಬಡ್ಡಿಗೆ ಸಾಲ ನೀಡುತ್ತಿದ್ದ. ಬಡ್ಡಿ ಪಾವತಿ ಮಾಡದಿದ್ದರೆ ಕಿರುಕುಳ ಕೊಡುತ್ತಿದ್ದ ಎಂಬ ಬಗ್ಗೆ ಪ್ರಾಥಮಿಕ ತನಿಖೆ ವೇಳೆ ತಿಳಿದುಬಂದಿದೆ. ಆತನಿಂದ ವಶಪಡಿಸಿಕೊಂಡಿರುವ ದಾಖಲೆ, ಚೆಕ್‌ಗಳನ್ನು ಪರಿಶೀಲಿಸಿದ್ದು, ತನಿಖೆ ಮುಂದುವರಿದಿದೆ. ಉದಯ್ ಶೆಟ್ಟಿ ನಿವಾಸದಲ್ಲಿ ಜಿಂಕೆ ಕೊಂಬುಗಳು ದೊರೆತ ಬಗ್ಗೆ ಅರಣ್ಯ ಇಲಾಖೆಗೆ ವರದಿ ನೀಡಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.
16 ಲಕ್ಷ ರೂ.ಗೆ 23 ಲಕ್ಷ ವಸೂಲಿ!: ಸಂಜಯ್‌ನಗರ ನಿವಾಸಿ ಅಬ್ದುಲ್ ರೆಹಮಾನ್ ಎಂಬುವವರು 2016ರಲ್ಲಿ ಶ್ರೀ ಹರಿ ಎಂಟರ್‌ಪ್ರೈಸಸ್‌ನಲ್ಲಿ 16 ಲಕ್ಷ ರೂ. ಸಾಲ ಪಡೆದಿದ್ದು, ಪ್ರತಿ ತಿಂಗಳು ಒಂದು ಲಕ್ಷ ರೂ.ನಂತೆ, ಬಡ್ಡಿಸಹಿತ ಒಟ್ಟು 23 ಲಕ್ಷ ರೂ. ಪಾವತಿಸಿದ್ದರು. ಹೀಗಿದ್ದರೂ ಹೆಚ್ಚಿನ ಹಣ ನೀಡುವಂತೆ ಉದಯ್ ಶೆಟ್ಟಿ ಕಿರುಕುಳ ನೀಡುತ್ತಿದ್ದ.
ಜನವರಿ 4ರಂದು ಉದಯ್ ಶೆಟ್ಟಿ ಹಾಗೂ ಆತನ ಸಹಚರರು ರೆಜಮಾನ್ ಅವರ ಫ್ಲಾಟ್‌ಗೆ ನುಗ್ಗಿ ಅವರ ಪತ್ನಿಗೆ ಪಿಸ್ತೂಲ್ ತೋರಿಸಿ ಬೆದರಿಕೆ ಹಾಕಿದ್ದರು. ಜತೆಗೆ, ರಾತ್ರಿ 9 ಗಂಟೆ ಸುಮಾರಿಗೆ ರೆಹಮಾನ್ ಅವರನ್ನು ಅಡ್ಡಗಟ್ಟಿ ಅವರ ಹಣೆಗೆ ಪಿಸ್ತೂಲ್ ಇರಿಸಿ, ‘ಹಣ ಕೊಡದಿದ್ದರೆ ಕೊಲೆಮಾಡದೆ ಬಿಡುವುದಿಲ್ಲ’ ಎಂದು ಹೆದರಿಸಿದ್ದ ಆರೋಪ ಪ್ರಕರಣ ಸಂಜಯ್‌ನಗರ ಠಾಣೆಯಲ್ಲಿ ದಾಖಲಾಗಿತ್ತು. ನಂತರ ಈ ಪ್ರಕರಣವನ್ನು ಸಿಸಿಬಿಗೆ ವರ್ಗಾವಣೆ ಮಾಡಲಾಗಿತ್ತು.
ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿ, ಉದಯ್ ಶೆಟ್ಟಿಗೆ ಸೇರಿದ ಕಚೇರಿಗಳು ಹಾಗೂ ಆತನ ನಿವಾಸದ ಮೇಲೆ ದಾಳಿ ನಡೆಸಿದಾಗ, ದಾಖಲೆಯಿಲ್ಲದ ಹಣ, ಖಾಲಿಚೆಕ್‌ಗಳು, ಜಮೀನು ಪತ್ರಗಳು, ಜಿಂಕೆ ಕೊಂಬುಗಳು ಪತ್ತೆಯಾಗಿವೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
•ನಡು ರಸ್ತೆಯಲ್ಲಿ ಅಡ್ಡಗಟ್ಟಿ ಹಣೆ ಮೇಲೆ ಗನ್ ಇರಿಸಿದ್ದ ಫೈನಾನ್ಷಿಯರ್
•ಫ್ಲಾಟ್‌ಗೆ ನುಗ್ಗಿ ಸಾಲಗಾರನ ಪತ್ನಿಗೂ ಬೆದರಿಸಿದ್ದ ಆರೋಪಿ, ಸಹಚರರು
•ಸಾಲಗಾರ ನೀಡಿದ ದೂರಿನ ಮೇರೆಗೆ ಸಿಸಿಬಿ ಪೊಲೀಸರ ಕಾರ್ಯಾಚರಣೆ