ಉಪ್ಪಿನಂಗಡಿ: ಕಂಬಳ ವೀಕ್ಷಿಸಲೆಂದು ಬಂದ ಸಂಬಂಧಿಕರಿಬ್ಬರೊಳಗೆ ವೈಷಮ್ಯ ಮೂಡಿ ಯಶವಂತ ಕೆ (19) ಅವರನ್ನು ಮಾರಕಾಯುಧದಿಂದ ತಿವಿದು ಕೊಲೆಗೈದ ಘಟನೆಗೆ ಸಂಬಂಧಿಸಿ ತಲೆ ಮರೆಸಿಕೊಂಡಿರುವ ಆರೋಪಿ ಆನಂದ (30) ನನ್ನು ಉಪ್ಪಿನಂಗಡಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಕರಾಯ ಗ್ರಾಮದ ಕಲ್ಲಾಪು ಮನೆ ನಿವಾಸಿ ಮೋನಪ್ಪ ನಲಿಕೆ ಅವರ ಹಿರಿಯ ಪುತ್ರ ಯಶವಂತ ಕೆ ತನ್ನ ಸಂಬಂಧಿಕರ ಜೊತೆಗೂಡಿ ಉಪ್ಪಿನಂಗಡಿಯಲ್ಲಿ ನಡೆಯುತ್ತಿದ್ದ ವಿಜಯ ವಿಕ್ರಮ ಜೊಡುಕರೆ ಕಂಬಳ ವೀಕ್ಷಿಸಲೆಂದು ಬಂದಿದ್ದಾಗ ಅವರಿಗೆ ಮಾರಕಾಯುಧದಿಂದ ತಿವಿದು ಕೊಲೆಗೈಯಲಾಗಿತ್ತು.
ಪ್ರಕರಣದ ಬಗ್ಗೆ ತನಿಖೆ ನಡೆಸಿದ ಉಪ್ಪಿನಂಗಡಿ ಪೊಲೀಸರು ಶಂಕಿತ ಆರೋಪಿ ಆನಂದನನ್ನು ಬಂಧಿಸಲು ಕಾರ್ಯಾಚರಣೆಗೆ ಮುಂದಾಗಿದ್ದರು. ಅದರಂತೆ ಕರಾಯ ಗ್ರಾಮದ ಕಲ್ಲೇರಿ ಎಂಬಲ್ಲಿ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದ ಆರೋಪಿ ಬಂಟ್ವಾಳ ತಾಲೂಕು ಕೊಡಂಬೆಟ್ಟು ಮನೆ ನಿವಾಸಿ ರುಕ್ಮಯ ನಲಿಕೆ ಅವರ ಪುತ್ರ ಆನಂದನನ್ನು ವಶಕ್ಕೆ ತೆಗೆದುಕೊಂಡು ಬಂಧಿಸಿದರು. ಬಂಧಿತನಿಂದ ಕೊಲೆಗೆ ಬಳಸಲಾದ ಸಣ್ಣ ಕತ್ತಿ ಹಾಗೂ ಬೈಕ್ ವಶಪಡಿಸಿಕೊಳ್ಳಲಾಗಿದೆ.
ಹೆಣ್ಣಿನ ವಿಷಯ, ಮಗುವಿನ ಸಾವು ಕಾರಣ
ಆನಂದ ವಿವಾಹಿತನಾಗಿದ್ದು, ಆತನ ಪತ್ನಿಯ ಸಂಬಂಧಿ ಹುಡುಗಿಯನ್ನು ಯಶವಂತ ಪ್ರೇಮಿಸುತ್ತಿದ್ದ ಬಗ್ಗೆ ಆನಂದನಿಗೆ ಆಕ್ರೋಶವಿತ್ತು. ಮಾತ್ರವಲ್ಲದೆ ಎರಡು ತಿಂಗಳ ಹಿಂದೆ ಮೃತ ಪಟ್ಟ ಆನಂದನ ಮಗುವಿನ ಸಾವಿಗೆ ತಾನೇ ಕಾರಣನೆಂದು ಯಶವಂತ ಮದ್ಯಪಾನ ಮಾಡಿದಾಗಲೆಲ್ಲಾ ಹೇಳುತ್ತಿದ್ದ ಹಿನ್ನೆಲೆಯಲ್ಲಿ ಆತನ ಮೇಲೆ ಆಕ್ರೋಶಗೊಂಡಿದ್ದ, ತಾನು ಕಂಬಳಕ್ಕೆ ಬಂದಿದ್ದ ವೇಳೆ ಭೂತಾರಾಧನೆಯಲ್ಲಿ ಬಳಸಲಾಗುತ್ತಿದ್ದ ಸಣ್ಣ ಕತ್ತಿಯ ಸಹಾಯದಿಂದ ಯಶವಂತನನ್ನು ತಿವಿದು ಕೊಲೆಗೈಯಲು ಮುಂದಾಗಿರುವುದಾಗಿ ವಿಚಾರಣೆಯ ವೇಳೆ ಪೊಲೀಸರಿಗೆ ತಿಳಿಸಿದ್ದಾನೆ.
ಕಾರ್ಯಾಚರಣೆಯಲ್ಲಿ ಗ್ರಾಮಾಂತರ ವೃತ್ತ ನಿರೀಕ್ಷಕ ಮಂಜುನಾಥ ಡಿ ಅವರ ನಿರ್ದೇಶದಂತೆ, ಉಪ್ಪಿನಂಗಡಿ ಎಸೈ ನಂದಕುಮಾರ್, ಸಿಬಂದಿ ಹರಿಶ್ಚಂದ್ರ, ದೇವದಾಸ್, ಗಣೇಶ್ ಪ್ರಸಾದ್,ಸಂಗಯ್ಯ, ಹರೀಶ್ ಗೌಡ, ಇರ್ಷಾದ್, ಜಗದೀಶ್ ,ಪ್ರತಾಪ್, ಸಂಪತ್,ದಿವಾಕರ್, ಜೀಪು ಚಾಲಕರಾದ ನವಾಜ್, ನಾರಾಯಣ ಗೌಡ ಭಾಗವಹಿಸಿದ್ದರು.