ಬೆಂಗಳೂರು: ಸ್ನೇಹಿತನಿಗೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ ನಾಲ್ವರು ಆರೋಪಿಗಳನ್ನು ಹೆಣ್ಣೂರು ಠಾಣಾ ಪೊಲೀಸರು ಬಂಧಿಸಿದ್ದಾರೆ.
ಕೀರ್ತಿ ಅಲಿಯಾಸ್ ಕಿರಿಕ್ ಕೀರ್ತಿ (26) ಕೊಲೆಯಾದವ. ಹೊರಮಾವು ನಿವಾಸಿಗಳಾದ ಕಿಶೋರ್, ನಿರ್ಮಲ್, ವೆಂಕಟರಾಜು ಹಾಗೂ ಸಂತೋಷ್ ಬಂಧಿತರು.
ಕೀರ್ತಿ ಹಾಗೂ ಕಿಶೋರ್ ಸ್ನೇಹಿತರಾಗಿದ್ದರು. ಕೀರ್ತಿ ಪ್ರೀತಿಸಿ ಮದುವೆಯಾಗುವಾಗಲು ಕಿಶೋರ್ ಸಹಾಯ ಮಾಡಿದ್ದ. ಕೀರ್ತಿ ಕೆಲ ತಿಂಗಳ ಹಿಂದೆ ತನ್ನ ದೊಡ್ಡಪ್ಪನ ಮಗನ ಮೇಲೆ ಹಲ್ಲೆ ಮಾಡಿ ಬಂಧನಕ್ಕೊಳಗಾಗಿದ್ದ. ಇದಾದ ಬಳಿಕ ಕೀರ್ತಿಗೆ ಜಾಮೀನು ಪಡೆಯಲು ಕಿಶೋರ್ ಸಹಾಯ ಮಾಡಿರಲಿಲ್ಲ. ಜೈಲಿನಲ್ಲಿದ್ದಾಗ ಒಂದು ಸಲ ಆತನನ್ನು ನೋಡಲೂ ಬಂದಿರಲಿಲ್ಲ ಎಂದು ಕಿಶೋರ್ ಮೇಲೆ ಕೀರ್ತಿ ಆಕ್ರೋಶಗೊಂಡಿದ್ದ. ಜೈಲಿನಿಂದ ಹೊರ ಬಂದ ಮೇಲೆ ಅದೇ ಸಿಟ್ಟಿನಲ್ಲೇ ಕಿಶೋರ್‌ಗೆ ಕರೆ ಮಾಡಿ ಬೆದರಿಕೆ ಹಾಕಿದ್ದ. ಗುರುವಾರ ಸಂಜೆ 7.30ಕ್ಕೆ ಇಬ್ಬರೂ ರಾಜಿಯಾಗಲು ಸ್ನೇಹಿತರೊಂದಿಗೆ ಬೃಂದಾವನ ಲೇಔಟ್ ಬಳಿ ಬಂದಿದ್ದರು. ಖಾಲಿ ಜಾಗದಲ್ಲಿ ಕುಳಿತು ಮದ್ಯ ಸೇವಿಸುತ್ತಿದ್ದಾಗ ಇಬ್ಬರ ನಡುವೆ ಮತ್ತೆ ಗಲಾಟೆಯಾಗಿತ್ತು. ಈ ವೇಳೆ ಅಲ್ಲಿದ್ದ ಸ್ನೇಹಿತರೇ ಮಾರಕಾಸ್ತ್ರದಿಂದ ಕೀರ್ತಿ ಮೇಲೆ ಹಲ್ಲೆ ನಡೆಸಿ ಹತ್ಯೆಗೈದಿದ್ದರು. ನಂತರ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು. ಹೆಣ್ಣೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.