ಬೆಂಗಳೂರು: ಪುಲ್ವಾಮಾದಲ್ಲಿ ನಡೆದ ಉಗ್ರ ದಾಳಿ ಬೆಂಬಲಿಸಿ ಹಾಗೂ ಉಗ್ರನ ವಿಡಿಯೋ ಸ್ಟೇಟಸ್ ಮಾಡಿಕೊಂಡಿದ್ದ ಕಾಶ್ಮೀರ ಮೂಲದ ಇಂಜಿನಿಯರಿಂಗ್ ವಿದ್ಯಾರ್ಥಿಯನ್ನು ಬಾಗಲೂರು ಪೊಲೀಸರು ದೇಶದ್ರೋಹ ಕಾಯ್ದೆಯಡಿ ಬಂಧಿಸಿದ್ದಾರೆ.
ತಾಹೀರ್ ಲತೀಫ್ ಬಂಧಿತ. ಆರೋಪಿ ತಾಹೀರ್ ವಿರುದ್ಧ ದೇಶದ್ರೋಹ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು
ಪೊಲೀಸರು ತಿಳಿಸಿದ್ದಾರೆ.
ಆರೋಪಿ ತಾಹೀರ್ ಲತೀಫ್ ರೇವಾ ಕಾಲೇಜಿನಲ್ಲಿ ಮೂರನೇ ವರ್ಷದ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದಾನೆ. ಪುಲ್ವಾಮಾದಲ್ಲಿ ಫೆ.14ರಂದು ನಡೆದ ಉಗ್ರರ ಆತ್ಮಾಹುತಿ ದಾಳಿಯನ್ನು ಬೆಂಬಲಿಸಿ ತನ್ನ ವಾಟ್ಸ್‌ಆ್ಯಪ್‌ನಲ್ಲಿ ದಾಳಿಯಲ್ಲಿ ಹುತಾತ್ಮರಾದ ಯೋಧರ ಛಿದ್ರಗೊಂಡ ದೇಹದ ಪೋಟೋಗಳು ಹಾಗೂ ದಾಳಿಗೂ ಮುನ್ನ ಉಗ್ರ ಬಿಡುಗಡೆ ಮಾಡಿದ್ದ ವಿಡಿಯೋವನ್ನು ಸ್ಟೇಟಸ್ ಮಾಡಿಕೊಂಡಿದ್ದ. ಸ್ಟೇಟಸ್ ಗೆ ಪೂರಕವಾಗಿ ಉಗ್ರ ಆದಿಲ್‌ನ ಕುಕೃತ್ಯ ಬೆಂಬಲಿಸಿ “ಈ ಧೈರ್ಯವಂತನಿಗೆ ದೊಡ್ಡ ಸೆಲ್ಯೂಟ್, ಅಲ್ಲಾಹು ನಿನ್ನ ತ್ಯಾಗವನ್ನು ಸ್ವೀಕರಿಸಿ ಸ್ವರ್ಗದಲ್ಲಿ ಉನ್ನತ ಸ್ಥಾನ ನೀಡಲಿದ್ದಾರೆ’ ಎಂದು ಬರೆದುಕೊಂಡಿದ್ದ.
ಇದನ್ನು ಗಮನಿಸಿದ್ದ ಕಟ್ಟಿಗೆಹಳ್ಳಿಯ ನಿವಾಸಿ ಮುರುಂಬೆ ಸಚಿನ್ ಎಂಬುವರು ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡ ಬಾಗಲೂರು ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿ ಲತೀಪ್‌ನನ್ನು ಬಂಧಿಸಿದ್ದಾರೆ.