ಬೆಂಗಳೂರು: ತನ್ನ ಪತಿಯ ಮೊದಲ ಪತ್ನಿ ಹೆಸರಲ್ಲಿ ಫೇಸ್‌ಬುಕ್‌ನಲ್ಲಿ ನಕಲಿ ಖಾತೆ ತೆರೆದು ಕಿರಿಕಿರಿ ಮಾಡುತ್ತಿದ್ದ ಮಹಿಳೆಯನ್ನು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಪಾದರಾಯನಪುರ ನಿವಾಸಿ ಆಯಿಷಾ ಸಿದ್ದಿಖಾ (23) ಬಂಧಿತೆ. ಈಕೆಯಿಂದ ಎರಡು ಮೊಬೈಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಪತಿಯ ಮೊದಲ ಪತ್ನಿಗೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಈ ರೀತಿ ಮಾಡಿದ್ದಾಳೆ ಎಂದು ಪೊಲೀಸರು ಹೇಳಿದರು.
ಆರೋಪಿತೆ ಜುಬೇರುಲ್ಲಾ ಶರೀಫ್ ಎಂಬುವವರನ್ನು ಮದುವೆಯಾಗಿದ್ದಾರೆ. ಶರೀಫ್ರ ಮೊದಲ ಪತ್ನಿ ಹಾಗೂ ಈಕೆ ನಡುವೆ ಆಗಾಗ ವಾಗ್ವಾದ ನಡೆಯುತ್ತಿತ್ತು. ಇದರಿಂದ ಆಕ್ರೋಶಗೊಂಡಿದ್ದ ಆಯಿಷಾ, ಮೊದಲ ಪತ್ನಿ ಹೆಸರಿನಲ್ಲಿ ಫೇಸ್‌ಬುಕ್‌ನಲ್ಲಿ ನಕಲಿ ಖಾತೆ ತೆರೆದಿದಲ್ಲದೆ, ಆಕೆಯ ಫೋಟೋಗಳನ್ನು ಪ್ರಕಟಿಸಿದ್ದರು. ಬಳಿಕ ಅಶ್ಲೀಲ ಫೋಟೋ, ವಿಡಿಯೋಗಳು ಮತ್ತು
ಸಂದೇಶಗಳನ್ನು ಪ್ರಕಟಿಸಿ, ಡೇಟಿಂಗ್‌ಗೆ ಆಹ್ವಾನಿಸಿ ಮೊಬೈಲ್ ನಂಬರ್ ಕೂಡ ಹಾಕಿದ್ದಳು. ಇದನ್ನು ಗಮನಿಸಿದ ಕೆಲ ವ್ಯಕ್ತಿಗಳು ಶರೀಫ್ರ ಮೊದಲ ಪತ್ನಿಗೆ ಕರೆ ಮಾಡಿ ಕಿರಿಕಿರಿ ಉಂಟು ಮಾಡುತ್ತಿದ್ದರು. ಈ ಸಂಬಂಧ ಆಕೆ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಆಯಿಷಾಳನ್ನು ಬಂಧಿಸಿದ್ದಾರೆ.
ಫೇಸ್‌ಬುಕ್ ಬಳಕೆದಾರರು ನಕಲಿ ಫೋಟೋ ಹಾಗೂ ಹೆಸರು ಬಳಸಿ ಅಕ್ರಮ ಚಟುವಟಿಕೆ ನಡೆಸುವುದು ಕಾನೂನು ಬಾಹಿರವಾಗಿದ್ದು, ಅಂತಹ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕಾಗುತ್ತದೆ. ಅಲ್ಲದೆ, ಈ ರೀತಿ ಯಾರಾದರೂ ತಮ್ಮ ಹೆಸರನ್ನು ನಕಲು ಮಾಡಿ ಪ್ರಕಟಿಸಿ ತೊಂದರೆ ಕೊಡುತ್ತಿದ್ದರೆ ಅಂತಹ ವ್ಯಕ್ತಿಗಳ ವಿರುದ್ಧ ಸ್ಥಳೀಯ ಮತ್ತು ಸೈಬರ್ ಠಾಣೆಗೆ ದೂರು ನೀಡುವಂತೆ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.