ಹೊಸದಿಲ್ಲಿ: ನೇಮಕಾತಿಯಲ್ಲಿ ಮಹತ್ವದ ಬದಲಾವಣೆ ಮಾಡುವ ಬಗ್ಗೆ ಸೇನೆ ಚಿಂತನೆ ನಡೆಸಿದೆ. ಸೇನೆಗೆ ಸದ್ಯ ಯುವ ಪಡೆಯ ಅಗತ್ಯವಿದೆ. ಹೀಗಾಗಿ ಚೀನ ಮತ್ತು ಪಾಕಿಸ್ತಾನದ ಗಡಿಯಂತಹ ಸಂಕೀರ್ಣ ಸನ್ನಿವೇಶದಲ್ಲಿ ಕಾರ್ಯನಿರ್ವಹಿಸಲು ಅಗತ್ಯವಿರುವ ಯೋಧರ ವಯೋಮಿತಿ ಇಳಿಸುವುದರ ಜತೆಗೆ, ಕೆಲವು ಮಹತ್ವದ ಹುದ್ದೆಗಳಲ್ಲಿ ನೇಮಕಗೊಂಡಿರುವವರ ನಿವೃತ್ತಿ ವಯೋಮಿತಿಯನ್ನು ಏರಿಕೆ ಮಾಡಲು ಚಿಂತನೆ ನಡೆಸಲಾಗಿದೆ. ಇದರಿಂದಾಗಿ ಅರ್ಹ ವ್ಯಕ್ತಿಯನ್ನು ಸೂಕ್ತ ಹುದ್ದೆಯಲ್ಲಿ ನಿಯೋಜಿಸುವುದು ಸಾಧ್ಯವಾಗಲಿದೆ.
ಬ್ರಿಗೇಡ್ ಕಮಾಂಡರ್‌ಗಳು, ವಿಭಾಗೀಯ ಕಮಾಂಡರ್‌ಗಳು ಮತ್ತು ಕೋರ್ ಕಮಾಂಡರ್‌ಗಳಂತಹ ಪ್ರಮುಖ ಹುದ್ದೆಗಳಲ್ಲಿರುವವರ ವಯೋಮಿತಿಯನ್ನು ಹೆಚ್ಚಿಸಲು ಬಡ್ತಿ ನೀತಿಯನ್ನು ಪರಿಷ್ಕರಿಸಲಾಗುತ್ತಿದೆ. ಈ ಹಿಂದೆ ಕಾಪ್ಸ್ ಕಮಾಂಡರ್ 24 ತಿಂಗಳು ಸೇವೆ ಸಲ್ಲಿಸಿದ್ದರೆ ಮಾತ್ರವೇ ಬಡ್ತಿಗೆ ಅರ್ಹರಾಗುತ್ತಿದ್ದರು. ಆದರೆ ಈಗ 18 ತಿಂಗಳು ಸೇವೆ ಸಲ್ಲಿಸಿದರೆ ಸಾಕು, ಅವರನ್ನು ಬಡ್ತಿಗೆ ಪರಿಗಣಿಸಲು ನಿರ್ಧರಿಸಲಾಗುತ್ತಿದೆ.
ಕಳೆದ ವರ್ಷ ನಡೆದ ಉನ್ನತ ಕಮಾಂಡರ್‌ಗಳ ಸಭೆಯಲ್ಲೇ ಈ ಬಗ್ಗೆ ಚರ್ಚೆ ನಡೆಸಲಾಗಿದ್ದು, ಸೇನೆಯ ಮಾನವ ಸಂಪನ್ಮೂಲ ನೀತಿಯನ್ನು ಸಮಗ್ರವಾಗಿ ಬದಲಿಸಲಾಗುತ್ತಿದೆ. ಇದರ ಮೂಲ ಉದ್ದೇಶವೇ ಸೇನೆಯ ಸಾಮರ್ಥ್ಯವನ್ನು ಹೆಚ್ಚಿಸುವುದಾಗಿದೆ. ಇನ್ನೊಂದೆಡೆ ಸೇನೆಯಲ್ಲಿನ ಅಶಿಸ್ತನ್ನೂ ಸುಧಾರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
ಐಟಿಬಿಪಿ ಯೋಧರಿಗೆ ಚೀನೀ ಭಾಷೆ: ಭಾರತ ಚೀನ ಗಡಿಯಲ್ಲಿ ಸಂವಹನ ಸಮಸ್ಯೆಯನ್ನು ನೀಗಿಸಲು ಭಾರತ-ಟಿಬೆಟ್ ಗಡಿ ಪೊಲೀಸ್ ಪಡೆಯ ಯೋಧರಿಗೆ ಚೀನೀ ಭಾಷೆಯನ್ನು ಬೋಧಿಸಲು ನಿರ್ಧರಿಸಲಾಗಿದೆ. ಮಧ್ಯಪ್ರದೇಶದಲ್ಲಿನ ರೈಸೆನ್‌ನಲ್ಲಿರುವ ಸಂಚಿ ವಿವಿಯಲ್ಲಿ ಚೀನೀ ಭಾಷೆಯನ್ನು ಐಟಿಬಿಪಿಯ 25 ಯೋಧರು ಮೊದಲ ಹಂತದಲ್ಲಿ ಕಲಿಯಲಿದ್ದಾರೆ.