ಶಿರಸಿ: ಒಂದು ಕಾಲಕ್ಕೆ ಶಿರಸಿ ಸೀಮೆಗೆ ಭಟ್ಕಳ, ಹೊನ್ನಾವರ ಭಾಗದಿಂದ ಅಡಕೆ ಕೊನೇ ಗೌಡರು ಬರುತ್ತಿದ್ದರು. ಮಳೆಗಾಲದಲ್ಲಿ ಪಸೆಯಿಂದ ಜಾರುವ ಅಡಕೆ ಮರ ಏರುವ ಕೌಶಲಿಗರು ಮಲೆನಾಡಲ್ಲಿ ಕಡಿಮೆಯೇ.
ಮಳೆಗಾಲದಲ್ಲಿ ಮೂರ್‍ನಾಲ್ಕು ತಿಂಗಳು ಘಟ್ಟ ಏರುತ್ತಿದ್ದ ಕೊನೇಗೌಡರು ಮರ ಏರಿ ಊರಿಗೆ ವಾಪಸ್ ಹೋಗುವಾಗ ಮುಂದಿನ ಬದುಕಿಗೆ, ಕುಟುಂಬಕ್ಕೆ ಹಣ ಮಾಡಿಕೊಂಡು ಹೋಗುತ್ತಿದ್ದರು. ಮತ್ತೆ ದೀಪಾವಳಿಗೆ ಕೊನೆ ಕೋಯ್ಲಿಗೆ ಬರುತ್ತಿದ್ದರು.
ಕೊರತೆಯಾಯ್ತು: ಆದರೆ, ಅಲ್ಲಿನ ಹೊಸ ತಲೆಮಾರು ಕೊನೆ ಕೋಯ್ಲಿಗೆ ಬಾರದೇ ಬೇರೆ ಬೇರೆ ಉದ್ಯೋಗದ ದಾರಿ ಹಿಡಿದಿದ್ದರಿಂದ ಕೊನೇಗೌಡರ ಸಮಸ್ಯೆ ಉಂಟಾಗತೊಡಗಿತು. ಶಿರಸಿ ಸೀಮೆಯಲ್ಲಿ ಇನ್ನು ಕೊನೆ ಕೋಯ್ಲು, ಮದ್ದು ಸಿಂಪರಣೆ ಕಷ್ಟ ಎಂಬ ಕಾಲಕ್ಕೆ ಕೆಲ ಯುವಕರು, ಓದದೇ ಕೃಷಿ ಕೂಲಿ ಮಾಡುತ್ತ ಮರ ಏರುವ ಕೌಶಲ್ಯ ಪಡೆದುಕೊಂಡರು. ಅಲ್ಪ ಸ್ವಲ್ಪ ಓದಿದವರು ಊರು ಬಿಟ್ಟರು.
ಆದರೂ 29 ಸಾವಿರ ಹೆಕ್ಟೇರ್ ಪ್ರದೇಶ ಇರುವ ಅಡಕೆ ತೋಟದಲ್ಲಿ ಮದ್ದು ಹೊಡೆ ಯುವ ಕುಶಲಕರ್ಮಿಗಳ ಕೊರತೆ ಇದೆ. ಕೆಲವಡೆ ಇಡೀ ಊರಿಗೆ ಒಬ್ಬ ಕೊನೆಗಾರ ಇರುವುದೂ ಇದೆ. ಇದರಿಂದ ಔಷಧ ಸಿಂಪರಣೆ ಕಷ್ಟವೇ ಆಗುತ್ತಿದೆ. ಬೆಳೆಗಾರರ ಬದುಕಿಗೆ ಅತಿ ಮಳೆ ಹಾಗೂ ಕುಶಲಕರ್ಮಿಗಳ ಕೊರತೆ ಕಾಡುವಂತಾಗಿದೆ.
ಹೊಸ ಪಡೆ: ಇದೀಗ ಕದಂಬ ಮಾರ್ಕೇಟಿಂಗ್, ಕೃಷಿ ವಿಜ್ಞಾನ ಕೇಂದ್ರ ಹಾಗೂ ಇತರ ಸಹಕಾರಿ ಸಂಘಟನೆಗಳು ಜಂಟಿಯಾಗಿ ಅಡಕೆ ಕೌಶಲ್ಯ ಪಡೆ ಸಿದ್ಧಗೊಳಿಸಲು ಯೋಜಿಸಿತು. ದಕ್ಷಿಣ ಕನ್ನಡ, ತೀರ್ಥಹಳ್ಳಿಯಲ್ಲಿ ನಡೆಸಲಾಗಿದ್ದ ತರಬೇತಿ ಶಿರಸಿಗೂ ವಿಸ್ತಾರಗೊಂಡಿತು. ಸ್ವತಃ ಹಸಿ ಅಡಕೆ ಟೆಂಡರ್, ಅಡಕೆ ಕೊನೆಕೊಯ್ಲು ನಡೆಸುವ ಕದಂಬ ಸಂಸ್ಥೆಗೆ ಇಂಥದೊಂದು ಪಡೆಯನ್ನು ಊರೂರಲ್ಲಿ ಸೃಷ್ಟಿಸುವ ಅಗತ್ಯ ಅರಿವಾಗಿತ್ತು. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ವಿಶ್ವೇಶ್ವರ ಭಟ್ಟ ಕೋಟೆಮನೆ, ಕೃಷಿ ವಿಜ್ಞಾನಿ ಮಂಜು ಎಂ.ಜೆ ತಂಡ ಇದಕ್ಕೊಂದು ನೀಲನಕ್ಷೆ ಸಿದ್ಧಗೊಳಿಸಿತು.
ಕಳೆದ ನಾಲ್ಕು ದಿನಗಳಿಂದ 25 ವರ್ಷದ ಆಸು ಪಾಸಿನ ಆಸಕ್ತ ವಿದ್ಯಾರ್ಥಿಗಳಿಗೆ ವಸತಿ ಸಹಿತ ಶಿಬಿರದಲ್ಲಿ ದಿನಕ್ಕೆ 500 ರೂ., ರಕ್ಷಣಾ ಬೆಲ್ಟಾ, ಕ್ಯಾಪ್‌ಗ್ಳನ್ನೂ ನೀಡಿ ತರಬೇತಿ ನೀಡಿತು. ಇದರಲ್ಲಿ ಬಿಎ, ಬಿಕಾಂ ಓದಿದವರೂ ಬಂದಿದ್ದಾರೆ.
ಕೊನೆ ಕೋಯ್ಲಿಗೂ: ತರಬೇತಿ ಶನಿವಾರ ಮುಗಿಯಲಿದೆ. ಮುಂದೆ ಸಪ್ಟೆಂಬರ್‌ನಲ್ಲೂ ಕೊನೆ ಕೋಯ್ಲಿಗೆ ಎರಡು ದಿನದ ತರಬೇತಿ ನೀಡಲು ತೀರ್ಮಾನಿಸಲಾಗಿದೆ ಎನ್ನುತ್ತಾರೆ ಸಂಘಟಕರು. ಶಿಬಿರದಲ್ಲೂ ಮುಂಜಾನೆ ಯೋಗ, ನೈತಿಕತೆ, ಆರೋಗ್ಯ ಕಾಪಾಡಿಕೊಳ್ಳುವ ಬಗೆ, ದುಶ್ಚಟಗಳ ಪರಿಣಾಮವನ್ನೂ ತಿಳಿಸಲಾಗಿದೆ. ತಜ್ಞರು ಉಪನ್ಯಾಸ ನೀಡಿದ್ದಾರೆ.
ಈ ಮಧ್ಯೆ ಅಡಕೆ ಕೃಷಿ ಮಾಹಿತಿ, ಬೋರ್ಡೋ ದ್ರಾವಣ ಸಿಂಪರಣೆ, ತುರ್ತು ಸಂದರ್ಭದಲ್ಲಿ ನಿರ್ವಹಣೆ, ಮರ ಏರುವ ಮರದ ಆಯ್ಕೆ ಕುರಿತೂ ತಿಳಿವಳಿಕೆ ನೀಡಲಾಗಿದೆ. ಹಾರೂಗಾರಿನ ಹಳೆತೋಟದಲ್ಲಿ ಅಡಕೆ ಮರ ಏರುವ ಕುರಿತು ತರಬೇತಿ ನೀಡಲಾಯಿತು. ಈ ವೇಳೆ ಸ್ಥಳೀಯ ಕೃಷಿಕರೂ ಆಸಕ್ತಿಯಿಂದ ಪಾಲ್ಗೊಂಡಿದ್ದು ಖುಷಿ ಆಗಿದೆ ಎನ್ನುತ್ತಾರೆ ಸಹಕಾರಿ ಗುರುಪಾದ ಹೆಗಡೆ ಬೊಮ್ಮನಳ್ಳಿ.