Advertisement

ಪಂಚರಾಜ್ಯ ಚುನಾವಣೆ:ಇನ್ನು ಎರಡು ದಿನಗಳಲ್ಲಿ ಸಿಗಲಿದೆ ಉತ್ತರ

02:44 PM Mar 07, 2022 | Team Udayavani |
- ಪುತ್ತಿಗೆ ಪದ್ಮನಾಭ ರೈಉತ್ತರ ಪ್ರದೇಶದ ಚುನಾವಣೆಯು ಸಂಪೂರ್ಣವಾಗಿ ರಾಜ್ಯದ ವಿಷಯಕ್ಕೆ ಸೀಮಿತವಾ ಗಿಲ್ಲ. ಅದರಲ್ಲಿ ಕೇಂದ್ರದ ಆಡಳಿತದ ಪ್ರತಿ ಬಿಂಬವೂ ಕಂಡು ಬರುವ ಕಾರಣ ಮೋದಿ ಸರಕಾರಕ್ಕೆ ಮತ ದಾರರು ನೀಡಿರುವ ಅಂಕಗಳು ಇಲ್ಲಿನ ಫ‌ಲಿತಾಂಶವನ್ನು ನಿರ್ಣ ಯಿಸುತ್ತದೆ ಎಂಬುದು ಒಪ್ಪತಕ್ಕ ಮಾತು. ಇದು ಯೋಗಿಗೆ ಎಷ್ಟು ಮುಖ್ಯವೋ ಅದಕ್ಕಿಂತ ಹೆಚ್ಚಾಗಿ ಮೋದಿಗೆ ಮುಖ್ಯವಾಗಿದೆ. ಒಂದೊಮ್ಮೆ ಈ ಬಾರಿ ಉತ್ತರ ಪ್ರದೇಶವನ್ನು ಕಳೆದುಕೊಂಡರೆ ಮುಂದಿನ ಬಾರಿ ಬಿಜೆಪಿಗೆ ಸಂಸತ್‌ ಚುನಾವಣೆ ಕಬ್ಬಿಣದ ಕಡಲೆಯಾಗಬಹುದು. ಆ ಕಾರಣದಿಂದಲೇ ಪ್ರಧಾನಿ, ಗೃಹ ಸಚಿವ ಅಮಿತ್‌ ಶಾ ಅವರಂಥ ಘಟಾನುಘಟಿಗಳು ಕೂಡ ಪ್ರಚಾರದಲ್ಲಿ ಧೂಳೆಬ್ಬಿಸಿದ್ದಾರೆ. ಮೋದಿಯವರು ಮತ ದಾರರು ಮನ ಗೆಲ್ಲಲು ವಿಶೇಷವಾಗಿ ಶ್ರಮಿಸಿದ್ದಾರೆ. ಪ್ರಚಾರದ ಅಬ್ಬರದಲ್ಲಿ ಬಿಜೆಪಿ ಕಿಂಚಿತ್ತೂ ಹಿನ್ನಡೆ ಅನುಭವಿಸಿಲ್ಲ. ಹಾಗೆಂದು ಅದುವೇ ಫ‌ಲಿತಾಂಶ ನಿರ್ಣಯಿಸುತ್ತದೆ ಎಂದು ಹೇಳುವುದೂ ಕಷ್ಟ...
Now pay only for what you want!
This is Premium Content
Click to unlock
Pay with

ಮತದಾನ ಮುಗಿದು ಫ‌ಲಿತಾಂಶಕ್ಕೆ ಕಾಯುವ ಹೊತ್ತಿದು. ಪ್ರಚಾರದ ಗುಡುಗು, ಸಿಡಿಲಿನಬ್ಬರದ ಬಳಿಕ ಕಂಡು ಬರುತ್ತಿರುವ ಪ್ರಶಾಂತತೆಯ ಹಿಂದಿರುವ ಕೌತುಕ ತಣಿಯಲು ಎರಡು ದಿನಗಳು ಬೇಕಿವೆ. ಅಲ್ಲಿಯವರೆಗೆ ಲೆಕ್ಕಾಚಾರಗಳದ್ದೇ ಪ್ರಾಬಲ್ಯ. ಎಲ್ಲ ಸಮೀಕ್ಷೆ ಗಳನ್ನೂ ಮೀರಿ ನಮ್ಮದೇ ಜಯ ಎನ್ನುವ ರಾಜಕೀಯ ನಾಯಕರ ಮನ ದೊಳಗೂ ಆಳವಾಗಿ ಬೇರೂರಿರುವ ಆತಂಕ ಉತ್ತರ ಪ್ರದೇಶದ ವಿಷಯಕ್ಕೆ ಬಂದಾಗ ಸ್ವಲ್ಪ ಹೆಚ್ಚೇ ಇದೆ.

Advertisement

2012ರಲ್ಲಿ ಅಖಿಲೇಶ್ ಯಾದವ್‌ ಹಾಗೂ 2017ರಲ್ಲಿ ಯೋಗಿ ಆದಿತ್ಯನಾಥ್‌ ಅವರು ಯಾವ ರೀತಿ ಅಚ್ಚರಿಯ ಮುಖ್ಯಮಂತ್ರಿಗಳಾದರೋ ಅಂಥ ಅಚ್ಚರಿಗೆ ಈ ಬಾರಿ ಅವಕಾಶವಿಲ್ಲ. ಈಗ ಏನು ಸಂಭವಿ ಸಿದರೂ ಅದರ ಪರಿಣಾಮ ಎಲ್ಲರನ್ನೂ ತಟ್ಟುತ್ತದೆ. ಉತ್ತರ ಪ್ರದೇಶದಲ್ಲಿ ಬಿಜೆಪಿ ಯಾವ ಫ‌ಲಿತಾಂಶವನ್ನು ಪಡೆದುಕೊಂಡರೂ ಅದರಲ್ಲಿ ಕೇಂದ್ರ ಹಾಗೂ ರಾಜ್ಯ ನಾಯಕರು ಪಾಲು ಪಡೆಯಲೇಬೇಕಾಗಿದೆ.

ರಾಮಮಂದಿರ ನಿರ್ಮಾಣದ ಕಾರ್ಯಾರಂಭ, ಕಾಶಿ ವಿಶ್ವನಾಥ ದೇಗುಲದ ಪುನರುತ್ಥಾನದ ಬಳಿಕ ನಡೆದಿರುವ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ತಮ್ಮದೇ ಎಂದು ಬಿಜೆಪಿ ನಾಯಕರು ಹೇಳಿಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಸಂಭವಿಸಿರುವ ಹಲವಾರು ಹತ್ಯೆ, ಅತ್ಯಾಚಾರದಂಥ ಕೃತ್ಯಗಳು, ವಿವಾದಾಸ್ಪದ ಕೃಷಿ ಮಸೂದೆ, ಅದಕ್ಕೆ ಸಂಬಂಧಿಸಿ ನಡೆದಿದ್ದ ಪ್ರತಿಭಟನೆಯನ್ನು ಮುಂದಿಟ್ಟು ಲಖೀಂಪುರದಲ್ಲಿ ನಡೆದಿದ್ದ ಗಲಭೆ ಮುಂತಾದವುಗಳು ಬಿಜೆಪಿ ಪಾಲಿನ ನೆಮ್ಮದಿಗೆ ಭಂಗ ತರುವಂಥವುಗಳೇ. ಕೃಷಿ ಕಾಯ್ದೆ ಗಳನ್ನು ಹಿಂಪಡೆಯುವ ಮೂಲಕ ರೈತರ ಕೋಪವನ್ನು ಸಣ್ಣ ಮಟ್ಟಿಗೆ ಶಮನ ಮಾಡಲು ನೋಡಿದ್ದರೂ ಅದೆಷ್ಟು ಫ‌ಲ ಕೊಟ್ಟಿದೆ ಎಂಬುದು ಫ‌ಲಿತಾಂಶದಿಂದಷ್ಟೇ ತಿಳಿಯಬೇಕಿದೆ.

ಈ ಬಾರಿ ಯೋಗಿಯೋ ಅಖಿಲೇಶೋ ಎಂಬ ಪ್ರಶ್ನೆಯಿದೆಯೇ ಹೊರತು ಮಾಯಾವತಿ ವಿಷಯ ಚರ್ಚೆಗೆ ಬರಲಿಲ್ಲ. ಆದರೆ ಕಿಂಗ್‌ಮೇಕರ್‌ ಆಗುವ ಸಂಭವವನ್ನು ತಳ್ಳಿ ಹಾಕುವಂತಿಲ್ಲ. ಉತ್ತರ ಪ್ರದೇಶ ದಲ್ಲಿ ಆಗಿರುವ ಅಭಿವೃದ್ಧಿ, ಜನರಿಗೆ ಸಿಕ್ಕಿರುವ ನೆಮ್ಮದಿಯ ದಿನಗಳನ್ನು ಗಮನಿಸಿದರೆ ಯೋಗಿಗೆ ಮತ್ತೂಂದು ಬಾರಿ ಸ್ಪಷ್ಟ ಬಹುಮತದ ಗೆಲುವು ಖಚಿತ ಎಂದೇ ಹೇಳಲಾಗುತ್ತದೆ. ಆದರೆ ಉತ್ತರ ಪ್ರದೇಶದ ಚುನಾವಣೆಯು ಸಂಪೂರ್ಣವಾಗಿ ರಾಜ್ಯದ ವಿಷಯಕ್ಕೆ ಸೀಮಿತವಾ ಗಿಲ್ಲ. ಅದರಲ್ಲಿ ಕೇಂದ್ರದ ಆಡಳಿತದ ಪ್ರತಿ ಬಿಂಬವೂ ಕಂಡು ಬರುವ ಕಾರಣ ಮೋದಿ ಸರಕಾರಕ್ಕೆ ಮತ ದಾರರು ನೀಡಿರುವ ಅಂಕಗಳು ಇಲ್ಲಿನ ಫ‌ಲಿತಾಂಶವನ್ನು ನಿರ್ಣ ಯಿಸುತ್ತದೆ ಎಂಬುದು ಒಪ್ಪತಕ್ಕ ಮಾತು. ಇದು ಯೋಗಿಗೆ ಎಷ್ಟು ಮುಖ್ಯವೋ ಅದಕ್ಕಿಂತ ಹೆಚ್ಚಾಗಿ ಮೋದಿಗೆ ಮುಖ್ಯವಾಗಿದೆ. ಒಂದೊಮ್ಮೆ ಈ ಬಾರಿ ಉತ್ತರ ಪ್ರದೇಶವನ್ನು ಕಳೆದುಕೊಂಡರೆ ಮುಂದಿನ ಬಾರಿ ಬಿಜೆಪಿಗೆ ಸಂಸತ್‌ ಚುನಾವಣೆ ಕಬ್ಬಿಣದ ಕಡಲೆಯಾಗಬಹುದು. ಆ ಕಾರಣದಿಂದಲೇ ಪ್ರಧಾನಿ, ಗೃಹ ಸಚಿವ ಅಮಿತ್‌ ಶಾ ಅವರಂಥ ಘಟಾನುಘಟಿಗಳು ಕೂಡ ಪ್ರಚಾರದಲ್ಲಿ ಧೂಳೆಬ್ಬಿಸಿದ್ದಾರೆ. ಮೋದಿಯವರು ಮತ ದಾರರು ಮನ ಗೆಲ್ಲಲು ವಿಶೇಷವಾಗಿ ಶ್ರಮಿಸಿದ್ದಾರೆ. ಪ್ರಚಾರದ ಅಬ್ಬರದಲ್ಲಿ ಬಿಜೆಪಿ ಕಿಂಚಿತ್ತೂ ಹಿನ್ನಡೆ ಅನುಭವಿಸಿಲ್ಲ. ಹಾಗೆಂದು ಅದುವೇ ಫ‌ಲಿತಾಂಶ ನಿರ್ಣಯಿಸುತ್ತದೆ ಎಂದು ಹೇಳುವುದೂ ಕಷ್ಟ.

ಮೀನಿನ ಹೆಜ್ಜೆಯಾದಾರೇ ಮಾಯಾವತಿ?
ಒಂದು ಕಾಲದಲ್ಲಿ ಏಕಾಂಗಿಯಾಗಿ ರಾಜ್ಯವನ್ನು ಆಳಿದ್ದ ಬಹುಜನ ಸಮಾಜವಾದಿ ಪಕ್ಷವು ತನ್ನ ದಲಿತಪರ ವಾದದಲ್ಲಿ ರಾಜಿ ಮಾಡಿಕೊಂಡು ಬಿಜೆಪಿ ಜತೆ ಮೈತ್ರಿ ಮಾಡಿಕೊಂಡ ಬಳಿಕ ಅದಕ್ಕೆ ಸಂಪೂರ್ಣ ದಲಿತರ ಬೆಂಬಲ ಇದೆ ಎಂದು ಹೇಳುವುದು ಸಾಧ್ಯವಾಗುತ್ತಿಲ್ಲ. ಹಾಗೆಂದು ದಲಿತ ಪರ ವಾದದಿಂದಲೇ ತಾನು ಅಧಿಕಾರಕ್ಕೆ ಬರುವುದು ಸಾಧ್ಯವಿಲ್ಲ ಎಂಬುದೂ ಅದರ ಮುಖ್ಯಸ್ಥೆ ಮಾಯಾವತಿಗೆ ಮನವರಿಕೆಯಾದ್ದರಿಂದಲೇ ಅವರು ಮೇಲ್ಜಾತಿ ಯವರಿಗೂ ಟಿಕೆಟ್‌ ನೀಡಲು ಆರಂಭಿಸಿದ್ದು. ಆದರೆ ಮಾಯಾವತಿಗೆ ನೇರ ಠಕ್ಕರ್‌ ಕೊಡುತ್ತಿರುವುದು 7 ವರ್ಷಗಳ ಹಿಂದೆ ಹುಟ್ಟು ಪಡೆದುಕೊಂಡಿರುವ ಚಂದ್ರಶೇಖರ್‌ ಆಝಾದ್‌ ಅವರ ಭೀಮ್‌ ಆರ್ಮಿ. ಇದು ಸಂಪೂರ್ಣವಾಗಿ ದಲಿತರನ್ನು ಕೇಂದ್ರೀಕರಿಸಿ ಕೊಂಡೇ ಕಾರ್ಯವೆಸಗುತ್ತಿರುವ ಪಕ್ಷ. ಮಾಯಾವತಿ ದಲಿತರ ಕೈಬಿಟ್ಟು ಮೇಲ್ಜಾತಿಯವರೊಂದಿಗೆ ಕೈಜೋಡಿಸಿದ್ದಾರೆ ಎಂದು ಹೇಳುತ್ತಾ ದಲಿತ ಮತದಾರರನ್ನು ಸೆಳೆದು ಒಟ್ಟು ಸೇರಿಸುವಲ್ಲಿ ಭೀಮ್‌ ಆರ್ಮಿ ಸಫ‌ಲವಾಗಿದೆ. ಇದು ಗಟ್ಟಿ ಯಾದುದೇ ಮಾಯಾವತಿ ಮತ್ತಷ್ಟು ದುರ್ಬಲರಾಗಲು ಪ್ರಮುಖ ಕಾರಣ. ಹಾಗಿದ್ದರೂ ಈ ಬಾರಿ ಬಿಎಸ್‌ಪಿ ಮೀನಿನ ಹೆಜ್ಜೆಯಂತಾಗಿ ಎಲ್ಲರೂ ಮೂಗಿನ ಮೇಲೆ ಬೆರಳಿಡುವಂಥ ಸಾಧನೆ ಮಾಡಿಯಾರೇ ಎಂಬ ಪ್ರಶ್ನೆಯೂ ಜೀವಂತವಾಗಿದೆ.

Advertisement

ಎಸ್‌ಪಿ ಮೇಲೆ ಹೆಚ್ಚಿನ ನಿರೀಕ್ಷೆ
ಬಿಜೆಪಿಗೆ ಹೆಚ್ಚು ಆತಂಕವಿರುವುದೇ ಅಖಿಲೇಶ್ ಯಾದವ್‌ ಅವರ ಸಮಾಜವಾದಿ ಪಕ್ಷದ ಮೇಲೆ. ಈ ಬಾರಿ ಆಡಳಿತ ವಿರೋಧಿ ಅಲೆಯ ಪ್ರಭಾವ ತೀವ್ರವಾದರೆ ಅದರ ನೇರ ಲಾಭವಾಗುವುದು ಇದೇ ಸಮಾಜವಾದಿ ಪಾರ್ಟಿಗೆ. ಪ್ರಚಾರದಲ್ಲೂ ಈ ಪಕ್ಷಕ್ಕೆ ಜನಬೆಂಬಲ ಇರುವುದು ಕಾಣಿಸಿದೆ. ಕಳೆದ ಚುನಾವಣೆಯ ಸಮಯದಲ್ಲಿ ಇದ್ದ ಆಂತರಿಕ ಸಂಘರ್ಷದಿಂದ ಚೇತರಿಸಿಕೊಂಡಿರುವ ಸಮಾಜವಾದಿ ಪಕ್ಷಕ್ಕೆ, ಈಗ ಮುಲಾಯಂ ಸಿಂಗ್‌ ಅವರ ಕಿರಿಯ ಸೊಸೆ ಅಪರ್ಣಾ ಯಾದವ್‌ ಬಿಜೆಪಿಗೆ ಹೋಗಿರುವ ಸಂಗತಿ ತಲೆನೋವಾಗಬಹುದು. 2012ರ ಬಳಿಕ 5 ವರ್ಷ ಉತ್ತಮ ಆಡಳಿತ ನೀಡಿದ್ದರೂ ಕೌಟುಂಬಿಕ ಮತ್ತು ಆಂತರಿಕ ಕಲಹದಿಂದಾಗಿ 2017ರಲ್ಲಿ ಗೆಲ್ಲಲು ಸಾಧ್ಯವಾಗಿಲ್ಲ. ಜತೆಗೆ ಅವರ ಸೋಲಿಗೆ ಮೋದಿ ಹಾಗೂ ಯೋಗಿಯ ಪ್ರಭಾವವೂ ಕಾರಣವಾಗಿತ್ತು. ಹಾಗಿದ್ದರೂ ಈಗಲೂ ಅವರ ವರ್ಚಸ್ಸು ಕುಂದಿಲ್ಲ ಎಂಬುದು ಗಮನಾರ್ಹ ಸಂಗತಿ.

ಚೇತರಿಕೆ ಕಾಣದ ಕಾಂಗ್ರೆಸ್‌
ಕಾಂಗ್ರೆಸ್‌ ವಿಷಯಕ್ಕೆ ಬಂದರೆ ಇಲ್ಲಿ ಪ್ರಿಯಾಂಕಾ ವಾದ್ರಾ ಪಕ್ಷವನ್ನು ಮುನ್ನಡೆಸುತ್ತಿದ್ದರೂ ಹೇಳಿಕೊಳ್ಳುವಂಥ ಸುಧಾರಣೆ ಕಂಡು ಬಂದಿಲ್ಲ. ಆದ್ದರಿಂದ ಕಾಂಗ್ರೆಸ್‌ ಬಗ್ಗೆ ಬಿಜೆಪಿಯಾಗಲೀ, ಎಸ್‌ಪಿಯಾಗಲೀ ತಲೆಕೆಡಿಸಿಕೊಳ್ಳುತ್ತಿಲ್ಲ. ಕಾಂಗ್ರೆಸ್‌ ಎಂಬುದು ನಾಯಕನಿಲ್ಲದ ಪಕ್ಷ ಎಂಬ ಭಾವನೆ ಜನರಲ್ಲೂ ಮೂಡಿದೆ. ಲಖೀಂಪುರ, ಪ್ರಕರಣ, ಹತ್ರಾಸ್‌ ಅತ್ಯಾಚಾರ-ಕೊಲೆ ಪ್ರಕರಣ, ದಲಿತರ ಮೇಲಿನ ದೌರ್ಜನ್ಯದಂಥ ಹಲವು ಪ್ರಕರಣಗಳ ಸಂದರ್ಭದಲ್ಲೂ ಸಂತ್ರಸ್ತರ ಮನೆಗೆ ಭೇಟಿ ಕೊಟ್ಟು ಮತದಾರರ ಅನುಕಂಪ ಪಡೆಯಲು ಪ್ರಿಯಾಂಕಾ ಮತ್ತು ರಾಹುಲ್‌ ಗಾಂಧಿ ಶ್ರಮಿಸಿದ್ದರಾದರೂ ಪಕ್ಷದ ಸ್ಥಿತಿ ಸುಧಾರಣೆ ಕಂಡಿಲ್ಲ. ಆದ್ದರಿಂದ ಈ ಬಾರಿಯೂ ಅದು ಗೌಣವಾಗಿಯೇ ಇದೆ.

ಸುದ್ದಿಯಾಗದ ಹೇಳಿಕೆಗಳು
ಕೆಲವು ಚುನಾವಣೆಗಳಲ್ಲಿ ನಾಯಕರ ಹೇಳಿಕೆಗಳೇ ಫ‌ಲಿತಾಂಶ ವನ್ನು ಕೊನೆಕ್ಷಣದಲ್ಲಿ ತಿರುಗಿಸುತ್ತವೆ. ಅದಕ್ಕೆ ಈ ಹಿಂದಿನ ಗುಜರಾತ್‌ ಚುನಾವಣೆ ಸಾಕ್ಷಿಯಾಗಿತ್ತು. ಆದರೆ ಈ ಬಾರಿ ಉತ್ತರ ಪ್ರದೇಶದಲ್ಲಿ ಅಂಥ ಹೇಳಿಕೆಗಳು ಸದ್ದು ಮಾಡಿಲ್ಲ. ನಾಯಕರು ನಾಲಗೆ ಮೇಲೆ ಹಿಡಿತ ಹೊಂದಿದ್ದರು. ಅಲ್ಲೊಂದಿಲ್ಲೊಂದು ಹೇಳಿಕೆಗಳ ಲಾಭ ಪಡೆಯಲು ಕೆಲವರು ಶ್ರಮಿಸಿದ್ದರೂ ದೊಡ್ಡ ಮಟ್ಟದ ಯಶಸ್ಸು ಪಡೆ ಯುವಲ್ಲಿ ವಿಫ‌ಲರಾಗಿದ್ದಾರೆ. ಕಾಂಗ್ರೆಸ್‌ನ ಪ್ರಿಯಾಂಕಾ ಕುಟುಂಬಕ್ಕೆ ಭಯೋತ್ಪಾದಕರ ಸಂಪರ್ಕವಿದೆ ಎಂಬ ಹೇಳಿಕೆಯ ಲಾಭ ಪಡೆಯಲು ಇದೇ ಪ್ರಿಯಾಂಕಾ ಶ್ರಮಿಸಿದ್ದರು. ಹೌದು, ನನ್ನ ಕುಟುಂಬಕ್ಕೆ ಭಯೋತ್ಪಾದಕರ ನಂಟಿದೆ. ಅದು ಹೇಗೆಂದರೆ ನನ್ನ ಅಜ್ಜಿ ಹಾಗೂ ತಂದೆ ಇದೇ ಭಯೋತ್ಪಾದಕರ ಗುಂಡಿಗೆ ಬಲಿಯಾಗಿದ್ದರು. ಅವರು ದೇಶಕ್ಕಾಗಿ ಜೀವ ತೆತ್ತಿದ್ದರು. ನಮ್ಮ ಕುಟುಂಬದ ಭಯೋತ್ಪಾದಕರ ಸಂಪರ್ಕ ಇಷ್ಟೇ ಎಂದು ಹೇಳುವ ಮೂಲಕ ಅನುಕಂಪ ಗಿಟ್ಟಿಸಲು ಶ್ರಮಿಸಿದ್ದರು. ಆದರೆ ಅದರಲ್ಲಿ ಅವರು ಸಫ‌ಲರಾಗಲಿಲ್ಲ. ಅದೊಂದು ಬಿಟ್ಟರೆ ಯಾರಿಗೂ ಹಾನಿ ಯಾಗುವಂಥ ಅಥವಾ ಲಾಭವಾಗುವಂಥ ಹೇಳಿಕೆಗಳು ಈ ಬಾರಿಯ ಪ್ರಚಾರದಲ್ಲಿ ಕಂಡು ಬಂದಿಲ್ಲ ಎಂಬುದು ಗಮನಾರ್ಹ ಸಂಗತಿ.

ಹಿಜಾಬ್‌ಗೂ ಇದೆ ಸಣ್ಣ ಪಾಲು
ಈ ಬಾರಿಯ ಚುನಾವಣೆಯಲ್ಲಿ ಹಿಜಾಬ್‌ ವಿಷಯಕ್ಕೂ ಸಣ್ಣ ದೊಂದು ಪಾಲಿದೆ. ಇದು ಬಿಜೆಪಿಗೆ ಅನುಕೂಲ ಮಾಡಿಕೊಡಲಿದೆ ಎಂಬ ಆತಂಕ ಇತರ ಪಕ್ಷಗಳಲ್ಲಿದೆ. ತ್ರಿವಳಿ ತಲಾಖ್‌ ವಿಷಯದಲ್ಲಿ ಬಿಜೆಪಿಯನ್ನು ದೊಡ್ಡ ವರ್ಗದ ಮುಸ್ಲಿಂ ಮಹಿಳೆಯರು ಬೆಂಬಲಿ ಸಿದ್ದಾರೆ ಎಂಬುದು ಸ್ಪಷ್ಟವಾಗಿತ್ತು. ಈಗ ಹಿಜಾಬ್‌ ವಿಷಯದಲ್ಲೂ ಮುಸ್ಲಿಂ ಮಹಿಳೆಯರು ಬಿಜೆಪಿಗೆ ಮತ ಹಾಕಬಹುದು ಎಂಬ ಆತಂಕ ಬಿಜೆಪಿಯೇತರ ಪಕ್ಷಗಳಲ್ಲಿದೆ. ಆದರೆ ಇದಕ್ಕೆ ಸಂಬಂಧಿಸಿದ ತೀರ್ಪು ಪ್ರಕಟವಾಗದೆ ಇರುವುದು ಬಿಜೆಪಿ ವಿರೋಧಿಗಳ ಆತಂಕ ವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿದೆ.

ಮೋದಿ ಆಡಳಿತದ ಮೌಲ್ಯಮಾಪನ
ಉತ್ತರ ಪ್ರದೇಶ ಸಹಿತ ನಾಲ್ಕು ರಾಜ್ಯಗಳಲ್ಲಿ ನಾವು ಗೆಲ್ಲುತ್ತೇವೆ ಮತ್ತು ಪಂಜಾಬಿನಲ್ಲಿ ಗಣನೀಯ ಸಾಧನೆ ಮಾಡುತ್ತೇವೆ ಎಂದು ಬಿಜೆಪಿಯ ಕೇಂದ್ರೀಯ ನಾಯಕರು ಹೇಳುತ್ತಲೇ ಇದ್ದಾರೆ. ಏನಿದ್ದರೂ ಉತ್ತರ ಪ್ರದೇಶದ ಫ‌ಲಿತಾಂಶವು ಪ್ರಧಾನಿ ನರೇಂದ್ರ ಮೋದಿಯವರು ಆಡಳಿತದ ಮೌಲ್ಯಮಾಪನ ಎಂದೇ ಹೇಳಲಾ ಗುತ್ತಿದೆ. ಈ ಬಾರಿ ಇಲ್ಲಿ ಸಿಗುವ ಫ‌ಲಿತಾಂಶವು ಮೋದಿಯ ಮುಂದಿನ ನಡೆಯ ಮೇಲೆ ಪ್ರಭಾವ ಬೀರಲಿದೆ. ಚುನಾವಣೆ ನಡೆದಿರುವುದು ವಿಧಾನಸಭೆಗಾದರೂ ಇದರಲ್ಲಿ ಕೇಂದ್ರದ ಆಡ ಳಿತದ ನೆರಳು ಮತದಾರರಲ್ಲಿ ಪ್ರಭಾವ ಬೀರುತ್ತದೆ. ಇಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿದರೆ ಕೇಂದ್ರ ಸರಕಾರ ಈಗ ಕೈಗೊಂಡಿರುವ ಕಠಿನ ಸುಧಾರಣಾ ಕ್ರಮಗಳನ್ನು ಮುಂದುವರಿಸಬ ಹುದು. ಒಂದೊಮ್ಮೆ ನಿರೀಕ್ಷೆಯ ಸಾಧನೆ ಮಾಡದಿದ್ದರೆ ತನ್ನ ಕಾರ್ಯಶೈಲಿ ಯನ್ನು ಬದಲಾಯಿಸಿ ಮುಂದಿನ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮತದಾರರನ್ನು ಓಲೈಸುವಂಥ ಜನ ಪ್ರಿಯ ಕಾರ್ಯಕ್ರಮಗಳಿಗೆ ಮುಂದಾಗಬಹುದು.ಅಂತೂ ಚುನಾವಣೆಯ ಜ್ವರ ಇಳಿದಿದೆ. ಫ‌ಲಿತಾಂಶದ ಬಳಿಕ ಹೊಸ ಅಧ್ಯಾಯಕ್ಕೆ ನಾವು ಸಿದ್ಧರಾಗಬೇಕಿದೆ.

ಯುದ್ಧದ ನೆರಳು
ಉತ್ತರ ಪ್ರದೇಶದ ಕೊನೆಯ ಒಂದೆರಡು ಹಂತದ ಮತದಾನದಲ್ಲಿ ಉಕ್ರೇನ್‌ – ರಷ್ಯಾ ನಡುವಿನ ಯುದ್ಧದ ನೆರಳು ಕಂಡು ಬಂದಿದೆ. ಉಕ್ರೇನ್‌ನಲ್ಲಿ ಸಿಲುಕಿದ್ದವರನ್ನು ರಕ್ಷಿಸುವಲ್ಲಿ ಭಾರತ ಸಂಪೂರ್ಣವಾಗಿ ವಿಫ‌ಲವಾಗಿದೆ; ನಮ್ಮ ನೀಟ್‌ ವ್ಯವಸ್ಥೆಯಲ್ಲಿ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ ಎಂಬ ಆರೋಪಗಳು ಮತಗಟ್ಟೆಯಲ್ಲಿ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಕಾದು ನೋಡಬೇಕು. ಬಿಜೆಪಿ ಹಾಗೂ ಕೇಂದ್ರ ಸರಕಾರಕ್ಕೆ ಚುನಾವಣೆಯೇ ಮುಖ್ಯವಾಯಿತೇ ಹೊರತು ಉಕ್ರೇನ್‌ನಲ್ಲಿ ಸಿಲುಕಿದ್ದವರನ್ನು ರಕ್ಷಣೆ ಮುಖ್ಯವಾಗಲಿಲ್ಲ ಎಂದು ಹೇಳುತ್ತಾ ಮತದಾರರ ಮೇಲೆ ಪ್ರಭಾವ ಬೀರಲು ಬಿಜೆಪಿ ವಿರೋಧಿಗಳು ತೀವ್ರವಾಗಿ ಶ್ರಮಿಸಿದ್ದಾರೆ. ಆದರೆ ಇದು ಫ‌ಲಿತಾಂಶದ ಮೇಲೆ ಪರಿಣಾಮ ಬೀರುವಷ್ಟು ಗಂಭೀರ ಸ್ವರೂಪ ಪಡೆದುಕೊಂಡಿಲ್ಲ. ಈ ವಿಷಯದಲ್ಲಿ ಒಂದಷ್ಟು ಮಂದಿ ಬಿಜೆಪಿಯನ್ನು ಟೀಕಿಸಿದರೆ, ಅದಕ್ಕಿಂತ ಹೆಚ್ಚಿನ ಸಂಖ್ಯೆಯ ಜನರು ಬಿಜೆಪಿಗೆ ಶಹಬ್ಟಾಸ್‌ ಹೇಳಿದ್ದಾರೆ. ಖುದ್ದು ಪ್ರಧಾನಿ ಮೋದಿ ಅವರೂ ಯುದ್ಧದ ವಿಷಯವನ್ನು ತಮ್ಮ ಅನುಕೂಲಕ್ಕೆ ಬಳಸಿಕೊಂಡರು. ಜಗತ್ತು ಅತ್ಯಂತ ಸಂಕಷ್ಟದ ಸಮಯವನ್ನು ಎದುರಿಸುತ್ತಿದೆ. ಹೀಗಾಗಿ ಭಾರತವನ್ನು ಮತ್ತಷ್ಟು ಸದೃಢ ಮಾಡುವ ಅಗತ್ಯ ಈಗಿನ ಅನಿವಾರ್ಯತೆ ಆಗಿದ್ದು, ಇದಕ್ಕೆ ಬಿಜೆಪಿಯೊಂದೇ ಶಕ್ತ ಎನ್ನುವ ಮೂಲಕ ದಾಳ ಉರುಳಿಸಿದ್ದರು. ಒಟ್ಟಾರೆ. ಯುದ್ಧದ ಪರಿಸ್ಥಿತಿ ಬಿಜೆಪಿಗೆ ಚುನಾವಣೆ ವಿಷಯದಲ್ಲಿ ಅನುಕೂಲವೇ ಮಾಡಿದೆ ಎನ್ನಬಹುದು.

– ಪುತ್ತಿಗೆ ಪದ್ಮನಾಭ ರೈ

Advertisement

Udayavani is now on Telegram. Click here to join our channel and stay updated with the latest news.