ಸೂಪರ್‌ವೈಸರ್ ತುಸು ಸಂಕೋಚದಿಂದಲೇ, ನನ್ನ ಹತ್ತಿರ ಬಂದು, “ನೀವು ಬೇಜಾರು ಮಾಡಿಕೊಳ್ಳದಿದ್ದರೆ ಅವರಿಗೆ ಸ್ವಲ್ಪ ತೋರಿಸಿಬಿಡಿ ಪ್ಲೀಸ್’ ಅಂತ ಹೇಳಿದಾಗ ನಾನು ಇಕ್ಕಟ್ಟಿಗೆ ಸಿಲುಕಿದೆ.
ಕಾಲೇಜಿಗೆ ವಿದಾಯ ಹೇಳುವ ದಿನ ಹತ್ತಿರವಾಗುತ್ತಿತ್ತು. ಬಿ.ಎ.ತರಗತಿಯ ಅಂತಿಮ ವರ್ಷದ ಕಡೆಯ ಪರೀಕ್ಷೆ. ಅದು ಮುಗಿದರೆ ಎಲ್ಲರ ದಾರಿಯೂ ಕವಲಾಗಿ ಒಡೆಯುತ್ತಿತ್ತು. ಅಂದಿನ ಪರೀಕ್ಷೆಗೆ ತಯಾರಾಗಿ ಹೋಗಿದ್ದೆ. ಅರ್ಥಶಾಸ್ತ್ರ ಎಂದರೆ ಸಾಧಾರಣವಾಗಿ ಎಲ್ಲರಿಗೂ ಕಬ್ಬಿಣದ ಕಡಲೆಯೇ. ಪ್ರಶ್ನೆ ಪತ್ರಿಕೆ ಕೈಗೆ ಬರುತ್ತಿದ್ದಂತೆ ಬೇಗಬೇಗ ಬರೆಯಲು ಶುರು ಮಾಡಿದೆ. ಪಕ್ಕದಲ್ಲಿ ಕುಳಿತಿದ್ದ ಸಹಪಾಠಿಯಿಂದ ಕಿರಿಕಿರಿ ಶುರುವಾಯಿತು. “ಸ್ವಲ್ಪ ತೋರಿಸೇ, ಪ್ಲೀಸ್ ಪ್ಲೀಸ್’ ಅನ್ನತೊಡಗಿದಳು. ಆ ಮಾತು ಕಿವಿಗೇ ಬೀಳದವಳಂತೆ ಬರೆಯುತ್ತಲೇ ಇದ್ದೆ. ಅವಳು ಜಿಗಣೆಯಂತೆ ಪಟ್ಟು ಹಿಡಿದಳು. ನಂತರ ಇದ್ದಕ್ಕಿದ್ದಂತೆ ಜೋರಾಗಿ ಅಳಲು ಶುರು ಮಾಡಿಬಿಟ್ಟಳು. ಅವಳ ವರ್ತನೆ ನೋಡಿ ನನಗೆ ಶಾಕ್ ಆಯಿತು. ಎಲ್ಲವನ್ನೂ ಚೆನ್ನಾಗಿಯೇ ಓದಿ ಬಂದಿದ್ದಳಂತೆ. ಆದರೆ ಈಗ ಹೆದರಿಕೆಯಿಂದ ಎಲ್ಲವೂ ಮರೆತುಹೋಗಿ ಒಂದಕ್ಷರ ಬರೆಯಲೂ ಉತ್ತರ ಹೊಳೆಯದಾಗಿತ್ತಂತೆ. ಅವಳ ಅಳುವನ್ನು ನೋಡಿ ಎಕ್ಸಾಂ ಹಾಲ್‌ನಲ್ಲಿದ್ದವರೆಲ್ಲರೂ ಗಾಬರಿಯಾಗಿ ಬಿಟ್ಟರು.
ವಿದ್ಯಾರ್ಥಿನಿಯಿಂದ ಇಂಥ ಒಂದು ಸನ್ನಿವೇಶವನ್ನು ನಿರೀಕ್ಷಿಸದ ಸೂಪರ್‌ವೈಸರ್‌ಗೂ ಬಹಳ ಬೇಸರವಾಗಿ, ನನ್ನ ಹತ್ತಿರ ಬಂದು, “ನೀವು ಬೇಜಾರು ಮಾಡಿಕೊಳ್ಳದಿದ್ದರೆ ಅವರಿಗೆ ಸ್ವಲ್ಪ ತೋರಿಸಿಬಿಡಿ ಪ್ಲೀಸ್’ ಅಂತ ಹೇಳಿದಾಗ ನಾನು ಇಕ್ಕಟ್ಟಿಗೆ ಸಿಲುಕಿದೆ. ಏಕೆಂದರೆ ಕಾಪಿ ಮಾಡುವಷ್ಟೇ ತಪ್ಪು, ಕಾಪಿ ಮಾಡಲು ಅವಕಾಶ ಮಾಡಿಕೊಡುವುದು ಎಂಬುದು ನನ್ನ ಅಭಿಪ್ರಾಯ.
ಮುಂದೆ ಏನು ಮಾಡುವುದೆಂದು ತೋಚದೆ, ಮಾಸ್ತರರಿಗೆ ಎದುರು ಹೇಳಲೂ ಆಗದೆ ಉತ್ತರಪತ್ರಿಕೆಯನ್ನೇ ತೆಗೆದು ಅವಳ ಪಕ್ಕದಲ್ಲಿಟ್ಟೆ. ಅವಳು ಬೇಗಬೇಗ ಎಲ್ಲವನ್ನೂ ಕಾಪಿ ಮಾಡಿಕೊಳ್ಳಲಾರಂಭಿಸಿದಳು. ಅವಳ ರಿಜಿಸ್ಟರ್ ನಂಬರ್ ನನ್ನ ನಂಬರ್‌ಗಿಂತ ಮೊದಲಿರುವುದರಿಂದ ನನಗೆ ತೊಡಕಾಗಬಹುದೆಂಬ ಅರಿವೇ ನನಗಿರಲಿಲ್ಲ.
ಪರೀಕ್ಷೆಗಳು ಮುಗಿದು ಫಲಿತಾಂಶ ನೋಡಿದಾಗ ಮಾತ್ರ ನಾನು ದೊಡ್ಡ ಶಾಕ್‌ಗೆ ಒಳಗಾಗಿದ್ದೆ. ಪರೀಕ್ಷೆಯಲ್ಲಿ ಅವಳು ನನಗಿಂತ ಹೆಚ್ಚು ಅಂಕ ಗಳಿಸಿದ್ದು ಮಾತ್ರವಲ್ಲದೆ, ಅಧಿಕ ಅಂಕ ಗಳಿಸಿದ ವಿದ್ಯಾರ್ಥಿನಿ ಎಂಬ ಬಹುಮಾನವನ್ನೂ ಗಿಟ್ಟಿಸಿಕೊಂಡಿದ್ದಳು. ಅವಳ ಉತ್ತರವನ್ನು ನಾನು ಕಾಪಿ ಮಾಡಿರಬೇಕೆಂದು ಅವಳ ನಂತರವಿದ್ದ ನನ್ನ ನಂಬರ್ ನನಗೆ ಮೋಸ ಮಾಡಿತ್ತು. ಮೌಲ್ಯಮಾಪಕರಿಗೆ ಆ ರೀತಿಯ ಅಭಿಪ್ರಾಯ ಮೂಡಿರಬಹುದು. ಅಂತೂ ಕಾಲ ಮಿಂಚಿ ಹೋಗಿತ್ತು. ಯಾರಲ್ಲಿ ಹೇಳಿದರೂ ಯಾರೂ ನಂಬುವ ಸ್ಥಿತಿಯಲ್ಲಿರಲಿಲ್ಲ. ನನ್ನ ದುಃಖವನ್ನು ನಾನೇ ನುಂಗಿಕೊಂಡೆ. ಇನ್ಮುಂದೆ ಇಂಥ ಕೆಲಸ ಮಾಡಬಾರದು ಎಂದು ಅಂದುಕೊಳ್ಳುವ ವೇಳೆಗೆ ನನ್ನ ವಿದ್ಯಾರ್ಥಿ ಜೀವನವೇ ಮುಗಿದು ಹೋಗಿತ್ತು. ಮಿಂಚಿಹೋದ ಕಾರ್ಯಕ್ಕೆ ಚಿಂತಿಸಿ ಫಲವಿಲ್ಲ. ಅಲ್ಲವೇ?
-ಪುಷ್ಪಲತಾ ಎನ್.ಕೆ. ರಾವ್