ಬೆಂಗಳೂರು: ಪೇದೆಯೊಬ್ಬರಿಗೆ ಡ್ರ್ಯಾಗರ್‌ನಿಂದ ಇರಿದು ಪರಾರಿಯಾಗುತ್ತಿದ್ದವನಿಗೆ ಶರಣಾಗತಿಯಾಗುವಂತೆ ಸೂಚಿಸಿದರೂ ಪುಂಡಾಟ ನಡೆಸಲು ಯತ್ನಿಸಿದ ರೌಡಿಶೀಟರ್‌ಗೆ ಪೊಲೀಸರು ಗುಂಡೇಟಿನ ಮೂಲಕ ಉತ್ತರ ನೀಡಿದ್ದಾರೆ. ಹಲಸೂರು ಠಾಣೆ ಇನ್ಸಪೆಕ್ಟರ್ ಸುಬ್ರಹ್ಮಣ್ಯ ಹಾರಿಸಿದ ಗುಂಡೇಟಿನಿಂದ ಗಾಯಗೊಂಡಿರುವ ರೌಡಿಶೀಟರ್ ಕಾರ್ತಿಕ್ ಇದೀಗ ಆಸ್ಪತ್ರೆ ಸೇರಿದ್ದಾನೆ.
ಹಲಸೂರು ಠಾಣೆ ಪೊಲೀಸರು ಶನಿವಾರ ರಾತ್ರಿ 2-40ರ ಸುಮಾರಿಗೆ ತಮ್ಮ ಠಾಣಾ ವ್ಯಾಪ್ತಿಯ ಕೇಂಬ್ರಿಡ್ಜ್ ಬಡಾವಣೆಯ ಡಿಎಡಿ ಕ್ವಾರ್ಟಸ್ ಬಳಿ ನಾಕಾಬಂದಿ ಮಾಡಿ ವಾಹನಗಳ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ದೊಮ್ಮಲೂರು ಮಾರ್ಗವಾಗಿ ಗೌತಮಪುರದ ನಿವಾಸಕ್ಕೆ ತೆರಳಲು ರೌಡಿಶೀಟರ್ ಕಾರ್ತಿಕ್ ಬೈಕ್‌ನಲ್ಲಿ ಆಗಮಿಸಿದ್ದಾನೆ. ಹೀಗಾಗಿ ಕಾರ್ತಿಕ್‌ನನ್ನು ಅಡ್ಡಗಟ್ಟಿ ತಪಾಸಣೆ ನಡೆಸಲು ಪೇದೆ ಬಸವರಾಜ್ ಖಣಿಜ ಮುಂದಾಗಿದ್ದಾರೆ.
ಇದರಿಂದ ಕುಪಿತಗೊಂಡ ರೌಡಿಶೀಟರ್ ಕಾರ್ತಿಕ್, ಏರು ಧ್ವನಿಯಲ್ಲಿ ನಾನು ರೌಡಿಶೀಟರ್ ನನ್ನ ಅಡ್ಡಹಾಕಿದರೇ,ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಅವಾಜ್ ಹಾಕಿದ್ದಾನೆ. ಇದರಿಂದ ಕೆರಳಿದ ಪೇದೆ ಬಸವರಾಜ್ ಕಾರ್ತಿಕ್ ಬೈಕ್ ಕೀ ಕಿತ್ತುಕೊಳ್ಳಲು ಮುಂದಾಗಿದ್ದಾರೆ. ಈ ಸಂಧರ್ಭದಲ್ಲಿ ತನ್ನ ಜೇಬಿನಲ್ಲಿದ್ದ ಡ್ರ್ಯಾಗರ್ ಹೊರತೆಗೆದು ಪೇದೆಗೆ ಇರಿಯಲು ಮುಂದಾಗಿದ್ದಾನೆ, ಇದರಿಂದ ತಪ್ಪಿಸಿಕೊಳ್ಳಲು ಕೈ ಅಡ್ಡ ಇಟ್ಟ ಪರಿಣಾಮ ಪೇದೆ ಬಸವರಾಜ್ ಕೈಗೆ ಡ್ರ್ಯಾಗರ್‌ನಿಂದ ಇರಿದು ಕಾರ್ತಿಕ್ ಪರಾರಿಯಾಗಿದ್ದಾನೆ.
ಆರೋಪಿ ಕಾರ್ತಿಕ್ ಪರಾರಿಯಾಗುತ್ತಿದ್ದಂತೆ ಪೇದೆ ಬಸವರಾಜ್ ವೈರ್‌ಲೈಸ್ ಮೂಲಕ ಠಾಣೆಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ ಹತ್ತಿರದ ಪ್ರದೇಶದಲ್ಲಿಯೇ ರಾತ್ರಿ ಗಸ್ತಿನಲ್ಲಿದ ಹಲಸೂರು ಠಾಣೆ ಇನ್ಸಪೆಕ್ಟರ್ ಸುಬ್ರಹ್ಮಣ್ಯ ನೇತೃತ್ವದ ತಂಡ, ಆರೋಪಿ ಕಾರ್ತಿಕ್ ಬಂಧನಕ್ಕೆ ಬೆನ್ನಟ್ಟಿದೆ. ಕೇವಲ 15 ನಿಮಿಷಗಳಲ್ಲಿಯೇ ಆರೋಪಿಯನ್ನು ಎಂಜಿರಸ್ತೆ ಸಮೀಪದ ಗುರುದ್ವಾರದ ಬಳಿ ರೌಂಡಪ್ ಮಾಡಿದ ಪೊಲೀಸರ ತಂಡ ಶರಣಾಗುವಂತೆ ಕಾರ್ತಿಕ್‌ಗೆ ಸೂಚಿಸಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.
ಆದರೆ ಶರಣಾಗತಿಗೆ ಒಪ್ಪದ ಕಾರ್ತಿಕ್, ಪೊಲೀಸರ ಮೇಲೆ ಪೆಪ್ಪರ್ ಸ್ಟ್ರೇ ಹಾಗೂ ಡ್ರ್ಯಾಗರ್ ಎಸೆದು ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ.ಹೀಗಾಗಿ ಪ್ರಾಣರಕ್ಷಣೆ ಅನಿವಾರ್ಯವಾಗಿ ಇನ್ಸಪೆಕ್ಟರ್ ಸುಬ್ರಹ್ಮಣ್ಯ,ತಮ್ಮ ಬಳಿಯಿದ್ದ ರಿವಾಲ್ವರ್‌ನಿಂದ ಕಾರ್ತಿಕ್ ಬಲಗಾಲಿಗೆ ಗುಂಡುಹಾರಿಸಿದ್ದಾರೆ. ಗುಂಡೇಟು ತಿಂದ ಕಾರ್ತಿಕ್ ಕೆಳಗೆಬಿದ್ದ ಕೂಡಲೇ ಪೊಲೀಸರು ಆತನನ್ನು ಬಂಧಿಸಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ರೌಡಿಶೀಟರ್ ಕಾರ್ತಿಕ್‌ನಿಂದ ಡ್ರ್ಯಾಗರ್‌ನಿಂದ ಇರಿತಕ್ಕೊಳಗಾಗಿರುವ ಪೇದೆ ಬಸವರಾಜ್‌ಗೆ ಹಾಸ್‌ಮ್ಯಾಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಗುಂಡೇಟು ತಿಂದಿರುವ ಕಾರ್ತಿಕ್‌ಗೂ ಚಿಕಿತ್ಸೆಗೆ ದಾಖಲಿಸಿದ್ದು, ಡಿಸಾcರ್ಜ್ ಆದ ಬಳಿಕ ಕರ್ತವ್ಯನಿರತ ಸಿಬ್ಬಂದಿ ಕೊಲೆಯತ್ನ ನಡೆಸಿದ ಆರೋಪ ಪ್ರಕರಣ ಸಂಬಂಧ ವಶಕ್ಕೆ ಪಡೆದುಕೊಳ್ಳಲಾಗುವುದು ಎಂದು ಅಧಿಕಾರಿ ತಿಳಿಸಿದರು.
ಅತ್ಯಾಚಾರ ಆರೋಪಿ ಕಾರ್ತಿಕ್!: ರೌಡಿಶೀಟರ್ ಕಾರ್ತಿಕ್ ನಗರದಲ್ಲಿ ಹಲವು ವರ್ಷಗಳಿಂದ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾನೆ. ಅತ್ಯಾಚಾರ, ಕೊಲೆಯತ್ನ, ಡಕಾಯಿತಿ ಸಂಬಂಧ ಕಲಾಸಿಪಾಳ್ಯ, ಹಲಸೂರು ಹಾಗೂ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದರು.