Advertisement

ಅಭಿವೃದ್ದಿಯಿಂದಲೇ “ಕೈ’ಮುಖಂಡರಿಗೆ ಉತ್ತರ

03:15 PM Dec 14, 2021 | Team Udayavani |

ಕವಿತಾಳ: ಮಾನ್ವಿ ತಾಲೂಕಿನಲ್ಲಿ ಸತತ ಆಡಳಿತ ನಡೆಸಿದ ಕಾಂಗ್ರೆಸ್‌ ಇಬ್ಬರು ಮಾಜಿ ಶಾಸಕರು ಕ್ಷೇತ್ರದ ಅಭಿವೃದ್ಧಿ ಬಗ್ಗೆ ತಮ್ಮನ್ನು ಪ್ರಶ್ನಿಸುತ್ತಿದ್ದಾರೆ. ಶಾಸಕನಾಗಿ ಮೂರೂವರೆ ವರ್ಷ ಕಳೆದಿದ್ದು, ಕೋವಿಡ್‌ ಹಿನ್ನೆಲೆ ಕೆಲವು ಅಭಿವೃದ್ಧಿ ಕೆಲಸಗಳಿಗೆ ಹಿನ್ನಡೆಯಾಗಿರಬಹುದು. ಮುಂದಿನ ಒಂದೂವರೆ ವರ್ಷದಲ್ಲಿ ಅಭಿವೃದ್ಧಿ ಕೆಲಸ ಕೈಗೊಂಡು ಕಾಂಗ್ರೆಸ್‌ ಮುಖಂಡರಿಗೆ ಸೂಕ್ತ ಉತ್ತರ ನೀಡುತ್ತೇನೆ ಎಂದು ಶಾಸಕ ರಾಜಾ ವೆಂಕಟಪ್ಪ ನಾಯಕ ಹೇಳಿದರು.

Advertisement

ಮುಂಡರಗಿಮಠ ಕಲ್ಯಾಣ ಮಂಟಪದಲ್ಲಿ ರವಿವಾರ ಏರ್ಪಡಿಸಿದ್ದ ಜೆಡಿಎಸ್‌ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇಲ್ಲಿನ ವಾರ್ಡ್‌ಗಳಲ್ಲಿ ಕಾಂಕ್ರೀಟ್‌ ರಸ್ತೆ, ಹೈ ಮಾಸ್ಟ್‌ ದೀಪ ಅಳವಡಿಕೆ ಮಾಡಲಾಗಿದೆ. ಅದೇ ರೀತಿ ಮುಖ್ಯರಸ್ತೆ ದುರಸ್ತಿ ಜೊತೆಗೆ ವಿಭಜಕ ಅಳವಡಿಕೆಗೆ ಮತ್ತು ಬಜಾರ್‌ ರಸ್ತೆ ದುರಸ್ತಿಗೆ ಮತ್ತು ತ್ರಯಂಭಕೇಶ್ವರ ದೇವಸ್ಥಾನಕ್ಕೆ 50 ಲಕ್ಷ ರೂ. ವೆಚ್ಚದಲ್ಲಿ ಯಾತ್ರಿ ನಿವಾಸ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡಲಾಗಿದೆ ಎಂದರು.

ಕಳೆದ ಬಾರಿ ತಾವು ಶಾಸಕರಾಗಿರದ ಸಂದರ್ಭದಲ್ಲಿ ನಡೆದ ಪಪಂ ಚುನಾವಣೆಯಲ್ಲಿ ತನು-ಮನದೊಂದಿಗೆ ಕಾರ್ಯರ್ತರ ಬೆಂಬಲಕ್ಕೆ ನಿಂತಿದ್ದೆ. ಈಗ ತನು-ಮನ-ಧನದೊಂದಿಗೆ ಕಾರ್ಯಕರ್ತರ ಗೆಲುವಿಗೆ ಶ್ರಮಿಸುತ್ತೇನೆ. ಹೀಗಾಗಿ 8 ರಿಂದ 10 ಸ್ಥಾನ ಗಳಿಸಿ ಪಕ್ಷ ಅಧಿಕಾರಕ್ಕೆ ಬರಬೇಕು. ಈ ನಿಟ್ಟಿನಲ್ಲಿ ಕಾರ್ಯಕರ್ತರು ಧೈರ್ಯವಾಗಿ ಚುನಾವಣೆ ಎದುರಿಸಿ ಎಂದರು.

ಪಕ್ಷದ ರಾಜ್ಯ ಉಪಾಧ್ಯಕ್ಷ ಮಹಾಂತೇಶ ಪಾಟೀಲ್‌ ಅತ್ನೂರು ಮಾತನಾಡಿ, ಜೆಡಿಎಸ್‌ ಎಂದರೆ ಲೀಡರ್‌ಗಳನ್ನು ತಯಾರಿಸುವ ಕಾರ್ಖಾನೆ ಇದ್ದಂತೆ. ಮಾಜಿ ಸಿಎಂ ಸಿದ್ದರಾಮಯ್ಯ, ಜೆ.ಎಚ್‌. ಪಟೇಲ್‌ ಮತ್ತು ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ಜೆಡಿಎಸ್‌ ಪಕ್ಷದವರೇ. ಹೀಗಾಗಿ ಸ್ಥಳೀಯ ಮಟ್ಟದಲ್ಲಿ ಪಕ್ಷ ಬಿಟ್ಟವರ ಬಗ್ಗೆ ಯೋಚಿಸದೇ ನೀವುಗಳೇ ಲೀಡರ್‌ ಆಗಬೇಕು. ಪಕ್ಷ ಬಲಪಡಿಸುವ ಕಾರ್ಯಕರ್ತರೇ ಲೀಡರ್‌ಗಳು ಎಂದರು.

Advertisement

ಮುಖಂಡ ಎನ್‌. ಶಿವಶಂಕರ್‌ ವಕೀಲ ಮತ್ತು ಪಕ್ಷದ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್‌ ಮಾತನಾಡಿದರು. ಈ ವೇಳೆ ಮುಖಂಡರಾದ ರಾಜಾ ರಾಮಚಂದ್ರ ನಾಯಕ, ಜಂಬುನಾಥ ಯಾದವ, ಮಾನಪ್ಪ ವಿಶ್ವಕರ್ಮ, ಮಹ್ಮದ್‌ ಇಸ್ಮಾಯಿಲ್‌, ಸಿಲಾರ್‌ಸಾಬ್‌, ಹನುಮಂತಪ್ಪ, ರವಿ, ಖಾಜಾಪಾಶಾ, ರುಕ್ಮುದ್ದೀನ್‌ ಇದ್ದರು. ಪಕ್ಷಕ್ಕೆ ಸೇರ್ಪಡೆಯಾದ ಯುವಕರನ್ನು ಪಕ್ಷದ ಧ್ವಜ ನೀಡಿ ಶಾಸಕರು ಮತ್ತು ಮುಖಂಡರು ಬರಮಾಡಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next