Advertisement

ಸದನ ಸಮಿತಿ ರಚನೆಗೆ ಸರ್ಕಾರ ಘೋಷಣೆ

03:45 AM Feb 15, 2017 | Team Udayavani |

ವಿಧಾನ ಪರಿಷತ್‌: ಪ್ರತಿಪಕ್ಷ ಬಿಜೆಪಿ ಹಾಗೂ ಜೆಡಿಎಸ್‌ ಸದಸ್ಯರ ಆಗ್ರಹಕ್ಕೆ ಸ್ಪಂದಿಸಿದ ಸಿಎಂ ಸಿದ್ದರಾಮಯ್ಯ, ಕರ್ನಾಟಕ ಶಿಕ್ಷಣ ಕಾಯ್ದೆ ತಿದ್ದುಪಡಿ ವಿಧೇಯಕವನ್ನು ಸದನದ ಪರಿಶೀಲನಾ ಸಮಿತಿಗೆ ವಹಿಸಲು ಒಪ್ಪಿದರು.

Advertisement

ವಿಧಾನಸಭೆಯಲ್ಲಿ ಅಂಗೀಕಾರವಾದ ಕರ್ನಾಟಕ ಶಿಕ್ಷಣ ಕಾಯ್ದೆ ತಿದ್ದುಪಡಿ ವಿಧೇಯಕವನ್ನು ಸಚಿವ ತನ್ವೀರ್‌ ಸೇಠ್ ಮಂಗಳವಾರ ಮಂಡಿಸಿದಾಗ ಬಿಜೆಪಿ, ಜೆಡಿಎಸ್‌ ಸದಸ್ಯರಿಂದ ತೀವ್ರ ಆಕ್ರೋಶ ವ್ಯಕ್ತವಾಯಿತು. ಕಾಯ್ದೆಯಲ್ಲಿನ ಹಲವು
ಅಂಶಗಳು ಶಿಕ್ಷಕರನ್ನೇ ಅಪರಾಧಿ ಸ್ಥಾನದಲ್ಲಿರಿಸುವಂತಿವೆ. ಹಾಗೆಯೇ ಶಿಕ್ಷಕರ ಸಂಘ, ಸಂಸ್ಥೆಗಳ ಪದಾಧಿಕಾರಿಗಳ ಮೇಲೆ ಸವಾರಿ ಮಾಡಲು ಪೂರಕವಾದಂತಹ ಅಂಶಗಳಿದ್ದು, ಶಿಕ್ಷಕ ವರ್ಗಕ್ಕೆ ಕಳಂಕ ತರುವಂತಿವೆ. ಹಾಗೆಯೇ ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೆಯೂ ನಿಯಂತ್ರಣ ಹೇರುವ ದುರುದ್ದೇಶದಿಂದ ಕೂಡಿದ್ದು, ಕೂಡಲೇ ವಾಪಸ್‌ ಪಡೆಯಬೇಕೆಂದು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ತನ್ವೀರ್‌ ಸೇಠ್, “ಈ ಹಿಂದಿನ ಕಾಯ್ದೆಗೆ ಕೆಲ ತಿದ್ದುಪಡಿ ತರಲಾಗಿದೆ. ಶಿಕ್ಷೆ ಹಾಗೂ ದಂಡ ವಿಧಿಸುವುದು ಮೊದಲಿನಿಂದಲೂ ಇದ್ದು, ಪ್ರಮಾಣವನ್ನು ಹೆಚ್ಚಳ ಮಾಡಲಾಗಿದೆಯೇ ಹೊರತು ಹೊಸ
ಅಂಶಗಳನ್ನು ಸೇರಿಸಿಲ್ಲ. ಹಾಗಾಗಿ ವಿಧೇಯಕಕ್ಕೆ ಅನುಮೋದನೆ ನೀಡಬೇಕೆಂದು ಮನವಿ ಮಾಡಿದರು. ಇದಕ್ಕೆ ಸಮಾಧಾನಗೊಳ್ಳದ ಬಿಜೆಪಿ, ಜೆಡಿಎಸ್‌ ಸದಸ್ಯರು ವಿಧೇಯಕ ವಾಪಸಾತಿಗೆ ಒತ್ತಾಯಿಸಿ ಧರಣಿ ಆರಂಭಿಸಿದರು. ಆ ಹೊತ್ತಿಗೆ ಸದನದಲ್ಲಿದ್ದ ಸಿಎಂ ಸಿದ್ದರಾಮಯ್ಯ, “ಶಿಕ್ಷಕರು ಹಾಗೂ ಶಿಕ್ಷಕರ ಸಂಘ-ಸಂಸ್ಥೆಗಳ ಬಗ್ಗೆ ಸರ್ಕಾರಕ್ಕೆ ಅಪಾರ
ಗೌರವವಿದೆ. ಕಾಯ್ದೆ ತಿದ್ದುಪಡಿ ವಿಧೇಯಕದ ಹಿಂದೆ ಯಾವುದೇ ದುರುದ್ದೇಶವಿಲ್ಲ.

ಹಾಗಿದ್ದರೂ ಪ್ರತಿಪಕ್ಷಗಳ ಸದಸ್ಯರ ಒತ್ತಾಯದ ಹಿನ್ನೆಲೆಯಲ್ಲಿ ತಿಂಗಳೊಳಗೆ ವರದಿ ಸಲ್ಲಿಸಬೇಕೆಂಬ ಷರತ್ತಿನೊಂದಿಗೆ ತಿದ್ದುಪಡಿ ವಿಧೇಯಕದ ಬಗ್ಗೆ ಪರಿಶೀಲಿಸಲು ಸದನದ ಪರಿಶೀಲನಾ ಸಮಿತಿಗೆ ವಹಿಸಲಾಗುವುದು ಎಂದು ಪ್ರಕಟಿಸಿದರು. ಬಳಿಕ ಸಭಾಪತಿ ಡಿ.ಎಚ್‌.ಶಂಕರಮೂರ್ತಿ, “ಸದ್ಯದಲ್ಲೇ ಸಭಾನಾಯಕರು, ವಿಪಕ್ಷಗಳ ನಾಯಕರಿಂದ ಪಟ್ಟಿ ಪಡೆದು ಸದನ ಸಮಿತಿ ರಚಿಸಲಾಗುವುದು’ ಎಂದು ಹೇಳುವ ಮೂಲಕ ಚರ್ಚೆಗೆ ತೆರೆ ಎಳೆದರು.

Advertisement

Udayavani is now on Telegram. Click here to join our channel and stay updated with the latest news.

Next