Advertisement

Finance Commission Conferenceರಾಜ್ಯಗಳಿಗೆ ನಷ್ಟ ಪರಿಹರಿಸುವ ಪದ್ಧತಿ ಇಲ್ಲ: ಹಣಕಾಸು ಆಯೋಗ

12:09 AM Aug 30, 2024 | Team Udayavani |

ಬೆಂಗಳೂರು: “ಹಿಂದಿನ ಹಣಕಾಸು ಆಯೋಗದ ಕ್ರಮದಿಂದ ರಾಜ್ಯಗಳಿಗೆ ಆದ ನಷ್ಟವನ್ನು ಮುಂದೆ ಬರುವ ಆಯೋಗ ಪರಿಹರಿಸುವ ಪದ್ಧತಿ ಇಲ್ಲ’ ಎಂದು 16ನೇ ಹಣಕಾಸು ಆಯೋಗದ ಅಧ್ಯಕ್ಷ ಡಾ| ಅರವಿಂದ ಪನಗಾರಿಯಾ ಅಭಿಪ್ರಾಯಪಟ್ಟಿದ್ದಾರೆ.

Advertisement

ಈ ಮೂಲಕ 15ನೇ ಹಣಕಾಸು ಆಯೋಗದ ಶಿಫಾರಸಿನಿಂದ ಆದ ನಷ್ಟವನ್ನು ಭರ್ತಿ ಮಾಡಿಕೊಡಬೇಕೆಂಬ ರಾಜ್ಯ ಸರಕಾರದ ವಾದವನ್ನು ಆಯೋಗ ಒಪ್ಪಲು ಸಾಧ್ಯವಿಲ್ಲ ಎಂಬ ಪರೋಕ್ಷ ಸಂದೇಶವನ್ನು ಕರ್ನಾಟಕ ಸರಕಾರಕ್ಕೆ ರವಾನೆ ಮಾಡಿದ್ದಾರೆ.

ರಾಜ್ಯದ ನಿಯೋಗದ ಜತೆಗೆ ಸುದೀರ್ಘ‌ ಚರ್ಚೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 15ನೇ ಹಣಕಾಸು ಆಯೋಗದಿಂದ ರಾಜ್ಯಕ್ಕೆ ಆದ ನಷ್ಟವನ್ನು ಈ ಬಾರಿ ಸರಿದೂಗಿಸಲಾಗುತ್ತದೆಯೇ? ಎಂಬ ಪ್ರಶ್ನೆಗೆ ಈ ರೀತಿ ಉತ್ತರ ನೀಡಿದರು.

ಸೆಸ್‌ ಹಾಗೂ ಸರ್ಚಾರ್ಜ್‌ ವಿಚಾರದಲ್ಲಿ ಕೇಂದ್ರದ ನಿಲುವು ಬದಲಾಗಬೇಕು. ಇದರಲ್ಲೂ ರಾಜ್ಯಕ್ಕೆ ಪಾಲು ಹಂಚಿಕೆ ಮಾಡಬೇಕೆಂಬ ರಾಜ್ಯ ಸರಕಾರದ ಪ್ರಸ್ತಾವನೆಯ ಬಗ್ಗೆ ಪ್ರತಿಕ್ರಿಯಿಸಿ, ಇಂಥದ್ದೊಂದು ಚರ್ಚೆ ಇದೆ. ಆದರೆ ಇದರ ಬಗ್ಗೆ ಈಗಲೇ ಸ್ಪಷ್ಟ ಅಭಿಪ್ರಾಯ ನೀಡುವುದು ಕಷ್ಟ. ಏಕೆಂದರೆ ಈ ಬಗ್ಗೆ ಸಂವಿಧಾನದ ತಿದ್ದುಪಡಿ ಮಾಡಬೇಕಾಗುತ್ತದೆ. ಆಯೋಗ ಈ ಹಂತದಲ್ಲಿ ಇದಕ್ಕೆ ಉತ್ತರಿಸುವುದಕ್ಕೆ ಸಾಧ್ಯವಿಲ್ಲ. ಆದರೆ ಸೆಸ್‌ ಹಾಗೂ ಸರ್ಚಾರ್ಜ್‌ ವಿಧಿಸುವ ಅಧಿಕಾರವನ್ನು ಒಕ್ಕೂಟ ವ್ಯವಸ್ಥೆಯಲ್ಲಿ ಸಂವಿಧಾನ ಕೇಂದ್ರಕ್ಕೆ ನಿರ್ದಿಷ್ಟವಾಗಿ ನೀಡಿದೆ. ಯುದ್ಧ ಹಾಗೂ ಇನ್ನಿತರ ವಿಕೋಪವನ್ನು ದೇಶ ಎದುರಿಸಿದಾಗ ಕೇಂದ್ರ ಆರ್ಥಿಕವಾಗಿ ಸಂಕಷ್ಟ ಎದುರಿಸದೇ ಇರಲಿ ಎಂಬ ಕಾರಣಕ್ಕೆ ಈ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

15ನೇ ಹಣಕಾಸು ಆಯೋಗ ರಾಜ್ಯ ಸರಕಾರಕ್ಕೆ ಜಿಎಸ್‌ಟಿ ನಷ್ಟ ಪರಿಹಾರದ ಭರವಸೆ ಈಡೇರಿಸಿಲ್ಲ ಎಂಬ ಪ್ರಶ್ನೆಗೆ ಸ್ಪಷ್ಟಪಡಿಸಿದ ಅವರು, ಆಯೋಗದ ಅಂತಿಮ ವರದಿಯಲ್ಲಿ ಇಂಥ ಯಾವುದೇ ಶಿಫಾರಸುಗಳು ಇರಲಿಲ್ಲ. ಹೀಗಾಗಿ ಆಯೋಗದ ವರದಿಯನ್ನು ಕೇಂದ್ರ ಪಾಲನೆ ಮಾಡುತ್ತಿಲ್ಲ ಎಂದು ವಾದಿಸಲು ಸಾಧ್ಯವಿಲ್ಲ. ಆಯೋಗ ನಷ್ಟ ಪರಿಹಾರದ ಬಗ್ಗೆ ಪ್ರಸ್ತಾವಿಸಿದ್ದರೆ ಕೇಂದ್ರ ನೀಡುತ್ತಿತ್ತು ಎಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.