Advertisement

ಬಜೆಟ್‌ನಲ್ಲಿ ಹೆಚ್ಚುವರಿ “ಭಾಗ್ಯ’ಗಳ ಘೋಷಣೆ ಅನಿವಾರ್ಯ

06:15 AM Jan 04, 2018 | Team Udayavani |

ಬೆಂಗಳೂರು:ಚುನಾವಣಾ ಬಜೆಟ್‌ ಎಂದೇ ಬಿಂಬಿತವಾಗಿರುವ 2018-19 ನೇ ಸಾಲಿನ ಬಜೆಟ್‌ನಲ್ಲಿ  “ಭಾಗ್ಯ’ಗಳ ಘೋಷಣೆಯಾಗಬಹುದೇ?

Advertisement

ಪ್ರಸಕ್ತ ಆರ್ಥಿಕ ವಷಾಂತ್ಯಕ್ಕೆ ರಾಜ್ಯ ಸರ್ಕಾರದ ಸಾಲವೂ 2.42 ಲಕ್ಷ ಕೋಟಿ ರೂ.ಮುಟ್ಟುವುದರಿಂದ ಸಾಲದ ಮೇಲೆ ಮತ್ತಷ್ಟು ಅವಲಂಬಿತವಾಗಲು ಸಾಧ್ಯವಿಲ್ಲ. ಹೀಗಾಗಿ, ಲಭ್ಯವಿರುವ ಸಂಪನ್ಮೂಲದಲ್ಲೇ ಯೋಜನೆಗಳನ್ನೂ ರೂಪಿಸಬೇಕಿದೆ. ಈ ಬಾರಿಯ ಬಜೆಟ್‌ನಲ್ಲಿ ಹೊಸ ಘೋಷಣೆಗಿಂತ ಈಗಾಗಲೇ ಜಾರಿಗೆ ತಂದಿರುವ ಯೋಜನೆಗಳಿಗೆ ಹಣಕಾಸು ಹೊಂದಿಸುವುದೇ ಸವಾಲಾಗಿ ಪರಿಣಮಿಸಿದೆ.

2018-19 ನೇ ಸಾಲಿನ ಬಜೆಟ್‌ನಲ್ಲಿ ಆರನೇ ವೇತನ ಆಯೋಗದ ಶಿಫಾರಸು ಅನ್ವಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗಾಗಿ 10 ಸಾವಿರ ಕೋಟಿ ರೂ. ಹಾಗೂ ರೈತರ ಸಾಲ ಮನ್ನಾ ಬಾಬಿ¤ನಡಿ 5166 ಕೋಟಿ ರೂ. ಹೊಂದಿಸಬೇಕಿದ್ದು ಹಣಕಾಸಿನ ಲಭ್ಯತೆ ನೋಡಿಕೊಳ್ಳದೆ ಯೋಜನೆ ಘೋಷಿಸಿದರೆ ಹಣ ಒದಗಿಸುವುದು ಕಷ್ಟ ಎಂಬ ಪರಿಸ್ಥಿತಿ ಇದೆಯಾದರೂ, ಚುನಾವಣೆ ವರ್ಷವಾದ್ದರಿಂದ ಹೊಸ “ಭಾಗ್ಯ’ ಘೊಷಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸಿದ್ಧತೆ ಮಾಡಿಕೊಂಡಿದ್ದಾರೆ.

ತಮ್ಮ ನೇತೃತ್ವದ ಸರ್ಕಾರದ ಕೊನೆಯ ಬಜೆಟ್‌ ಇದಾಗಿರುವುದರಿಂದ ಅಹಿಂದಾ ವರ್ಗದ ಓಲೈಕೆ ಜತೆಗೆ ಇತರೆ ಸಮುದಾಯದ ಸೆಳೆಯಲು ಜನಪ್ರಿಯ ಕಾರ್ಯಕ್ರಮ ಬಜೆಟ್‌ನಲ್ಲಿ ಪ್ರಕಟಿಸಲು ಚಿಂತನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಪ್ರಮುಖವಾಗಿ ಬಡವರು ಅದರಲ್ಲೂ ಮಹಿಳೆಯರು, ಹಿರಿಯ ನಾಗರಿಕರು,  ವಿದ್ಯಾರ್ಥಿಗಳು, ಕಾರ್ಮಿಕರು, ಅಂಗನವಾಡಿ ಕಾರ್ಯಕರ್ತೆಯರು, ಆಟೋ ಚಾಲಕರು, ಗಾರ್ಮೆಂಟ್ಸ್‌ ನೌಕರ ವರ್ಗಕ್ಕೆ ಹೊಸ ಕಾರ್ಯಕ್ರಮ ನೀಡುವ ಸಾಧ್ಯತೆಯಿದೆ.
ಎಸ್‌ಸಿಪಿ-ಟಿಎಸ್‌ಪಿ ಯೋಜನೆಯಡಿ  ಉಳಿಕೆ ಸೇರಿ ಸುಮಾರು 50 ಸಾವಿರ ಕೋಟಿ ರೂ.ವರೆಗೆ ಲಭ್ಯವಾಗುವುದರಿಂದ ಆ ಮೊತ್ತಕ್ಕೆ ವಿಶೇಷ ಯೋಜನೆ ರೂಪಿಸಲು  ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಲಾಗಿದೆ.

ಸಂಪನ್ಮೂಲ ಕ್ರೋಡೀಕರಣದ ವ್ಯಾಪ್ತಿಯಲ್ಲೇ ಲಭ್ಯವಾಗುವ ಹಣಕಾಸಿನಲ್ಲಿ ದೊಡ್ಡ ದೊಡ್ಡ ಯೋಜನೆ ಕೈ ಬಿಟ್ಟು ಬಡ ವರ್ಗಕ್ಕೆ ಅನುಕೂಲವಾಗುವ ಕಾರ್ಯಕ್ರಮಗಳತ್ತ  ಈ ಬಾರಿ ಗಮನ ಹರಿಸಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ. ಏಕೆಂದರೆ,ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ಬೇಕಾದ ಹತ್ತು ಸಾವಿರ ಕೋಟಿ ರೂ.ಮೊತ್ತ ಹೊಂದಾಣಿಕೆ,  ರೈತರ ಸಾಲ ಮನ್ನಾ ಘೋಷಣೆ ಸಂಪೂರ್ಣ ಜಾರಿ, ಕ್ಷೀರಧಾರೆ ಯೋಜನೆಯಡಿ ರೈತರಿಗೆ ಹಾಲಿನ ಪ್ರೋತ್ಸಾಹ ಧನ ಬಾಕಿ ಬಿಡುಗಡೆ ಜತೆಗೆ ಅನ್ನಭಾಗ್ಯ, ಕ್ಷೀರಭಾಗ್ಯ,ಇಂದಿರಾ ಕ್ಯಾಂಟೀನ್‌, ಅನಿಲ ಭಾಗ್ಯ ಯೋಜನೆಗೆ ಹಣ ಒದಗಿಸಬೇಕಿದೆ. ಆದರೂ ಬಜೆಟ್‌ನಲ್ಲಿ ಕೆಲವೊಂದು ಹೊಸ ಯೋಜನೆಗಳ ಘೋಷಣೆ ಅನಿವಾರ್ಯ. ಆ ನಿಟ್ಟಿನಲ್ಲಿ ಹಣಕಾಸು ಲಭ್ಯತೆಯ ಹೊಂದಾಣಿಕೆ ನೋಡಿಕೊಂಡು ಕ್ರಮ ಕೈಗೊಳ್ಳಬೇಕಿದೆ ಎಂದು ಹಣಕಾಸು ಇಲಾಖೆ ಅಧಿಕಾರಿಯೊಬ್ಬರು ಹೇಳುತ್ತಾರೆ.

Advertisement

10 ಸಾವಿರ ಕೋಟಿ ರೂ.
ಆರನೇ ವೇತನ ಆಯೋಗದ ಶಿಫಾರಸು ಅನುಷ್ಠಾನಕ್ಕೆ 10 ಸಾವಿರ ಕೋಟಿ ರೂ.ಅಗತ್ಯವಿದೆ. ಕೇಂದ್ರ ಸರ್ಕಾರದ ನೌಕರರಿಗೆ ನೀಡುತ್ತಿರುವ ವೇತನ ಮತ್ತು ಭತ್ಯೆ ರಾಜ್ಯ ಸರ್ಕಾರಿ ನೌಕರರಿಗೂ ಅನ್ವಯವಾಗಬೇಕು ಎಂದು ಆ ಪ್ರಕಾರ ಡಿ ಗ್ರೂಪ್‌ ನೌಕರನಿಗೆ ಶೇ.44 ರಷ್ಟು, ಪ್ರಥಮ ದರ್ಜೆ ಗುಮಾಸ್ತ ಹಾಗೂ ಮೇಲ್ಪಟ್ಟ ಅಧಿಕಾರಿಗೆ ಶೇ.119 ರಷ್ಟು ವೇತನ ಹೆಚ್ಚಳಕ್ಕೆ ಪಟ್ಟು ಹಿಡಿದಿದೆ. ರಾಜ್ಯ ಸರ್ಕಾರ ಶಿಫಾರಸು ಆಧರಿಸಿ ಒಟ್ಟಾರೆ ಶೇ.25 ರಿಂದ 30 ರಷ್ಟು ಹೆಚ್ಚಳದ ಚಿಂತನೆಯಲ್ಲಿದೆ. ಹೀಗಾದರೂ 10 ಸಾವಿರ ಕೋಟಿ ರೂ. ಬೇಕಾಗುತ್ತದೆ. ಅದೇ ರೀತಿ 50 ಸಾವಿರ ರೂ. ರೈತರ ಸಾಲ ಮನ್ನಾದಿಂದ ಸರ್ಕಾರಕ್ಕೆ 8165 ಕೋಟಿ ರೂ. ಹೊರೆಯಾಗಿದ್ದು, 2017-18 ನೇ ಬಜೆಟ್‌ನಲ್ಲಿ ಸಾಲ ಮನ್ನಾಗೆ ಹಣ ಹೊಂದಿಸಿರಲಿಲ್ಲ. ಪೂರಕ ಅಂದಾಜುಗಳಲ್ಲಿ 2888 ಕೋಟಿ ರೂ. ಮೀಸಲಿಡಲಾಗಿದೆಯಾದರೂ ಇನ್ನೂ 5166 ಕೋಟಿ ರೂ. ಮುಂದಿನ ಬಜೆಟ್‌ನಲ್ಲಿ ಹೊಂದಿಸಬೇಕಿದೆ.

ಎರಡೂ ಬಾಬ್ತುಗಳ ಜತೆಗೆ ರಾಜ್ಯಾದ್ಯಂತ ಇಂದಿರಾ ಕ್ಯಾಂಟೀನ್‌ ಹಾಗೂ ಅನಿಲ ಭಾಗ್ಯ ಯೋಜನೆ ಜಾರಿ ಸೇರಿ ಇತರೆ ಸಬ್ಸಿಡಿಗಾಗಿ 3500 ಕೋಟಿ ರೂ.ವರೆಗೆ ವೆಚ್ಚ ಮಾಡಬೇಕಿದೆ. ಒಟ್ಟಾರೆ 20 ಸಾವಿರ ಕೋಟಿ ರೂ. ಹೊರೆ ಸರ್ಕಾರದ ಮೆಲೆ ಬೀಳಲಿದೆ.

– ಎಸ್‌.ಲಕ್ಷ್ಮಿನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next