ಗದಗ: ಜಿಲ್ಲೆಯ ಬಡ ಹಾಗೂ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಬಿ.ಜಿ. ಅಣ್ಣಿಗೇರಿ ಗುರುಗಳು ಜ್ಞಾನದ ಅಕ್ಷಯ ಪಾತ್ರೆಯಾಗಿದ್ದರು. ಎಲ್ಲೂ ಸಲ್ಲದವರು ಇಲ್ಲಿ ಸಲ್ಲುತ್ತಾರೆ ಎಂಬಂತೆ ಏನೂ ಬರದಿದ್ದವರೂ ಗುರುಗಳ ಆಶ್ರಮಕ್ಕೆ ಸೇರಿದ ಬಳಿಕ ಜ್ಞಾನವಂತರಾಗುತ್ತಿದ್ದರು. ಎಸ್‌ಎಸ್‌ಎಲ್ಸಿಯಲ್ಲಿ ಅನುತ್ತೀರ್ಣನಾಗಿ ಆಶ್ರಮದಲ್ಲಿ ಅಕ್ಷರ ಜ್ಞಾನ ಪಡೆದಿದ್ದ ಬಾಲಕನೊಬ್ಬ ಈಗ ಪ್ರಾಥಮಿಕ ಶಾಲೆಯೊಂದರ ಮುಖ್ಯಗುರು. ಇಂತಹ ಉದಾಹರಣೆ ಅನೇಕ.
ಬಿ.ಜಿ. ಅಣ್ಣಿಗೇರಿ ಗುರುಗಳ ಬಳಿ ಕಲಿತ ಅನೇಕರು ದೇಶ-ವಿದೇಶಗಳಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಅವರಲ್ಲಿ ಲಕ್ಕುಂಡಿ ನಿವಾಸಿಯಾಗಿದ್ದ ಹಾಗೂ ಸದ್ಯ ತೋಂಟದಾರ್ಯ ವಿದ್ಯಾಪೀಠದ ತೋಂಟದಾರ್ಯ ಪ್ರಾಥಮಿಕ ಶಾಲೆಯ ಮುಖ್ಯಗುರು ಕೊಟ್ರೇಶ ಮೆಣಸಿನಕಾಯಿ ಉತ್ತಮ ಉದಾಹರಣೆ.
ಹೌದು. 1996-97ನೇ ಸಾಲಿನಲ್ಲಿ ಎಸ್‌ಎಸ್‌ಎಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಕೊಟ್ರೇಶ್ ಮೆಣಸಿನಕಾಯಿ ಅನ್ನುತ್ತೀರ್ಣರಾಗಿದ್ದರು. ಹೀಗಾಗಿ ಮನೆಯವರ ಒತ್ತಡಕ್ಕೆ ದನಗಳನ್ನು ಮೇಯಿಸಲು ತೆರಳುತ್ತಿದ್ದರು. ಈ ನಡುವೆ ಅಣ್ಣಿಗೇರಿ ಗುರುಗಳ ಸಂಪರ್ಕಕ್ಕೆ ಬಂದ್ದ ಕೊಟ್ರೇಶ್ ಅವರನ್ನು ಕ್ಲಾಸ್‌ಗೆ ಬರುವಂತೆ ಗುರುಗಳು ಸೂಚಿಸಿದರು.
ಆದರೆ, ಅದಾಗಲೇ 10ನೇ ತಗರತಿ ಅನುತ್ತೀರ್ಣರಾಗಿದ್ದರಿಂದ ಮನೆ ಕೆಲಸಗಳು ಹೆಗಲೇರಿದ್ದವು. ಬೆಳಗ್ಗೆ 8ರಿಂದ 10 ಗಂಟೆ ವರೆಗಿನ ಟ್ಯೂಷನ್‌ಗೆ ಬರಲು ಸಾಧ್ಯವಾಗುತ್ತಿರಲಿಲ್ಲ. ಇದನ್ನು ಮನಗಂಡಿದ್ದ ಅಣ್ಣಿಗೇರಿ ಗುರುಗಳು 11ರಿಂದ ಕ್ಲಾಸಿಗೆ ವಿಶೇಷ ತರಗತಿ ತೆಗೆದುಕೊಳ್ಳುತ್ತೇನೆ. ಕಡ್ಡಾಯವಾಗಿ ಬರುವಂತೆ ಸೂಚಿಸಿದರು. ಗುರುಗಳ ಪ್ರೀತಿ ಭರಿತ ಆದೇಶವನ್ನು ತಿರಸ್ಕರಿಸಲಾಗದೇ ಕೊಟ್ರೇಶ ಮನೆ ಪಾಠಕ್ಕೆ ಬರುತ್ತಿದ್ದರು.
ಈ ಸಮಯದಲ್ಲಿ ಇವರೊಬ್ಬರೇ ವಿದ್ಯಾರ್ಥಿ. ಆದರೂ ಬೇಸರಿಸಿಕೊಳ್ಳದೇ ಪಾಠ ಮಾಡುತ್ತಿದ್ದರು. ನಂತರದ ದಿನಗಳಲ್ಲಿ ಫೇಲಾದ 15 ವಿದ್ಯಾರ್ಥಿಗಳು ಇದೇ ತರಗತಿಗೆ ಬರಲಾರಂಭಿಸಿದರು. ಸುಮಾರು 6 ತಿಂಗಳಲ್ಲಿ ಎಲ್ಲ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸುವಷ್ಟು ಸಮರ್ಥರಾದರು. ಬಳಿಕ ನಡೆದ ಎಸ್‌ಎಸ್‌ಎಲ್ಸಿ ಪೂರಕ ಪರೀಕ್ಷೆಯಲ್ಲಿ ಎಲ್ಲ ವಿದ್ಯಾರ್ಥಿಗಳು ತೇರ್ಗಡೆಯಾದರು. ನಾನಾ ಕಾಲೇಜುಗಳಲ್ಲಿ ಪ್ರವೇಶ ಪಡೆದು, ಈಗ ನಾನಾ ಹುದ್ದೆ, ವ್ಯಾಪಾರಗಳಲ್ಲಿ ತೊಡಗಿಕೊಂಡಿದ್ದಾರೆ ಎಂದು ಭಾವುಕರಾಗುತ್ತಾರೆ ಹಳೇ ವಿದ್ಯಾರ್ಥಿ ಕೊಟ್ರೇಶ ಮೆಣಸಿನಕಾಯಿ.
•ವಿಶೇಷ ವರದಿ