ಅರಂತೋಡು: ತೊಡಿಕಾನ ಗ್ರಾಮದ ಶಾಲಾ ಬಳಿಯ ಅಂಗನವಾಡಿ ಕಟ್ಟಡ ಕಾಮಗಾರಿ ಹಲವು ವರ್ಷಗಳ ಬಳಿಕ ಪೂರ್ಣಗೊಂಡಿದೆ. ಒಂದು ವಾರದಲ್ಲಿ ಇಲಾಖೆಗೆ ಹಸ್ತಾಂತರ ನಡೆಯಲಿದೆ.
2015ನೇ ಇಸವಿಯ ಜನವರಿ ತಿಂಗಳಿನಲ್ಲಿ ನೂತನ ಅಂಗವಾಡಿ ಕಟ್ಟಡಕ್ಕೆ ಹಳೆಯ ಅಂಗವಾಡಿ ಕಟ್ಟಡದ ಪಕ್ಕದಲ್ಲಿಯೇ ಗುದ್ದಲಿ ಪೂಜೆ ನೆರವೇರಿಸಿ 4.18 ಲಕ್ಷ ರೂ. ಇಲಾಖೆ ಅನುದಾನದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಬಳಿಕ 4 ವರ್ಷಗಳಿಂದ ಅನುದಾನದ ಕೊರತೆಯಿಂದ ಕಾಮಗಾರಿ ಸ್ಥಗಿತಗೊಂಡಿತ್ತು.
ಸ್ಲಾಬ್ ಕೆಲಸ ಪೂರ್ಣಗೊಂಡು ಗೋಡೆಯ ಗಾರೆ ಕೆಲಸವನ್ನು ಮುಗಿಸಲಾಗಿತ್ತು. ಶೌಚಾಲಯದ ಕೆಲಸ, ಅಡುಗೆ ಕೊಠಡಿಯ ಕೆಲಸ, ಕಿಟಕಿ, ಬಾಗಿಲು, ಆರ್‌ಸಿಸಿ ಮೇಲಾºಗ ಬದಿಗಳನ್ನು ಕಟ್ಟಿ ನೀರು ಹೋಗಲು ಪೈಪ್‌ನ ವ್ಯವಸ್ಥೆ ಮಾಡದಿರುವುದರಿಂದ ಮಳೆ ಬರುವಾಗ ನೀರು ಒಳಗೆ ಬೀಳುತ್ತಿತ್ತು. ಒಳಗೆ ಟೈಲ್ಸ್ ಹಾಕಲು ಬಾಕಿ ಉಳಿದಿತ್ತು.
ಇದೀಗ ಅಂಗವಾಡಿ ಕಟ್ಟಡದ ವಿದ್ಯುತ್ ಸಂಪರ್ಕ ಹೊರತುಪಡಿಸಿ ಉಳಿದಂತೆ ಎಲ್ಲ ಕೆಲಸಗಳು ಪೂರ್ಣಗೊಂಡಿದೆ. ಬಣ್ಣ ಬಳಿಯಲಾಗಿದೆ. ತೊಡಿಕಾನ ಅಂಗವಾಡಿಯ ಹಳೆಯ ಕಟ್ಟಡ ಶಿಥಿಲಗೊಂಡಿದ್ದು, ಅದರಲ್ಲಿಯೇ ಅಂಗವಾಡಿ ಮಕ್ಕಳು ಕಾಲ ಕಳೆಯುವಂತಾಗಿದೆ. ಅಂಗವಾಡಿಗೆ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಪಕ್ಕದ ಪ್ರಾಥಮಿಕ ಶಾಲೆಯ ನೀರನ್ನು ಅಂಗನವಾಡಿಗೆ ಉಪಯೋಗಿಸಿಕೊಳ್ಳಲಾಗುತ್ತಿದೆ. ಪ್ರಾಥಮಿಕ ಶಾಲೆಗೆ ಪ್ರತಿ ತಿಂಗಳು ಬರುವ ವಿದ್ಯುತ್‌ನ ಮೂರನೇ ಒಂದು ಭಾಗವನ್ನು ಅಂಗವಾಡಿ ಮಕ್ಕಳ ಹೆತ್ತವರಿಂದ ಸಂಗ್ರಹ ಮಾಡಿ ನೀಡಲಾಗುತ್ತಿದೆ.
ಶಾಸಕರ ಅನುದಾನ
ತೊಡಿಕಾನ ಅಂಗನವಾಡಿ ಕಟ್ಟಡದ ಕಾಮಗಾರಿ ಹಲವು ವರ್ಷಗಳಿಂದ ಅನುದಾನದ ಕೊರತೆಯಿಂದ ನನೆಗುದಿಗೆ ಬಿದ್ದಿತ್ತು. ಶಾಸಕರ ಅನುದಾನದ ಮೂಲಕ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಒಂದು ವಾರದಲ್ಲಿ ಅಂಗನವಾಡಿ ಕಟ್ಟಡ ಅವರ ಇಲಾಖೆಗೆ ಹಸ್ತಾಂತರ ಮಾಡಲಿದ್ದೇವೆ. ಬಳಿಕ ಇಲಾಖೆಯವರು ಕಟ್ಟಡ ಉದ್ಘಾಟನೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತಾರೆ.
– ಮಣಿಕಂಠ
ಎಂಜಿನಿಯರ್, ಪಂಚಾಯತ್‌ರಾಜ್ ಇಲಾಖೆ